(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ತಾಲೂಕಿನ ಕಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಜಪ್ತಿ ಎಂಬಲ್ಲಿರುವ ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಶುದ್ಧೀಕರಣ ಯೋಜನೆಯ ಘಟಕದ ಆವರಣದಲ್ಲಿ ಚಿರತೆ ಓಡಾಟದ ಬಗ್ಗೆ ದೂರು ಬಂದ ಹಿನ್ನೆಲೆ ಜ.15 ಶನಿವಾರ ಬೆಳಿಗ್ಗೆನಿಂದಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕುಂದಾಪುರ ಅರಣ್ಯಾಧಿಕಾರಿಗಳ ತಂಡ ಅಂದಾಜು ಎರಡೂವರೆ ತಿಂಗಳು ಪ್ರಾಯದ ಹೆಣ್ಣು ಚಿರತೆ ಮರಿಯೊಂದನ್ನು ಸೆರೆಹಿಡಿದಿದ್ದು ಇನ್ನೊಂದು ಮರಿ ತಪ್ಪಿಸಿಕೊಂಡಿದೆ.
ಚಿರತೆ ಓಡಾಟದ ಮಾಹಿತಿ…
ಕುಂದಾಪುರ ಪುರಸಭೆಯ ಶುದ್ಧ ಕುಡಿಯುವ ನೀರಿನ ಯೋಜನೆ ಘಟಕವು ಜಪ್ತಿಯಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಘಟಕದ ಆವರಣದಲ್ಲಿ ಚಿರತೆಗಳ ಓಡಾಟ ಕಂಡ ಇಲ್ಲಿನ ಸಿಬ್ಬಂದಿ ಜ.14 ಶುಕ್ರವಾರ ರಾತ್ರಿ ನೀಡಿದ ಮಾಹಿತಿಯಂತೆ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರು ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದು ಸೆರೆ ಹಿಡಿಯುವ ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆ ಇಂದು (ಜ.15) ಕಾರ್ಯಾಚರಣೆ ನಡೆಸಿದೆ. ಸುಮಾರು 10 ಗಂಟೆಗೆ ಕಾರ್ಯಾಚರಣೆಗೆ ಆಗಮಿಸಿದ ಅಧಿಕಾರಿಗಳ ತಂಡ ಕೆಲವೇ ಗಂಟೆಯಲ್ಲಿ ಒಂದು ಮರಿ ಚಿರತೆಯನ್ನು ಸೆರೆ ಹಿಡಿದಿದೆ. ಈ ವೇಳೆ ಇನ್ನೊಂದು ಚಿರತೆ ಮರಿ ತಪ್ಪಿಕೊಂಡಿದೆ.
ದೊಡ್ಡ ಚಿರತೆ ಚಲನವಲನ…
ಕಾಡಿನ ಪಕ್ಕದಲ್ಲಿ ಈ ಘಟಕವಿದ್ದು ಅಡ್ಡಲಾಗಿ ಬೃಹತ್ ಕಾಂಪೋಂಡ್ ಗೋಡೆಯಿದೆ. ಶುದ್ಧನೀರು ಯೋಜನೆ ಘಟಕದಲ್ಲಿ ಏಳು ಮಂದಿ ಸಿಬ್ಬಂದಿಗಳಿದ್ದು ಸನಿಹದಲ್ಲೇ ವಸತಿಗೃಹವಿದೆ. ಇಲ್ಲಿಗೆ ಸಮೀಪದಲ್ಲಿ ಚಿರತೆಗಳ ಉಪಟಳದ ಬಗ್ಗೆ ದೂರು ಬಂದ ಹಿನ್ನೆಲೆ ಕಳೆದ ಒಂದೂವರೆ ತಿಂಗಳ ಹಿಂದೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನಿಟ್ಟಿತ್ತು. ಆದರೆ ಬೃಹತ್ ಕಂಪೊಂಡ್ ಗೋಡೆ ಇರುವ ಘಟಕದ ಆವರಣದೊಳಗೆ ಶುಕ್ರವಾರ ರಾತ್ರಿ ಚಿರತೆ ಕಂಡು ಬೆದರಿದ ಇಲ್ಲಿನ ಸಿಬ್ಬಂದಿ ಪುರಸಭಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬೆಳಿಗ್ಗೆ ಕಾರ್ಯಾಚರಣೆಗೆ ಆಗಮಿಸಿದ ಅರಣ್ಯಾಧಿಕಾರಿಗಳ ತಂಡಕ್ಕೆ ಒಂದು ಚಿರತೆ ಮರಿ ಸಿಕ್ಕಿದೆ. ಇನ್ನೊಂದು ಚಿರತೆ ಮರಿ ಕಾಡು ಹಾದಿಯಲ್ಲಿ ಕಣ್ತಪ್ಪಿಸಿ ಪರಾರಿಯಾಗಿದೆ. ಸ್ಥಳದಲ್ಲಿ ಮಾಂಸದ ತುಂಡುಗಳು ಸಿಕ್ಕಿದ್ದು ಕೆಲವೇ ಹೊತ್ತಿನ ಅಂತರದಲ್ಲಿ ದೊಡ್ಡ ಚಿರತೆ ಓಡಾಟದ ಬಗ್ಗೆ ಪುರಾವೆಗಳು ಸಿಕ್ಕಿದೆ. ಮರಿ ಚಿರತೆ ಸೆರೆ ಸಿಕ್ಕ ಶುದ್ಧ ನೀರಿನ ಶೇಖರಣಾ ಘಟಕದ ಬಳಿಯ ಚಿಕ್ಕ ಚಿಕ್ಕ ಮರಗಳಲ್ಲಿ ಚಿರತೆ ಮರಿಗಳು ಆಟವಾಡಿ ಪಂಜದಲ್ಲಿ ಗೀರಿದ ಕುರುಹುಗಳು ಇದೆ.
ಕಾರ್ಯಾಚರಣೆ ತಂಡ…
ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೋಬೋ, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಬಿ. ಉದಯ್, ಶರತ್ ಗಾಣಿಗ, ಹಸ್ತಾ, ಅರಣ್ಯ ರಕ್ಷಕರಾದ ಉದಯ್ ಕುಮಾರ್ ಶೆಟ್ಟಿ, ಅಶೋಕ್, ಅರಣ್ಯ ವೀಕ್ಷಕರಾದ ಸತೀಶ್, ರೋಶನ್ ಇದ್ದರು. ಅರಣ್ಯ ಇಲಾಖೆಯೊಂದಿಗೆ ಹಿರಿಯ ಗ್ರಾಮಸ್ಥ ಸುಬ್ಬಯ್ಯ ಪೂಜಾರಿ ಹಾಗೂ ಸ್ಥಳೀಯ ಯುವಕರ ತಂಡ ಕಾರ್ಯಾಚರಣೆ ವೇಳೆ ಸಹಕಾರ ನೀಡಿತ್ತು. ಕುಂದಾಪುರ ಪುರಸಭೆಯ ಇಂಜಿನಿಯರ್ ಸತ್ಯ ಹಾಗೂ ಸೂರಜ್ ಈ ಸಂದರ್ಭ ಭೇಟಿ ನೀಡಿದ್ದರು.
Comments are closed.