ಮೊದಲಿನಿಂದಲೂ ನೇರ ನಡೆ-ನಡಿಯ ಕಾರಣಕ್ಕಾಗಿ ಹೆಸರಾದವರು ನಟಿ ಕಂಗನಾ ರಣಾವತ್. ಬಾಲಿವುಡ್‌ನಲ್ಲಿ ಇರುವ ತಾರತಮ್ಯದ ಬಗ್ಗೆ ಅವರು ಸದಾ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಅದೇ ರೀತಿ ಈಗ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆಯೂ ಕಟು ಮಾತುಗಳನ್ನು ಆಡಿದ್ದಾರೆ. ಅವರ ಪ್ರಕಾರ ಇದು ಆತ್ಮಹತ್ಯೆ ಅಲ್ಲ; ಪ್ಲ್ಯಾನ್ಡ್ ಮರ್ಡರ್!
ಕಂಗನಾ ಈ ರೀತಿ ನೇರವಾಗಿ ಆರೋಪ ಹೊರಿಸಲು ಕಾರಣ ಇದೆ. ಮೇಲ್ನೋಟಕ್ಕೆ ಕಲರ್‌ಫುಲ್ ಆಗಿ ಕಾಣಿಸುವ ಬಾಲಿವುಡ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಅವರು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಫಿಲ್ಮೀ ಕುಟುಂಬದಿಂದ ಬಂದವರಿಗೆ ಒಂದು ನ್ಯಾಯ, ಹೊರಗಡೆಯಿಂದ ಬಂದವರಿಗೆ ಮತ್ತೊಂದು ನ್ಯಾಯ ಎಂಬ ವಾತಾವರಣ ಹಿಂದಿ ಚಿತ್ರರಂಗದಲ್ಲಿ ಇದೆ ಎಂದು ಅವರು ಆರೋಪಿಸಿದ್ದಾರೆ.
7 ವರ್ಷಗಳ ಸಿನಿಮಾ ಜರ್ನಿಯಲ್ಲಿ ಸುಶಾಂತ್ ಒಳ್ಳೆಯ ಚಿತ್ರಗಳನ್ನು ಮಾಡಿದ್ದರು. ಅಂಥ ನಟನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಗತಿ ಬರುತ್ತದೆ ಎಂದರೆ ಅದರ ಹಿಂದಿ ಬಲವಾದ ಕಾರಣ ಇದೆ ಎನ್ನುತ್ತಾರೆ ಕಂಗನಾ. ತಮ್ಮ ಅಭಿಪ್ರಾಯವನ್ನು ವಿಡಿಯೋ ಮೂಲಕ ಅವರು ವ್ಯಕ್ತಪಡಿಸಿದ್ದಾರೆ. ಅವರ ಈ ಮಾತಿನ ಬಗ್ಗೆ ಪರ-ವಿರೋಧ ಕೇಳಿಬರುತ್ತಿದೆ.
ಆರೋಪ ಹೊರಿಸುತ್ತಿರುವುದು ಸರಿಯಲ್ಲ
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಅನೇಕ ವಿಚಾರಗಳನ್ನು ಕಂಗನಾ ಹಂಚಿಕೊಂಡಿದ್ದಾರೆ. ‘ಸುಶಾಂತ್ ಮಾನಸಿಕವಾಗಿ ದುರ್ಬಲವಾಗಿದ್ದರು ಎಂಬ ಮಾತು ಕೇಳಿಬರುತ್ತಿದೆ. ಆದರೆ ಅದು ನಿಜವಲ್ಲ. ರ‍್ಯಾಂಕ್ ವಿದ್ಯಾರ್ಥಿ ಆಗಿದ್ದವರು ಮಾನಸಿಕವಾಗಿ ದುರ್ಬಲವಾಗಿರಲು ಸಾಧ್ಯವಿಲ್ಲ. ತಮ್ಮ ಸಮಸ್ಯೆ ಏನು ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಸುಶಾಂತ್ ಹೇಳಿಕೊಂಡಿದ್ದರು. ಅವರಿಗೆ ನಿಜಕ್ಕೂ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಅದರ ಬದಲು ಅವರ ಮಾನಸಿಕ ಆರೋಗ್ಯ ಚೆನ್ನಾಗಿರಲಿಲ್ಲ ಎಂದು ಆರೋಪ ಹೊರಿಸುತ್ತಿರುವುದು ಸರಿಯಲ್ಲ’ ಎಂದು ಕಂಗನಾ ಹೇಳಿದ್ದಾರೆ. ಇದರ ಜೊತೆ ಬಾಲಿವುಡ್‌ನ ಅನೇಕ ಹುಳುಕುಗಳನ್ನು ಅವರು ಬಯಲಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಕಂಗನಾ ಮಾತಿಗೆ ಅನೇಕರು ಸಹಮತ ಸೂಚಿಸಿದ್ದಾರೆ.
