ಕರಾವಳಿ

ಆಟೋ, ಗೂಡ್ಸ್ ವಾಹನ ನಿಲ್ದಾಣ ಗುರುತಿಸಲು ಒತ್ತಾಯ: ಕುಂದಾಪುರ ಪುರಸಭೆ ವಿರುದ್ಧ ಆಟೋ ಚಾಲಕರ ಆಕ್ರೋಷ..! (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ಆಟೋ ಚಾಲಕರು ಇಂದು (ಏ.12 ಮಂಗಳವಾರ) ಬಾಡಿಗೆ ಮಾಡದೇ ಆಟೋಗಳ ಸಹಿತ ಕುಂದಾಪುರ ಪುರಸಭೆ ಎದುರು ಆಗಮಿಸಿ ಪ್ರತಿಭಟನೆ ನಡೆಸಿದರು. ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಈ‌ ಮುಷ್ಕರ ನಡೆಸಿ ಬಳಿಕ ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಕುಂದಾಪುರ ನಗರ ಸಹಿತ ಪುರಸಭಾ ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಆಟೋ ರಿಕ್ಷಾಗಳಿದೆ.‌‌ ಹಲವು ವರ್ಷಗಳಿಂದ ನಿಲ್ದಾಣಕ್ಕಾಗಿ ಬೇಡಿಕೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಟೋ ಹಾಗೂ ಗೂಡ್ಸ್ ರಿಕ್ಷಾ ವಾಹನ ನಿಲುಗಡೆಗೆ ಬಗ್ಗೆ ಪುರಸಭಾ ಆಡಳಿತ ಹಾಗೂ ಅಧಿಕಾರಿಗಳು ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.

ರಿಕ್ಷಾ ಚಾಲಕರು ಊರ ಸಮಸ್ಯೆಗೆ ಸ್ಪಂದಿಸುತ್ತಾರೆ. ಆದರೆ ರಿಕ್ಷಾದವರನ್ನು ಕೀಳಾಗಿ ಕಾಣಲಾಗುತ್ತಿದೆ. ಅವರ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಸಂಬಂಧಪಟ್ಟವರು ಮಾಡುತ್ತಿಲ್ಲ ಎಂಬ ಆಕ್ರೋಷ ಕೇಳಿಬಂತು.

ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಆಟೋ ರಿಕ್ಷಾಗಳು, 50ಕ್ಕೂ ಅಧಿಕ ಗೂಡ್ಸ್ ವಾಹನಗಳಿದ್ದು ಸಾರ್ವಜನಿಕರ ಸೇವೆಯಲ್ಲಿ ತೊಡಗಿದೆ. ಈವರೆಗೆ ಇವುಗಳಿಗೆ ಸೂಕ್ತ ನಿಲ್ದಾಣ ವ್ಯವಸ್ಥೆ ಮಾಡಿಲ್ಲ. ಇದರಿಂದ ಚಾಲಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಪುರಸಭೆ ಕೂಡಲೇ ಆಟೋ, ಗೂಡ್ಸ್ ವಾಹನಗಳಿಗೆ ನಿಲ್ದಾಣ ಗುರುತಿಸಿ ಪ್ರಕಟಣೆ ಹೊರಡಿಸಬೇಕು. ನಿಲ್ದಾಣಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಪುರಸಭೆ ವ್ಯಾಪ್ತಿಯಲ್ಲಿನ ಹದಗೆಟ್ಟ ಎಲ್ಲಾ ರಸ್ತೆಗಳನ್ನು ಶೀಘ್ರ ಸರಿಪಡಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಹಾಗೂ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರಿಗೆ‌ ಮನವಿ ಸಲ್ಲಿಸಿದರು.

ಕುಂದಾಪುರ ತಾಲೂಕು ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಡ್ರೈವರ್ಸ್ ಅಸೋಸಿಯೇಶನ್ ಇಂಟಕ್ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಆಟೋ ರಿಕ್ಷಾ ಮತ್ತು ವಾಹನ ಚಾಲಕ ಸಂಘ ಸಿಐಟಿಯು ಇದರ ಚಂದ್ರಶೇಖರ್, ಭಾರತೀಯ ಮಜ್ದೂರ್ ಸಂಘದ ಸ್ಥಾಪಕಾಧ್ಯಕ್ಷ ಶಂಕರ್ ಅಂಕದಕಟ್ಟೆ ಪ್ರತಿಭಟನಾ ಸಭೆಯನ್ನುದ್ದೇಶಿಸಿ‌ ಮಾತನಾಇದ್ದರು. ಬಿ.ಎ.ಎಂ.ಎಸ್ ಸಂಘಟನೆ ಅಧ್ಯಕ್ಷ ಸುರೇಶ್ ಪುತ್ರನ್ ಸಹಿತ ಮೂರು ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.

Comments are closed.