ಕರಾವಳಿ

ಮೆಹೆಂದಿ ಮಾಡ್ತಿದ್ದ ಕೊರಗ ಸಮುದಾಯದವರಿಗೆ ಥಳಿಸಿದ ಕೋಟ ಪೊಲೀಸರು: ಸಮಾಜ ಕಲ್ಯಾಣ ಇಲಾಖೆ ಸಚಿವರ ಹುಟ್ಟೂರಲ್ಲೇ ಖಾಕಿ ದುರ್ವರ್ತನೆ..! (Video)

Pinterest LinkedIn Tumblr

(ವರದಿ-ಯೋಗೀಶ್ ಕುಂಭಾಸಿ)

ಕುಂದಾಪುರ: ಮೆಹೆಂದಿ ಮನೆಗೆ ನುಗ್ಗಿ ಕೋಟ ಪೊಲೀಸರು ಕೊರಗ ಸಮುದಾಯದವರ ಮೇಲೆ ಮನಸ್ಸೋಇಚ್ಚೆ ಹಲ್ಲೆ ನಡೆಸಿದ ಘಟನೆ ಉಡುಪಿ‌ ಜಿಲ್ಲೆ ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಡಿ.27 ಸೋಮವಾರ ರಾತ್ರಿ‌ನಡೆದಿದೆ. ಘಟನೆಯಲ್ಲಿ ಮದುಮಗ ರಾಜೇಶ್, ಗಣೇಶ್ ಕೊರಗ, ಸುಂದರಿ, ಲಕ್ಷ್ಮೀ, ಬೇಬಿ, 12 ವರ್ಷ ಪ್ರಾಯದ ಬಾಲಕಿ, ಮದುಮಗನ ತಾಯಿ ಗಿರಿಜಾ, ಪ್ರವೀಣ್, ಶೇಖರ್ ಮೊದಲಾದವರಿಗೆ ಕೈ, ಕಾಲು, ತಲೆ, ಕುತ್ತಿಗೆ ಮೊದಲಾದೆಡೆ ಗಾಯಗಳಾಗಿದೆ.

ಕಾಲನಿಗೆ ಬಂದು ಸಮುದಾಯದವರ ಮೇಲೆ ಹಲ್ಲೆ….
ಎಸ್ಟಿ ಕಾಲನಿ ನಿವಾಸಿ ಕೊರಗ ಸಮುದಾಯದ ರಾಜೇಶ್ ಎನ್ನುವವರ ಮದುವೆ ಡಿ.29ಕ್ಕೆ ನಡೆಯಲಿದ್ದು ಸೋಮವಾರ ಮನೆಯಲ್ಲಿಯೇ ಮೆಹೆಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲನಿಯಲ್ಲಿನ ಸಮುದಾಯದವರು ಮತ್ತು ಗೆಳೆಯರು ಆಮಂತ್ರಿತರಾಗಿದ್ದು ಎಲ್ಲರೂ ಈ ಮೆಹೆಂದಿ ಶಾಸ್ತ್ರಕ್ಕೆ ಬಂದಿದ್ದರು. ಡಿಜೆ ವ್ಯವಸ್ಥೆಯೂ ಇದ್ದು ರಾತ್ರಿ 9.30ರಿಂದ ಊಟ ವ್ಯವಸ್ಥೆ ಮಾಡಲಾಗಿತ್ತು. 10 ಗಂಟೆಯ ಬಳಿಕ ಪೊಲೀಸ್ 112 ವಾಹನ ಆಗಮಿಸಿ ಡಿಜೆ ಶಬ್ಧ ತೆಗೆಯುವಂತೆ ಸೂಚಿಸಿದ್ದು ಕೆಲವೇ ಕ್ಷಣಗಳಲ್ಲಿ ಬಂದ ಕೋಟ ಪಿಎಸ್ಐ ಸಂತೋಷ್ ಬಿ.ಪಿ ಹಾಗೂ ಇತರ ಕೆಲ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದಾರೆ. ಕೆಲವರ ಮೊಬೈಲ್ ಫೋನುಗಳು ಹಾನಿಯಾಗಿದೆ, ಕಳೆದು ಹೋಗಿದೆ ಎಂದು ದೂರಲಾಗಿದೆ.

