ನವದೆಹಲಿ: ಮನುಷ್ಯನ ಮುಖವನ್ನು ಹೋಲುವ ಈ ಪ್ರಾಣಿಯನ್ನು ನೀವು ಎಲ್ಲಿಯಾದರೂ ಕಂಡಿದ್ದೀರಾ…? ಈ ಫೋಟೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪ್ರಾಣಿಯ ಬಗ್ಗೆ ಜನ ಭಯ ಭೀತರಾಗುತ್ತಿದ್ದಾರೆ.
ಆದರೆ ಮಾನವನ ಮುಖ ಹೋಲುವ ನಾಲ್ಕು ಕಾಲುಗಳ ವಿಚಿತ್ರ ಪ್ರಾಣಿ ಇರುವುದಾದರೂ ನಿಜಾನಾ…? ಇದೊಂದು ಅಪಾಯಕಾರಿ ಪ್ರಾಣಿ ಎಂದು ಹೇಳಲಾಗಿದೆ. ಕೆಲ ನೆಟ್ಟಿಗರು ಇದೊಂದು ಏಲಿಯನ್ ಇರಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ….ಅಷ್ಟಕ್ಕೂ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಸತ್ಯಾಸತ್ಯತೆ ಏನು…?
ಹಿತೇಶ್ ಭಟಿ ಎಂಬ ಟ್ವಿಟರ್ ಬಳಕೆದಾರರು ವಿಚಿತ್ರ ಜೀವಿಯ ಫೋಟೋವನ್ನು ಪೋಸ್ಟ್ ಮಾಡಿಕೊಂಡು, ಯಾರಿಗಾದರೂ ಈ ಪ್ರಾಣಿಯ ಬಗ್ಗೆ ಗೊತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇದೇ ಫೋಟೋವನ್ನು ದೀಪಕ್ ಅಶರ್ ಎಂಬ ಫೇಸ್ಬುಕ್ ಬಳಕೆದಾರ ಶೇರ್ ಮಾಡಿಕೊಂಡಿದ್ದು, ಸೆಪ್ಟೆಂಬರ್ 2ರಂದು ಈ ಪ್ರಾಣಿ ಕಾಣಿಸಿಕೊಂಡಿತು. ಇದು ಏಲಿಯನಾ? ಎಂದು ಪ್ರಶ್ನಿಸಿದ್ದಾರೆ. ಇದೀಗ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ತೆಲುಗು ಮಾಧ್ಯಮವೊಂದು ಸಹ ಸುಳ್ಳು ವರದಿಯನ್ನು ಮಾಡಿ, ತೆಲಂಗಾಣದ ಜಗತಿಯಲ್ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ ಸುತ್ತಲೂ ಈ ವಿಚಿತ್ರ ಪ್ರಾಣಿ ತಿರುಗಾಡುತ್ತಿದೆ ಎಂದು ಹೇಳಿದೆ.
ಇದರ ಸತ್ಯಾಸತ್ಯತೆ ಏನು…?
ವೈರಲ್ ಫೋಟೋ ಹಿಂದಿನ ಅಸಲಿಯತ್ತು ಏನೆಂಬುದನ್ನು ತಿಳಿಯಲು ನ್ಯೂಸ್ ಮೀಟರ್ ವೆಬ್ಸೈಟ್ ಫ್ಯಾಕ್ಟ್ಚೆಕ್ ನಡೆಸಿದಾಗ ಪ್ರಾಣಿ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಬಯಲಾಗಿದೆ. ಗೂಗಲ್ ರಿವರ್ಸ್ ಸರ್ಚ್ ಇಂಜಿನ್ ಸಹಾಯದಿಂದ ಫೋಟೋವನ್ನು ಹುಡುಕಾಡಿದಾಗ “ಲೈರಾ ಮಾಗನುಕೊ ಅವರಿಂದ ನಂಬಲಾಗದ ತೆವಳುವ ಹೈಪರ್ ರಿಯಲಿಸ್ಟಿಕ್ ಕ್ರಿಯೇಚರ್ಸ್” ಎಂಬ ಬ್ಲಾಗ್ನಲ್ಲಿ ಇದೇ ಪ್ರಾಣಿಯ ಫೋಟೋವನ್ನು ಬಳಸಿಕೊಳ್ಳಲಾಗಿದೆ.
ಅಂದಹಾಗೆ ಲೈರಾ ಮಾಗನುಕೊ ಅವರು ಇಟಲಿಯ ಮಿಲನ್ ನಗರದ ಹೈಪರ್-ರಿಯಲಿಸ್ಟಿಕ್ ಸಿಲಿಕಾನ್ ಶಿಲ್ಪಿಯಾಗಿದ್ದಾರೆ. ತಮ್ಮ ಜೀವನಚರಿತ್ರೆಯಲ್ಲಿ ಹೇಳಿರುವ ಪ್ರಕಾರ ಹಲವಾರು ಪ್ರಯೋಗಗಳ ಬಳಿಕ ನನ್ನ ಶಿಲ್ಪಗಳನ್ನು ದೃಷ್ಟಿಗೋಚರವಾಗಿ ಮತ್ತು ಸ್ಪರ್ಶಕ್ಕೆ ಹೆಚ್ಚು ನೈಜವಾಗಿಸುವ ಸಾಮರ್ಥ್ಯ ಸಿಲಿಕಾನ್ಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಹೀಗಾಗಿ ವೈರಲ್ ಆಗಿರುವ ಚಿತ್ರವು ನೈಜವಾದುದ್ದಲ್ಲ. ಅದನ್ನು ಸಿಲಿಕಾನ್ನಿಂದ ಮಾಡಲಾಗಿದೆ. ಲೈರಾ ಮಾಗನುಕೊ ಅವರು ತಮ್ಮ ಶಿಲ್ಪಗಳಿಗೆ ಸಿಲಿಕಾನ್ ಮೂಲಕ ಹೆಚ್ಚು ರಿಲಯಲಿಸ್ಟಿಕ್ ಲುಕ್ ನೀಡುತ್ತಾರೆ. ಅಂದಹಾಗೆ ವೈರಲ್ ಆಗಿರುವ ಶಿಲ್ಪಕಲೆಯನ್ನು ಅಮೆರಿಕ ಎಟ್ಸಿಯಲ್ಲಿ 8,088.64 ಡಾಲರ್ ಮಾರಾಟಕ್ಕೆ ಇಡಲಾಗಿದೆ ಮತ್ತು ಶಿಲ್ಪಕ್ಕೆ ‘ಅರ್ಮಡಿಲೊ’ ಎಂದು ಹೆಸರಿಸಲಾಗಿದೆ.
ಇನ್ನು ಲೈರಾ ಮಾಗನುಕೊ ಅವರ ಇನ್ಸ್ಟಾಗ್ರಾಂ ಖಾತೆಯಲ್ಲೂ ಇದೇ ಫೋಟೋವನ್ನು ಜುಲೈ 2019ರಲ್ಲಿ ಪೋಸ್ಟ್ ಮಾಡಲಾಗಿದೆ. ಹೀಗಾಗಿ ಸದ್ಯ ಹರಿದಾಡುತ್ತಿರುವ ಸುದ್ದಿಗೂ ಫೋಟೋಗೂ ಯಾವುದೇ ಸಂಬಂಧವಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ.
Comments are closed.