ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಗೋವು ಕಳ್ಳತನ , ಮಾಂಸ ಸಾಗಾಟದಂತಹ ಅಕ್ರಮ ಚಟುವಟಿಕೆ ನಡೆಯುತ್ತಿದ್ದು ಜಿಲ್ಲಾ ಎಸ್ಪಿ ಸಹಿತ ಇಲಾಖೆಯ ಉನ್ನತಾಧಿಕಾರಿಗಳಿಗೆ ಈ ವಿಚಾರ ಗಮನಕ್ಕೆ ತಂದಿದ್ದೇವೆ. ಶಾಂತಿ ಕದಡದೇ ಕಾನೂನು ಚೌಕಟ್ಟಿನ ನೆಲೆಯಡಿಯಲ್ಲಿ ಹಿಂದೂಪರ ಸಂಘಟನೆ ಕೆಲಸ ಮಾಡುತ್ತಿದ್ದು ಅವರು ಮಾರಕಾಯುಧ ಹಿಡಿದು ಭಯೋತ್ಪಾದಕ ಕೆಲಸ ಮಾಡುವುದನ್ನು ಪೊಲೀಸ್ ಇಲಾಖೆ ತಡೆಯಬೇಕು ಎಂದು ಭಜರಂಗದಳ ಕರ್ನಾಟಕ ಪ್ರಾಂತ ದಕ್ಷಿಣ ವಿಭಾಗ ಸಂಯೋಜಕ ಸುನೀಲ್ ಕೆ.ಆರ್. ಸಿಡಿದೆದಿದ್ದಾರೆ.
ಗುರುವಾರ ತಡರಾತ್ರಿ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಲ್ಲೂರು ಪಾರ್ಥಿಕಟ್ಟೆ ಬಳಿಯಲ್ಲಿ ಅಕ್ರಮ ಜಾನುವಾರು ಮಾಂಸ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಡಿಕ್ಕಿಹೊಡೆದು ಗಂಭೀರ ಗಾಯಗೊಂಡ ಇಬ್ಬರು ಯುವಕರನ್ನು ಶುಕ್ರವಾರದಂದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿದ ಬಳಿಕ ಅವರು ಮಾತನಾಡಿದರು.
ಕುಂದಾಪುರ ಉಪವಿಭಾಗ ವ್ಯಾಪ್ತಿ ಸೇರಿದಂತೆ ಉಡುಪಿ ಜಿಲ್ಲೆಯ ಹಲವೆಡೆ ಗೋ ಅಕ್ರಮ ಸಾಗಾಟ ನಡೆಯುತ್ತಿದೆ. ತಲವಾರು ತೋರಿಸಿ ಕೊಟ್ಟಿಗೆಗೆ ನುಗ್ಗುವುದು ಸೇರಿ ಗೋ ಹತ್ಯೆ, ಗೋ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ದುಷ್ಕರ್ಮಿಗಳು ಮಾರಕಾಯುಧ ತೋರಿಸಿ ಪೊಲೀಸರ ಸಮೇತ ಹಿಂದೂಪರ ಸಂಘಟನೆಯನ್ನು ಬೆದರಿಸುವುದು ಮತ್ತು ಅವರವರ ಹಬ್ಬ-ಆಚರಣೆನೆಪದಲ್ಲಿ ಇತರರ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ಕೆಲಸ ಆಗಬಾರದು. ನಾವು ಕಾನೂನಿಗೆ ಗೌರವ ಕೊಡುತ್ತೇವೆ. ನಾವು ಕೂಡ ದೇಶ, ಹಿಂದೂ ಶ್ರದ್ಧಾಬಿಂಧುಗಳ ರಕ್ಷೆಣೆಗೆ ಯಾವುದೇ ತ್ಯಾಗಕ್ಕೂ ಸಿದ್ಧ. ಸಂಘಟನೆಯವರು ವಹಿಸುವ ತಾಳ್ಮೆ, ಸಹನೆ ನಮ್ಮ ದೌರ್ಬಲ್ಯವಲ್ಲ. ಪೊಲೀಸ್ ಇಲಾಖೆಯಂತೆಯೇ ಸಮಾಜದಲ್ಲಿ ಶಾಂತಿ ನೆಲಸಬೇಕೆಂಬ ಚಿಂತನೆ ಹಿಂದೂಪರ ಸಂಘಟನೆಯಲ್ಲಿಯೂ ಇದೆ.
ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್, ಬೀಟ್ ವ್ಯವಸ್ಥೆ ಹೆಚ್ಚಿಸಬೇಕು. ಇದು ಹಿಂದೂ ಸಂಘಟನೆಯವರ ಕೊನೆಯ ಆಗ್ರಹ ಮತ್ತು ಬೇಡಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಬೀದಿಗಿಳಿಯುವುದಕ್ಕೆ ಆಸ್ಪದ ಕೊಡಬಾರದು ಎಂದು ಸುನೀಲ್ ಕೆ.ಆರ್. ಎಚ್ಚರಿಸಿದರು.
ವಿಶ್ವಹಿಂದೂ ಪರಿಷತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು, ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್, ವಿ.ಹಿಂ.ಪ. ವಿಶೇಷ ಸಂಪರ್ಕ ಪ್ರಮುಖ್ ಗಿರೀಶ್ ಕುಂದಾಪುರ, ಭಜರಂಗದಳ ಉಡುಪಿ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ, ಭಜರಂಗದಳ ಜಿಲ್ಲಾ ಗೋ ರಕ್ಷಾ ಪ್ರಮುಖ್ ನಾಗರಾಜ ಬೆಟ್ಟಿನ್ ಕೋಟೇಶ್ವರ, ವಿ.ಹಿಂ.ಪ. ಗೋ ರಕ್ಷಾ ಜಿಲ್ಲಾ ಪ್ರಮುಖ್ ಸತೀಶ್ ಕಾಮತ್, ಭಜರಂಗದಳ ಕುಂದಾಪುರ ತಾಲೂಕು ಸಂಚಾಲಕ ಸುಧೀರ್ ಮೆರ್ಡಿ, ಸಂಘಟನೆಯ ಪ್ರಮುಖರಾದ ವಸಂತ್ ಸಂಗಮ್, ಗುರುರಾಜ್ ಸಂಗಮ್, ಪ್ರಥ್ವಿರಾಜ್, ಸುರೇಂದ್ರ ಸಂಗಮ್ ಮೊದಲಾದವರು ಉಪಸ್ಥಿತರಿದ್ದರು.
Comments are closed.