ಕರಾವಳಿ

ಕರ್ಕಶ ಶಬ್ದ ಮಾಡುವ ಸೈಲೆನ್ಸರ್’ಗಳನ್ನು ಕಿತ್ತು ರೋಡ್ ರೋಲರ್ ಹತ್ತಿಸಿ ನಾಶಪಡಿಸಿದ ಉಡುಪಿ ಪೊಲೀಸರು..!(Video)

Pinterest LinkedIn Tumblr

ಉಡುಪಿ: ಕರ್ಕಷವಾಗಿ ಶಬ್ಧ ಮಾಡುವ, ನಿಯಮ ಬಾಹಿರವಾಗಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಅಳವಡಿಸಿದ ಸೈಲೆನ್ಸರ್ ಗಳನ್ನು ಉಡುಪಿ ಜಿಲ್ಲೆಯ ಪೊಲೀಸರು ಕಿತ್ತು ಸೋಮವಾರ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಮಾಡುವ 71 ಸೈಲೆನ್ಸರ್ ಗಳನ್ನು ರೋಡ್ ರೋಲರ್ ಮೂಲಕ ನಿರುಪಯುಕ್ತಗೊಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರು, ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ಮಣಿಪಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬಂದಿಯವರು ಯಶಸ್ವಿಯಾಗಿ ಜಾರಿಗೆಗೊಳಿಸಿದ್ದಾರೆ. ಶಬ್ದ ಮಾಲಿನ್ಯ ಮಾಡುವ ದ್ವಿಚಕ್ರ ವಾಹನಗಳ ವಿರುದ್ದ ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ಸಾಮಾನ್ಯವಾಗಿ ಮೋಟಾರು ವಾಹನಗಳ ನಿಯಮಗಳ ಪ್ರಕಾರ ಸೈಲೆನ್ಸರ್ ಶಬ್ದವು ನಿಗದಿತ ಪರಿಮಾಣದಲ್ಲಿರಬೇಕೆಂದು ರಾಷ್ಟ್ರೀಯ ಮಾನದಂಡಗಳಿದೆ. ವಾಹನ ಹೊರಸೂಸುವ ಶಬ್ದವನ್ನು ಡೆಸಿಬಲ್ ಎಂಬ ಪರಿಮಾಣದಿಂದ ಅಳೆಯುತ್ತಾರೆ. ಸಾಮಾನ್ಯವಾಗಿ 80 ಡೆಸಿಬಲ್ ಗಿಂತ ಹೆಚ್ಚಿನ ಶಬ್ದವನ್ನು ಹೊರಸೂಸಿದರೆ ಅದು ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದರು.

2021 ಜನವರಿ 1 ರಿಂದ 2022 ಜನವರಿ 25 ರವರೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 71 ದ್ವಿಚಕ್ರ ವಾಹನದ ವಿರುದ್ದ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೈಲೆನ್ಸರ್ ಗಳನ್ನು ವಾಹನ ಸವಾರರಿಗೆ ವಾಪಾಸ್ ನೀಡಿದ್ದಲ್ಲಿ ಮರು ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡ 71 ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಅನುಪಯುಕ್ತಗೊಳಿಸಾಗಿದ್ದು ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಈ ರೀತಿಯಾಗಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಎಲ್ಲಾ ಠಾಣೆಯಲ್ಲಿ ಮಾಡಲಾಗುವುದು ಎಂದರು.

ಈ‌ ಸಂದರ್ಭ ಉಡುಪಿ ಉಪವಿಭಾಗದ ಪೊಲೀಸ್ ಅಧೀಕ್ಷಕ ಸದಾನಂದ ನಾಯಕ್, ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ, ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ, ಪ್ರೊಬೇಶನರಿ ಪಿಎಸ್ಐಗಳಾದ ವಿನಯ್‌, ಸುಷ್ಮಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.