ಕೊರಗ‌ ಮುಖಂಡ ಗಣೇಶ್ ಬಾರ್ಕೂರು ಮೇಲೆ ಹಲ್ಲೆ…
ಕೊರಗ ಸಮುದಾಯದ ಮುಖಂಡ ಗಣೇಶ್ ಬಾರ್ಕೂರು ಅವರ ಕಾಲರ್ ಪಟ್ಟಿ ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ. ಅವರೊಂದಿಗೆ ಮದುಮಗನ ಅಣ್ಣ ಗಿರೀಶ್, ಸುದರ್ಶನ ಹಾಗೂ ಸಚಿನ್ ಎನ್ನುವರನ್ನು ಕೂಡ ಠಾಣೆಗೆ ಕರೆದೊಯ್ದು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ನೊಂದವರು ಆರೋಪಿಸಿದ್ದಾರೆ. ಈ ಬಗ್ಗೆ ಗಣೇಶ್ ಕೊರಗ ಪ್ರತಿಕ್ರಿಯೆ ನೀಡಿ, ಡಿಜೆ ಶಬ್ದ ಕಡಿಮೆ ಮಾಡಲು ಹೇಳಿ ತೆರಳುವಾಗಲೇ ಏಳೆಂಟು‌ಮಂದಿ ಪೊಲೀಸರು ಬಂದು ಏಕಾಏಕಿ ಜೀಪಿಗೆ ಎಳೆದೊಯ್ದರು. ಬಾಯಿಗೆ ಬಂದಂತೆ ಅವ್ಯಾಚವಾಗಿ ಬೈದರು. ಹೆಂಗಸರು, ಮಕ್ಕಳು, ವೃದ್ಧರು ಎಂದು ನೋಡದೇ ಹಲ್ಲೆ ಮಾಡಿದ್ದಾರೆ. ಇದನ್ನೆಲ್ಲಾ‌ ನೋಡಿದರೆ‌ ನಾವು ಯಾವ ದೇಶದಲ್ಲಿದ್ದೇವೆ. ನಮಗೆ ಬದುಕುವ ಹಕ್ಕಿಲ್ಲವೇ? ಎಂಬುದು ತಿಳಿಯುತ್ತಿಲ್ಲ ಎಂದರು.

ಕಾಲಿಗೆ ಬಿದ್ದು ಅಂಗಲಾಚಿದರೂ ಕೇಳಿಲ್ಲ…!?
ಮೆಹೆಂದಿ ಶಾಸ್ತ್ರ ಮುಗಿಸಿ ಇನ್ನೇನು ಎಲ್ಲರ ಊಟ ಮಾಡುವ ಹೊತ್ತಾಗಿತ್ತು. ಅಷ್ಟರಲ್ಲಾಗಲೇ ಬಂದ ಪೊಲೀಸರು ಯಾವುದೇ ಸೂಚನೆ ನೀಡದೆ ಮನಸ್ಸೋಇಚ್ಚೆ ಹಲ್ಲೆ ಮಾಡಿದರು. ಏನಾಗುತ್ತಿದೆ ತಿಳಿಯುವಷ್ಟರಲ್ಲಿ ಲಾಠಿ ಬೀಸಿದ್ದರು. ನಮ್ಮದೇನು ತಪ್ಪಿಲ್ಲ, ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದು ಅಂಗಲಾಚಿದರೂ ಕೂಡ ಪೊಲೀಸರ ಮನಸ್ಸು ಕರಗಿಲ್ಲ..ಇವರೆಂತಾ ಆರಕ್ಷಕರು..? ಎಂದು ಹಲ್ಲೆಗೊಳಗಾದ ಮಹಿಳೆಯೊಬ್ಬರು ಕಣ್ಣೀರು‌ ಹಾಕುತ್ತಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕೊರಗರಿಗೆ ಕಾರ್ಯಕ್ರಮ‌ ಮಾಡುವ ಹಕ್ಕಿಲ್ಲವೇ..?: ಗಣೇಶ್ ಕೊರಗ ಕುಂದಾಪುರ
ಮೂಲ ನಿವಾಸಿಗಳೆಂದು ಕರೆಸಿಕೊಳ್ಳುವ ಕೊರಗ ಸಮುದಾಯದವರು ಮುಗ್ಧರು. ಸಾಲ ಮಾಡಿ ಒಂದೊಳ್ಳೆ ಕಾರ್ಯಕ್ರಮ ಮಾಡಲು ಇಲಾಖೆ ಬಿಡುತ್ತಿಲ್ಲ. ಹಾಗಾದರೆ‌ ಕೊರಗರು ಹಿಂದಿನಂತೆ ಬೇಡಿಯೇ ದಿನ ಕಳೆಯಬೇಕೇ? ಇದೆಂತಾ ನ್ಯಾಯ..? ದಲಿತರು, ಕೊರಗರ ಹಕ್ಕಿನ ಬಗ್ಗೆ ಕುಂದುಕೊರತೆ ಸಭೆ ಕರೆಯುವುದು ಕೇವಲ ಕಾಟಾಚಾರಕ್ಕೆ ಅಲ್ಲವೇ? ಈ ಘಟನೆಯಿಂದ ಇಡೀ ಸನುದಾಯಕ್ಕೆ ನೋವಾಗಿದೆ. ಜಿಲ್ಲೆಯಲ್ಲಿ ನಡೆದ ಅತ್ಯಂತ ಅಮಾನವೀಯ ಘಟನೆ ಇದಾಗಿದೆ. ಪಿಎಸ್ಐ ಹಾಗೂ ಸಂಬಂದಪಟ್ಟ ಪೊಲೀಸ್ ಸಿಬ್ಬಂದಿಗಳ ಮೇಲೆ ಕಾನೂನಿನಡಿ ಸೂಕ್ತ ಕ್ರಮವಾಗಬೇಕು ಎಂದು ಕೊರಗ ಶ್ರೆಯೋಭಿವೃದ್ಧಿ ಸಂಘದ ಗಣೇಶ್ ಕೊರಗ ಕುಂದಾಪುರ ಆಗ್ರಹಿಸಿದ್ದಾರೆ.

