ಕರಾವಳಿ

ರಜಾ ತೆಗೆದುಕೊಳ್ಳದೇ ಉಡುಪಿ ಜಿಲ್ಲೆಯ ಅಧಿಕಾರಿಗಳು ಯುದ್ದದಂತೆ ಕೆಲಸ ಮಾಡುತ್ತಿದ್ದಾರೆ: ಸಂಸದೆ ಶೋಭಾ(Video)

Pinterest LinkedIn Tumblr

ಕುಂದಾಪುರ: ಕ್ವಾರಂಟೈನ್ ಕೇಂದ್ರಗಳಿಂದಾಗಿ ಅಲ್ಲಲ್ಲಿಯೇ ವೈರಸ್ ಹರಡುವುದನ್ನು ತಡೆಗಟ್ಟಲು ತಮ್ಮದೆ ವ್ಯವಸ್ಥೆಯಲ್ಲಿ ಇರುವ ಒಂಟಿ ಮನೆಗಳಲ್ಲಿ ಸರ್ಕಾರದ ನಿಯಮಾವಳಿಯಂತೆ ಹೋಮ್ ಕ್ವಾರಂಟೈನ್ ಆಗಲು ಅವಕಾಶ ನೀಡುವಂತೆ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ಅನೇಕರು ಕೇಳಿಕೊಂಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ಮುಖ್ಯಕಾರ್ಯದರ್ಶಿಯವರಿಗೆ ಮನವಿ ಮಾಡಿಕೊಂಡಿರುವುದಾಗಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಕೋವಿಡ್-19 ತಡೆ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು.

ಹೊರರಾಜ್ಯಗಳಿಂದ ಜನರು ನಮ್ಮ ಜಿಲ್ಲೆಗೆ ಬಂದರೆ ಹಸಿರು ವಲಯವಾಗಿದ್ದ ಜಿಲ್ಲೆ ಕೆಂಪು ವಲಯವಾಗುತ್ತದೆ ಎನ್ನುವ ಅರಿವಿದ್ದರೂ ಕೂಡ ನಮ್ಮವರಿಗಾಗಿ ಹಾಗೂ ಮಾನವೀಯತೆಯ ನೆಲೆಯಿಂದ ಸರ್ಕಾರಕ್ಕೆ ಮನವಿ ಮಾಡಿ ನಮ್ಮವರನ್ನು ಉಡುಪಿ ಜಿಲ್ಲೆಗೆ ಬರಲು ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಈಗಾಗಲೇ ಸಾಕಷ್ಟು ಮಂದಿ ಇದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಶಾಲಾ-ಕಾಲೇಜು, ಹಾಸ್ಟೇಲ್, ವಸತಿಗೃಹಗಳು ಖಾಲಿಯಾಗಿವೆ. ಹೀಗಾಗಿ ಮಹಾರಾಷ್ಟ್ರದಿಂದ ಬರುವವರಿಗೆ ತಾತ್ಕಾಲಿಕವಾಗಿ ತಡೆಯೊಡಿದ್ದೇವೆ. ಗಲ್ಫ್ ಹಾಗೂ ಬೇರೆ ರಾಷ್ಟ್ರಗಳಿಂದ ಬರುವವರನ್ನು ಆಯಾ ವಿಮಾನ ನಿಲ್ದಾಣ ಕೇಂದ್ರಗಳ ಸಮೀಪದಲ್ಲಿಯೇ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ವೈರಸ್ ಹೇಗೆ ಹರಡುತ್ತದೆ ಎನ್ನುವುದು ಇನ್ನೂ ಸ್ವಷ್ಟವಾಗಿಲ್ಲ. ಕೋವಿಡ್ ಕಾಣಿಸಿಕೊಂಡವರೆಲ್ಲ ಸಾವಿಗೀಡಾಗಿಲ್ಲ. ನಮ್ಮ ದೇಶದಲ್ಲಿ ಶೇಕಡಾ ೯೭ರಷ್ಟು ಜನ ಗುಣಮುಖರಾಗಿದ್ದಾರೆ ಎಂದರು.