’ಗಲ್ಲಿ ಬಾಯ್’ಗೆ ಪ್ರಶಸ್ತಿ ಸಿಕ್ಕಿದ್ದಕ್ಕೂ ಸುಶಾಂತ್ ಸಾವಿಗೂ ಸಂಬಂಧ?
‘ಸುಶಾಂತ್‌ಗೆ ಯಾವುದೇ ಗಾಡ್‌ಫಾದರ್ ಇರಲಿಲ್ಲ. ತಮ್ಮ ಸಿನಿಮಾಗಳನ್ನು ಜನರು ನೋಡದಿದ್ದರೆ ಬಾಲಿವುಡ್‌ನಿಂದಲೇ ತಮ್ಮನ್ನು ಹೊರಹಾಕುತ್ತಾರೆ ಎಂಬ ಆತಂಕವನ್ನು ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಇದೇ ಪರಿಸ್ಥಿತಿ ಒಬ್ಬ ಸ್ಟಾರ್ ಕುಟುಂಬದ ಕಲಾವಿದನಿಗೆ ಬಂದಿದ್ದರೆ ಹೇಗಿರುತ್ತಿತ್ತು? 7 ವರ್ಷದ ವೃತ್ತಿಜೀವನದಲ್ಲಿ ಸುಶಾಂತ್ ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಬಾಲಿವುಡ್‌ನವರು ಮನ್ನಣೆ ನೀಡಲಿಲ್ಲ. ‘ಕೈ ಪೋ ಚೆ’, ‘ಎಂ.ಎಸ್. ಧೋನಿ: ದ ಅನ್‌ಟೋಲ್ಡ್ ಸ್ಟೋರಿ’, ‘ಛಿಛೋರೆ’ ರೀತಿಯ ಒಳ್ಳೆಯ ಚಿತ್ರಗಳನ್ನು ಮಾಡಿದರೂ ಅವರಿಗೆ ಪ್ರಶಸ್ತಿಗಳು ಸಿಗುವುದಿಲ್ಲ ಯಾಕೆ? ನನ್ನ ಪ್ರಕಾರ ಛಿಛೋರೆ ಬೆಸ್ಟ್ ಸಿನಿಮಾ. ಬೆಸ್ಟ್ ನಿರ್ದೇಶಕರು ಅದಕ್ಕೆ ಕೆಲಸ ಮಾಡಿದ್ದರು. ಅದರ ಬದಲು ‘ಗಲ್ಲಿ ಬಾಯ್’ ರೀತಿಯ ಚಿತ್ರಕ್ಕೆ ಎಲ್ಲ ಪ್ರಶಸ್ತಿ ಸಿಗುತ್ತದೆ’ ಎಂದು ಕಂಗನಾ ಗುಡುಗಿದ್ದಾರೆ.
ಪ್ಲ್ಯಾನ್ಡ್ ಮರ್ಡರ್ ಎನ್ನಲು ಕಾರಣ ಏನು?
