ಉಡುಪಿ: ಮನೆ ಸಮೀಪದ ಬಾವಿಗೆ ಆಯ ತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿ ನಡೆದಿದ್ದು ವಾಲ್ಟರ್ ಡಿ’ಆಲ್ಮೇಡಾ(52) ಮೃತ ದುರ್ದೈವಿ.
ಈ ಸಂದರ್ಭ ಸಹೋದರನ ಕಾಪಾಡಲು ಬಾವಿಗೆ ಇಳಿದ ಸೋದರ ಅಲ್ಬನ್ ಅಲ್ಮೆಡಾ ಕೂಡ ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
20 ಅಡಿ ಆಳದ 5 ಅಡಿ ಅಗಲವಿರುವ ಬಾವಿ ಇದಾಗಿದ್ದು ಆಯತಪ್ಪಿ ವಾಲ್ಟರ್ ಅಲ್ಮೆಡಾ ಬಿದ್ದಿದ್ದು ಇಕ್ಕಟ್ಟಾದ ಬಾವಿ ಆದ್ದರಿಂದ ಆಮ್ಲಜನಕದ ಕೊರತೆ ಇತ್ತು. ಬಾವಿಗೆ ಬಿದ್ದ ಸೋದರನನ್ನು ಕಾಪಾಡಲು ಇಳಿದ ಅಲ್ಬನ್ ಕೂಡ ಅಸ್ವಸ್ಥಗೊಂಡಿದ್ದು ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಇಬ್ಬರನ್ನು ಮೇಲಕ್ಕೆತ್ತಿದ್ದು ಅಷ್ಟರಲ್ಲಾಗಲೇ ವಾಲ್ಟರ್ ಮೃತಪಟ್ಟಿದ್ದು ಅಂಬುಲೆನ್ಸ್ ಮೂಲಕ ಅಲ್ಬನ್ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಹೋದರರಿಬ್ಬರು ಪರಿಶ್ರಮಿಗಳಾಗಿದ್ದು ಮೊದಲು ಹೋಟೆಲ್ ಕೆಲಸ ಮಾಡಿಕೊಂಡಿದ್ದು ಲಾಕ್ ಡೌನ್ ಬಳಿಕ ಊರಿಗೆ ಆಗಮಿಸಿ ಕೂಲಿ ಕೆಲಸ ಮಾಡಿಕೊಂಡಿದ್ದರು. ವಾಲ್ಟರ್ ಡಿ ಆಲ್ಮೇಡಾರಿಗೆ ಪತ್ನಿ, ಹಾಗೂ ಓರ್ವ ಪುತ್ರಿ ಇದ್ದಾರೆ.
ಸ್ಥಳಕ್ಕೆ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಹ ಠಾಣಾಧಿಕಾರಿ ಕೊರಗ ನಾಗ ಮೊಗೇರ, ಪ್ರಮುಖ ಅಗ್ನಿಶಾಮಕ ಪ್ರದೀಪ್ ನಾಯ್ಕ, ಬಿ. ಸುಂದರ, ಪೈರ್ ಮನ್ ಆಶಾ, ಪಿ. ಗೋಪಾಲ, ಮಹೇಶ್ ಶೆಟ್ಟಿ, ಪದ್ಮನಾಭ ಕಾಂಚನ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.