2 ಕೋಟಿ ವೆಚ್ಚದ ಲ್ಯಾಬ್‌ಗೆ ಸಿದ್ದತೆ: ಜಿಲ್ಲಾಧಿಕಾರಿ ಜಿ.ಜಗದೀಶ್
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಜಿಲ್ಲೆಗೆ ಹೊರ ರಾಜ್ಯದಿಂದ ಬಂದಿರುವ 7872 ಜನರಲ್ಲಿ 6800 ಜನ ಮಹಾರಾಷ್ಟ್ರದ ರೆಡ್ ಝೋನ್‌ನಿಂದ ಬಂದಿದ್ದಾರೆ. ೪೫೦ ಮಂದಿ ತೆಲಂಗಾಣದಿಂದ ಬಂದಿದ್ದಾರೆ. ಹೊರ ರಾಜ್ಯದಿಂದ ಬರುವವರಲ್ಲಿ ಶೇ.10 ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಉಡುಪಿ, ಕುಂದಾಪುರ, ಉದ್ಯಾವರ ಹಾಗೂ ಕಾರ್ಕಳದಲ್ಲಿ 500 ಹಾಸಿಗೆಗಳಿಗೆ ಅವಕಾಶವಿರುವ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೋವಿಡ್ ಆಸ್ಪತ್ರೆಗಳಿಗಾಗಿ ಪ್ರತ್ಯೇಕ ವೈದ್ಯರು ಹಾಗೂ ಸಿಬ್ಬಂದಿಗಳ ನಿಯೋಜನೆ ಮಾಡಲಾಗುತ್ತಿದೆ. ಐ‌ಎಂಎ ಸಂಘಟನೆಯ ನೆರವನ್ನು ಪಡೆದುಕೊಳ್ಳಲಾಗುತ್ತದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 12 ತಜ್ಞ ವೈದ್ಯರಿರುವ ಸಮಿತಿ ರಚಿಸಲಾಗಿದ್ದು, ಕಾಲ ಕಾಲಕ್ಕೆ ಅವರಿಂದ ಸಲಹೆ ಪಡೆದುಕೊಳ್ಳಲಾಗುತ್ತಿದೆ. ಪ್ರಸ್ತುತ ವೆನ್ಲಾಕ್, ಯನಪೋಯಾ ವೈದ್ಯಕೀಯ ಕಾಲೇಜು ಹಾಗೂ ಮಣಿಪಾಲದ ಕೆ‌ಎಂಸಿಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಯುತ್ತಿದೆ. ಪ್ರತಿ ದಿನ ಗರಿಷ್ಠ 400 ಮಂದಿಯ ಪರೀಕ್ಷಾ ವರದಿಯನ್ನು ನಿರೀಕ್ಷೆ ಮಾಡಲಾಗಿದೆ. ಜಿಲ್ಲೆಯ ಬೇಡಿಕೆಗೆ ಪೂರಕವಾಗಿ 2 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದರು.

ಕ್ವಾರಂಟೈನ್‌ವಾಸಿಗಳಿಗೆ ಮನೆಯಿಂದ ಊಟೋಪಚಾರ ವ್ಯವಸ್ಥೆಗಳಿಗೆ ಕಡಿವಾಣ ಹಾಕಿ ಎಂದು ಸೂಚನೆ ನೀಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು, ಜಿಲ್ಲೆಗೆ ಬಂದವರಲ್ಲಿ ಶೇ.೫೦ ಕ್ಕಿಂತ ಹೆಚ್ಚು ಮಂದಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನವರಾಗಿದ್ದಾರೆ. ಜಿಲ್ಲಾಡಳಿತ ಇವರಿಗೆಲ್ಲ ಲಭ್ಯ ಅವಕಾಶಗಳಲ್ಲಿ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೆಲವರು ದೂರವಾಣಿಯಲ್ಲಿ ಮನಸ್ಸಿಗೆ ಬೇಸರವಾಗುವ ರೀತಿಯಲ್ಲಿಯೂ ಮಾತನಾಡಿದ್ದಾರೆ, ಆದರೆ ಅವರ ನೋವಿನ ಸಮಯದಲ್ಲಿ ನಾವೆಲ್ಲ ಸಹನೆ ವಹಿಸಿಕೊಳ್ಳಬೇಕಾಗಿದೆ. ಕೊಲ್ಲೂರು ಸೇರಿದಂತೆ ಕೆಲವು ಕ್ವಾರಂಟೈನ್ ಕೇಂದ್ರಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಉಪ್ಪುಂದದಿಂದ ಬಂದಿದ್ದ ಸ್ವಯಂ ಸೇವಕರ ಗುಂಪು ಕೊಲ್ಲೂರಿನಲ್ಲಿ ಊಟೋಪಚಾರ ವ್ಯವಸ್ಥೆ ಮಾಡುವಲ್ಲಿ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ ಅವರು ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸಹಕಾರವೂ ಅತ್ಯಂತ ಅಗತ್ಯವಾಗಿದೆ ಎಂದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ಕೆ.ರಾಜು, ಎ‌ಎಸ್‌ಪಿ ಹರಿರಾಂಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ತಹಶೀಲ್ದಾರ್‌ಗಳಾದ ತಿಪ್ಪೇಸ್ವಾಮಿ, ಕಿರಣ್ ಗೊರಯ್ಯ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಶ್ರೀಲತಾ ಸುರೇಶ್‌ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ರಾಜ್ಯ ಬಿಜೆಪಿ ಮುಖಂಡ ಕಿರಣ್ ಕುಮಾರ ಕೊಡ್ಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಶಿಕ್ಷಣಾಧಿಕಾರಿ ಅಶೋಕ ಕಾಮತ್, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಮುಖರಾದ ಕೆ.ಮೋಹನ್‌ದಾಸ್ ಶೆಣೈ, ಸುರೇಶ್ ಶೆಟ್ಟಿ ಕಾಡೂರು, ದಿವಾಕರ ಪೂಜಾರಿ ಕಡ್ಗಿಮನೆ, ಸಂತೋಷ್ ಶೆಟ್ಟಿ, ಅಶ್ವಿನಿ ಪ್ರದೀಪ್, ಅರಣ್‌ಬಾಣಾ, ಪಿ.ಗುಣರತ್ನಾ, ಶ್ವೇತಾ ಸಂತೋಷ್ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.