ಕರಾವಳಿ

ಮುಂಬೈನಿಂದ ಕುಂದಾಪುರಕ್ಕೆ ಬರುತ್ತಿದ್ದ ಟಿಟಿ ವಾಹನಕ್ಕೆ ಬೆಂಕಿ: ಪ್ರಯಾಣಿಕರಿಗೆ ನೆರವಾದ ಸಚಿವ ಕೋಟ(Video)

Pinterest LinkedIn Tumblr

ಕುಂದಾಪುರ: ಕುಂದಾಪುರ ಮೂಲದ‌ ಕುಟುಂಬವೊಂದು ಟೆಂಪೋ ಟ್ರಾವೆಲ್ಲರ್ ಮೂಲಕ ಮುಂಬೈನಿಂದ ಊರಿಗೆ ಮರಳುತ್ತಿರುವ ವೇಳೆಯಲ್ಲಿ ಬಸ್ ಆಕಸ್ಮಿಕ ಬೆಂಕಿಗಾಹುತಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ.

ಸೇವಾಸಿಂಧು ಆಪ್ ಮೂಲಕ ಕುಂದಾಪುರದ ಆಲೂರು ಸಮೀಪದ ಹುಯ್ಯಾಣ ಕುಟುಂಬದ ಹನ್ನೊಂದು ಮಂದಿ ಸೋಮವಾರ ಟೆಂಪೋ ಟ್ರಾವೆಲ್ಲರ್ ನಲ್ಲಿ ಮುಂಬೈನ ಭಾಂಡುಪ್ ನಿಂದ ಊರಿಗೆ ಪ್ರಯಾಣ ಬೆಳೆಸಿದ್ದರು. ಮೂರುವರೆ ಗಂಟೆ ಪ್ರಯಾಣ ಮುಗಿಸಿ ಲೋನಾವಾಲಾ ಸಮೀಪಿಸುತ್ತಿದ್ದಂತೆಯೇ ಟಿಟಿ ಸ್ಟೇರಿಂಗ್ ಸಮೀಪದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ಷಣಾರ್ಧದಲ್ಲೇ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ ನೊಳಗಿದ್ದ ಎಲ್ಲರೂ ಅಪಾಯದಿಂದ‌ ಪಾರಾಗಿದ್ದಾರೆ.

ನಿರ್ಜನ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ಬೆಂಕಿ ನಂದಿಸುವ ಪ್ರಕ್ರಿಯೆಯೂ ನಡೆಸಲಾಗಲಿಲ್ಲ. ಕಣ್ಮುಂದೆಯೇ ಟಿಟಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸಚಿವ ಕೋಟ ನೆರವು:
ದಾರಿ ಮಧ್ಯೆ ಬಸ್ ಸುಟ್ಟು ಅತಂತ್ರರಾದ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವಾಗಿದ್ದಾರೆ. ಕೇಶವ್ ಪೂಜಾರಿ ಕುಟುಂಬ ನೇರವಾಗಿ ಸಚಿವ ಕೋಟ ಆಪ್ತ ಸಹಾಯಕ ಪ್ರಕಾಶ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ತಕ್ಷಣವೇ ಸ್ಪಂದಿಸಿದ ಅವರು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಸ್ಥಳೀಯ ಸಂಘಟನೆಗಳ ಮುಖಂಡರಿಗೆ ಕರೆ ಮಾಡಿ ನೆರವಾಗುವಂತೆ ಕೋರಿಕೊಂಡರು. ಸ್ಥಳೀಯ ಪೊಲೀಸರ ಸಹಕಾರದಿಂದ ಅವರನ್ನು ನಿಪ್ಪಾಣಿಯವರೆಗೆ ಬಿಡಲಾಯಿತು. ಅಲ್ಲಿಂದ ಊರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ವ್ಯವಸ್ಥೆ ಮಾಡಿದ ವಾಹನದಲ್ಲಿ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಕೇಶವ ಪೂಜಾರಿ ಕುಟುಂಬ ಊರಿಗೆ ಪ್ರಯಾಣ ಮುಂದುವರೆಸಿದೆ.

ಒಟ್ಟಿನಲ್ಲಿ ಕೇಶವ ಪೂಜಾರಿ ಕುಟುಂಬ ಸೇವಾ ಸಿಂಧು ಆಪ್ ಮೂಲಕ ಕರ್ನಾಟಕ ಪ್ರವೇಶದ ಅನುಮತಿ ಪಡೆದು ಊರಿಗೆ ಮರಳುವ ಸಂತಸದಲ್ಲಿರುವಾಗಲೇ ಆಕಸ್ಮಿಕವಾಗಿ ನಡೆದ ಈ ಘಟನೆ ಕುಟುಂಬಕ್ಕೆ ಶಾಕ್ ಕೊಟ್ಟಿದೆ.

Comments are closed.