(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿ ಎಂಬಲ್ಲಿನ ತೋಟದಲ್ಲಿ ಅರಣ್ಯ ಇಲಾಖೆಯಿಟ್ಟ ಬೋನಿಗೆ ಅಂದಾಜು 2.5 ವರ್ಷದ ಹೆಣ್ಣು ಚಿರತೆ ಬಿದ್ದಿದೆ.
ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನ ಬಳಿಯ ತೋಟದಲ್ಲಿ ಚಿರತೆ ನಿರಂತರ ಓಡಾಟದ ಹಿನ್ನೆಲೆ ಕಳೆದ ತಿಂಗಳು ಬೋನು ಇಟ್ಟು ನಾಯಿ ಕಟ್ಟಲಾಗಿದ್ದು ಇಂದು (ಏ.28 ಗುರುವಾರ) ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ.
ಎಕರೆಗಟ್ಟಲೆ ಇರುವ ತೋಟದ ಈ ಪರಿಸರದಲ್ಲಿ ಅಂಗನವಾಡಿ, ಶಾಲೆ ಹಾಗೂ ಮನೆಗಳಿದೆ. ಕಳೆದ ವರ್ಷವೂ ಇಲ್ಲಿ ನಾಯಿ, ಜಾನುವಾರು, ಸಾಕುಪ್ರಾಣಿಗಳ ಮೇಲೆ ದಾಳಿ ಚಿರತೆ ದಾಳಿ ನಡೆಸಿತ್ತು. ಮಾತ್ರವಲ್ಲ ನಿರಂತರವಾಗಿ ಜನರಿಗೆ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆಗೆ ಬೋನಿಟ್ಟು ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಕಳೆದ ತಿಂಗಳಾಂತ್ಯದಲ್ಲಿ ಬೋನಿಟ್ಟು ಚಿರತೆ ಸೆರೆಗೆ ಮುಂದಾಗಿತ್ತು. ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ಚಿರತೆ ಸೆರೆ ಕಾರ್ಯಾಚರಣೆಗೆ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಸಹಕಾರ ನೀಡುತ್ತಿದ್ದರು.
2018 ರಿಂದ ಈವರೆಗೆ ಒಟ್ಟು 5 ಚಿರತೆಗಳ ಸೆರೆ….
ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಅ.6, 2019, ಡಿ.12, 2019, ಡಿ.24 ,2019 ರಲ್ಲಿ ‘ಆಪರೇಶನ್ ಚೀತಾ’ ಕಾರ್ಯಾಚರಣೆ ನಡೆಸಿದ ಇಲಾಖೆ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದು ಕಳೆದ ನಾಲ್ಕು ವರ್ಷದಲ್ಲಿ ಈ ತೋಟದಲ್ಲಿ ಸೆರೆಸಿಕ್ಕ 5ನೇ ಚಿರತೆ ಇದಾಗಿದ್ದು ಈ ತೋಟ ಚಿರತೆಗಳ ಹಾಟ್ ಸ್ಫಾಟ್ ಆಗಿದೆ.
ಚಿರತೆ ಸೆರೆಯಾದ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಆತಂಕಗೊಂಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಚಿರತೆಗಳಿರುವ ಆತಂಕ ಜನರಲ್ಲಿದ್ದು ಮತ್ತೆ ಬೋನಿಟ್ಟು ಕಾರ್ಯಾಚರಣೆ ನಡೆಸುವುದಾಗಿ ಅರಣ್ಯ ಇಲಾಖೆಯವರು ಹೇಳಿದ್ದಾರೆ.
Comments are closed.