ಕರಾವಳಿ

ಕುಂದಾಪುರ ಪೊಲೀಸ್ ಠಾಣೆಗೆ ಜ್ಯೂನಿಯರ್ ಕಾಲೇಜಿನ ಹೈಸ್ಕೂಲ್ NSS ವಿದ್ಯಾರ್ಥಿಗಳು ಭೇಟಿ (Video)

Pinterest LinkedIn Tumblr

ಕುಂದಾಪುರ: ಕೊರೋನಾ ನಡುವೆ ಶಾಲೆಗೆ ಬಂದು ಪಾಠ-ಪ್ರವಚನದಲ್ಲಿ ಬ್ಯುಸಿ ಇರೋ ಮಕ್ಕಳು ಶಾಲೆ ಬಿಟ್ಟು ಇಂದು (ಶುಕ್ರವಾರ) ಕುಂದಾಪುರ ಪೊಲೀಸ್ ಸ್ಟೇಷನ್‌ಗೆ ಬಂದಿದ್ರು. ನೋಟ್ ಬುಕ್, ಪೆನ್ ಹಿಡಿಯುವ ಕೈಯಲ್ಲಿ ಪಿಸ್ತೂಲು, ರೈಫಲ್ ಹಿಡಿದು ನೋಡಿದರು. ಶಾಲೆಯಲ್ಲಿ ಅಧ್ಯಾಪಕರ ಪ್ರಶ್ನೆಗೆ ಉತ್ತರಿಸುತ್ತಿದ್ದ ಮಕ್ಕಳು ಠಾಣೆಯಲ್ಲಿ ಪೊಲೀಸರ ಪ್ರಶ್ನೆಗೆ ಉತ್ತರ ಹೇಳಿದ್ರು‌ ಮಾತ್ರವಲ್ಲ ತಮ್ಮ ಕುತೂಹಲದ ಪ್ರಶ್ನೆ ಕೇಳಿ ಪೊಲೀಸರಿಂದ ಉತ್ತರ ಪಡೆದರು.

ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಜ್ಯೂನಿಯರ್ ಕಾಲೇಜು) ಪ್ರೌಢಶಾಲೆ‌ವಿಭಾಗದ ಎನ್.ಎಸ್.ಎಸ್. ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆ‌ ಸಿಬ್ಬಂದಿಗಳು ಸ್ವಾಗತಿಸಿದರು.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ.‌ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಪೊಲೀಸ್ ಇಲಾಖೆಯು ಅಪರಾಧ ತಡೆ, ಅಪರಾಧ ಪತ್ತೆ ಮತ್ತು‌ ಕಾನೂನು ಸುವ್ಯವಸ್ಥೆ ಕಾಪಾಡುವಿಕೆ ಈ ಮೂರು ಹಂತದಲ್ಲಿ ಕಾರ್ಯ ನಿರ್ವಹಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ಎಸ್ಪಿ, ಉಪವಿಭಾಗದಲ್ಲಿ ಡಿವೈಎಸ್ಪಿ, ತಾಲೂಕಿನಲ್ಲಿ ಇನ್ಸ್‌ಪೆಕ್ಟರ್ ಹಾಗೂ ಆಯಾಯ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಗಳಿರಲಿದ್ದು ಅದಕ್ಕೆ ಸಬ್ ಇನ್ಸ್‌ಪೆಕ್ಟರ್ ಅಧಿಕಾರಿಯಾಗಿಯೂ ಎಎಸ್ಐ, ಹೆಡ್ ಕಾನ್ಸ್‌ಟೇಬಲ್, ಕಾನ್ಸ್‌ಟೇಬಲ್ ಎನ್ನುವ ಹುದ್ದೆಗಳಿರುತ್ತದೆ. ಯಾವುದೇ ದೂರುಗಳಿದ್ದರೂ ಪೊಲೀಸ್ ಠಾಣೆಗೆ ನಿರ್ಭಯವಾಗಿ ಬರುವ ದೃಷ್ಟಿಯಿಂದ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲಾಗಿದೆ.‌ ಮಾತ್ರವಲ್ಲ ತಕ್ಷಣದಲ್ಲೆ ಮಾಹಿತಿ ನೀಡಲು ದೇಶವ್ಯಾಪಿ ತುರ್ತು ಕರೆ ಸಂಖ್ಯೆಯಾಗಿರುವ 112 ಗೆ ಕರೆ ಮಾಡಿ ಸ್ಪಂದನೆ ಪಡೆಯಬಹುದು. ಠಾಣಾ ವ್ಯಾಪ್ತಿಯಲ್ಲಿ ಬೀಟ್ ಪೊಲೀಸ್ ವ್ಯವಸ್ಥೆ ಕೂಡ ಚುರುಕುಗೊಳಿಸಲಾಗಿದೆ ಎಂದರು.