ಹೀಗೆ ಬಾಲಿವುಡ್‌ನಲ್ಲಿ ಪ್ರತಿಭೆಗಳನ್ನು ತುಳಿಯುವವರ ಬಗ್ಗೆ ಕಂಗನಾ ಕಿಡಿಕಾರಿದ್ದಾರೆ. ‘ನಮಗೆ ನಿಮ್ಮ ಸಿನಿಮಾಗಳಲ್ಲಿ ಅವಕಾಶ ಬೇಡವೇ ಬೇಡ. ನಾವೇ ಸಿನಿಮಾಗಳನ್ನು ಮಾಡುತ್ತೇವೆ. ಆದರೆ ನಮಗೆ ಮನ್ನಣೆ ಯಾಕೆ ಸಿಗುವುದಿಲ್ಲ. ನಾನೇ ಸಿನಿಮಾ ನಿರ್ದೇಶನ ಮಾಡಿ ಗೆದ್ದರೆ, ಅದನ್ನು ಫ್ಲಾಪ್ ಸಿನಿಮಾ ಎಂದು ಘೋಷಿಸುತ್ತೀರಿ. ನನ್ನ ಮೇಲೆ 6 ಕೇಸ್ ಹಾಕುತ್ತೀರಿ, ನನ್ನನ್ನು ಜೈಲಿಗೆ ಕಳಿಸುವ ಪ್ರಯತ್ನ ಮಾಡುತ್ತೀರಿ. ಸುಶಾಂತ್ ವ್ಯಸನಿ ಆಗಿದ್ದರು ಎನ್ನುವಂತಹ ಜನ ಇದ್ದಾರೆ. ಅದೇ ಸಂಜಯ್ ದತ್ ವ್ಯಸನಿಯಾದರೆ ಕೆಲವರಿಗೆ ಕ್ಯೂಟ್ ಎನಿಸುತ್ತದೆ. ನಿಮ್ಮ ವೃತ್ತಿಜೀವನ ಕಷ್ಟದಲ್ಲಿದೆ. ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುಂತಹ ಆಲೋಚನೆಯನ್ನು ಇಂಥವರೇ ನಮ್ಮ ಮನಸ್ಸಿನಲ್ಲಿ ಬಿತ್ತಲು ಪ್ರಯತ್ನಿಸುತ್ತಾರೆ. ಹಾಗಾಗಿ ನನ್ನ ಪ್ರಕಾರ ಸುಶಾಂತ್‌ರದ್ದು ಆತ್ನಹತ್ಯೆ ಅಲ್ಲ. ಪ್ಲ್ಯಾನ್ಡ್ ಮರ್ಡರ್’ ಎಂದಿದ್ದಾರೆ ಕಂಗನಾ!
ಸುಶಾಂತ್ ಮಾಡಿದ ತಪ್ಪೇನು ಗೊತ್ತಾ?
ಗಾಡ್‌ಫಾದರ್ ಇಲ್ಲದವರನ್ನು ತುಳಿಯುವ ಜನ ಬಾಲಿವುಡ್‌ನಲ್ಲಿ ಇದ್ದಾರೆ. ಅಂಥವರಿಂದಲೇ ಸುಶಾಂತ್ ಸಿಂಗ್ ರಜಪೂತ್‌ಗೆ ಈ ರೀತಿ ಆಯಿತು. ಅಂಥವರ ಮಾತಿಗೆ ಬೆಲೆ ಕೊಟ್ಟಿದ್ದೇ ಸುಶಾಂತ್ ಮಾಡಿದ ತಪ್ಪು ಎಂಬುದು ಕಂಗನಾ ರಣಾವತ್ ವಾದ. ‘ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುವಂತಹ ರೀತಿಯಲ್ಲಿ ಮಾತುಗಳನ್ನು ಜನರು ಆಡುತ್ತಾರೆ. ನೀವು ಯೋಗ್ಯರಲ್ಲ ಎಂಬುದನ್ನು ಪದೇ ಪದೇ ಹೇಳುತ್ತಾರೆ. ಅಂಥವರ ಮಾತನ್ನು ಸುಶಾಂತ್ ಒಪ್ಪಿಕೊಂಡರು. ತಾಯಿ ಹೇಳಿದ ಮಾತನ್ನು ಮರೆತುಬಿಟ್ಟರು. ಸುಶಾಂತ್ ದುರ್ಬಲ ಮನಸ್ಸಿನವರು ಎಂದು ಜನ ಈಗ ಇತಿಹಾಸ ಬರೆಯುತ್ತಾರೆ. ಹಾಗೆ ಆಗಬಾರದು. ನಮ್ಮ ಇತಿಹಾಸ ನಾವೇ ಬರೆಯುತ್ತೇವೆ’ ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.