ಸಮಾಜ‌ಕಲ್ಯಾಣ ಇಲಾಖೆ‌ ಸಚಿವರ ಊರಲ್ಲೇ ಖಾಕಿ ಅಮಾನವೀಯತೆ..!
ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟೂರು ಕೋಟದಲ್ಲೇ ಈ ರೀತಿಯಾಗಿ ಪೊಲೀಸರು ಕೊರಗ ನಿವಾಸಿಗಳ ಮೇಲೆ ದುರ್ವರ್ತನೆ
ತೋರಿರುವುದು ಅಮಾನವೀಯ ಘಟನೆಯಾಗಿದೆ. ಜಿಲ್ಲಾಡಳಿತಕ್ಕೂ ಇದೊಂದು ಕಪ್ಪು ಚುಕ್ಕೆಯಾಗಿದೆ. ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಬಂದಪಟ್ಟ ಮೇಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹ ಕೇಳಿಬಂದಿದೆ.

ಬ್ರಹ್ಮಾವರ ಸಿಪಿಐ ಭೇಟಿ..ತನಿಖೆ ಭರವಸೆ..!
ಘಟನೆ ನಡೆದ ಎಸ್.ಟಿ ಕಾಲನಿಗೆ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಮಂಗಳವಾರ ಭೇಟಿ ನೀಡಿದರು. ನೊಂದ ಕಾಲನಿ‌ನಿವಾಸಿಗಳು ತಮಗಾದ ಅನ್ಯಾಯವನ್ನು ಅವರೆದುರು ಎಳೆಎಳೆಯಾಗಿ ಬಿಚ್ಚಿಟ್ಟರು. ಹಾಗೂ ಕೊರಗ ಸಮುದಾಯದವರು, ಸ್ಥಳೀಯ ನಾಗರಿಕರು ಮಾತನಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಐ, ಘಟನೆ ಬಗ್ಗೆ ಈಗಾಗಾಲೇ‌ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪೊಲೀಸ್ ಇಲಾಖೆ ಮೇಲೆ ಸಮುದಾಯದವರು ವಿಶ್ವಾಸವಿಡಿ. ಸೂಕ್ತ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ಮುಗ್ಧ ಜನರ‌ ಮೇಲೆ ಹಲ್ಲೆ ಖಂಡನೀಯ: ಪ್ರಮೋದ್ ಹಂದೆ
ಕಾಲನಿಯಲ್ಲಿ 50 ವರ್ಷಗಳ ಬಳಿಕ‌ ನಡೆಯುವ ಒಂದೊಳ್ಳೆ ಕಾರ್ಯಕ್ರಮ ಇದಾಗಿತ್ತು. ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಅಂತಹ ಸಂದರ್ಭ ಪೊಲೀಸರು‌ ಈ‌ರೀತಿ ದುರ್ವರ್ತನೆ ತೋರಿದ್ದು ಖಂಡನೀಯ. ಈ ಬಗ್ಗೆ ಸೂಕ್ತ‌ಕ್ರಮಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಕೋಟತಟ್ಟು ಗ್ರಾ.ಪಂ‌ ಸದಸ್ಯ, ನ್ಯಾಯವಾದಿ ಪ್ರಮೋದ್ ಹಂದೆ ಹೇಳಿದರು.

ದಲಿತ ಸಂಘಟನೆ ಮುಖಂಡರಾದ ಶ್ಯಾಮಸುಂದರ್, ಮಂಜುನಾಥ ಗಿಳಿಯಾರ್, ರಾಜು ಬೆಟ್ಟಿನಮನೆ, ಸತೀಶ್ ತೆಕ್ಕಟ್ಟೆ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಶಂಕರ್ ಕೋಟ, ರಂಜಿತ್ ಮೊಗವೀರ ಸ್ಥಳೀಯರಾದ ರತ್ನಾಕರ ಕೋಟ, ನಾಗರಾಜ್ ಪುತ್ರನ್,ಸತೀಶ್ ಬಾರಿಕೆರೆ ಮೊದಲಾದವರು ಭೇಟಿ ನೀಡಿ ನೊಂದವರಿಗೆ ಧೈರ್ಯ ತುಂಬಿದರು.

ಇದನ್ನೂ ಓದಿರಿ:

ಪೊಲೀಸರು‌ ಅಮಾಯಕರನ್ನು ಹೊಡೆದು ಸಿಂಗಂ ಆಗಬೇಡಿ; ದರೋಡೆಕೋರರನ್ನು ಹಿಡಿಯಿರಿ: ಕುಂದಾಪುರ ಶಾಸಕ ಹಾಲಾಡಿ (Video)

Comments are closed.