ಸಹಾಯಕ ಉಪನಿರೀಕ್ಷಕ ಸುಧಾಕರ್ ಅವರು ಕಾನೂನು‌ ಪ್ರಕ್ರಿಯೆಗಳು, ಠಾಣೆ‌ಯ ಕಾರ್ಯವೈಖರಿ, ಸಿಬ್ಬಂದಿಯಿಂದ ಮೊದಲ್ಘೊಂಡು ಉನ್ನತಾಧಿಕಾರಿಗಳ‌ ಬಗ್ಗೆ, ಠಾಣೆಯಲ್ಲಿ ನೀಡಬಹುದಾದ ದೂರು, ಬಳಿಕದ ಎಫ್.ಐ.ಆರ್ ಬಗ್ಗೆ‌, ಪೊಲೀಸ್ ಸಮವಸ್ತ್ರ, ಹುದ್ದೆಗಳ ವ್ಯತ್ಯಾಸದ ಬಗ್ಗೆ ವಿವರಿಸಿದರು. ಮಕ್ಕಳಿಗೆ ತಮ್ಮದೇ ಹಕ್ಕುಗಳಿದ್ದು ಅದನ್ನು ತಿಳಿದುಕೊಳ್ಳಬೇಕು. ಪೊಕ್ಸೋ ಕಾಯಿದೆ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುತ್ತಿದೆ. ಮೊಬೈಲ್ ಬಳಕೆ ವಿದ್ಯಾಭ್ಯಾಸದ ದೃಷ್ಠಿಯಿಂದ ಮಾತ್ರ‌ ಇರಲಿ ಎಂದರು. ಮಕ್ಕಳಿಗೆ ಪಿಸ್ತೂಲ್, ಬಂದೂಕು ಬಗ್ಗೆ ವಿವರಿಸಿ ಮಕ್ಕಳ ಕೈಗೆ ಕೊಟ್ಟು ಪರಿಶೀಲಿಸಲು, ಠಾಣೆಯೊಳಗಿನ ಬಂಧಿಖಾನೆ, ವಿವಿಧ ಕೊಠಡಿಗಳನ್ನು ತೋರಿಸಿ ಮಾಹಿತಿ ನೀಡಿದರು. ಠಾಣೆ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಪೊಲೀಸರೆಂದರೇ ಮಕ್ಕಳು ಭಯಪಡುವುದು ಸಹಜ. ಆದರೇ ಆ ಭಯವಿರಬಾರದು. ಮತ್ತು ಪೊಲೀಸರ ಜನಸ್ನೇಹಿ ಕಾರ್ಯ ಮಕ್ಕಳಿಗೆ ತಿಳಿಯುವಂತಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶಾಲೆಯ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಉದಯ್ ಮಡಿವಾಳ ಎಂ ಹೇಳಿದರು.

ಈ ಸಂದರ್ಭ ಶಿಕ್ಷಕರಾದ ಅರುಣ್, ನಾಗರತ್ನ, ಪೊಲೀಸ್ ಠಾಣೆಯ ಸಿಬ್ಬಂದಿಗಳಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.