ಕುಂದಾಪುರ: ಭೂಮಿ, ಹಸು ಹಾಗೂ ತಾಯಿ ಜಗತ್ತಿನಲ್ಲಿ ಮೋಸವಿಲ್ಲದ ಮೂರು ಪ್ರತ್ಯೇಕ್ಷ ದೇವತೆಗಳನ್ನು ಗೌರವಿಸುವ ದೇಶ ನಮ್ಮ ಭಾರತ ಗೌರಿಗದ್ದೆಯ ದತ್ತಾತ್ರೇಯ ಆಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು.
ಬೈಂದೂರು ಸಮೀಪದ ಖಂಬದಕೋಣೆಯಲ್ಲಿ ಉಪ್ಪುಂದದ ಖಂಬದಕೋಣೆಯ ರೈತರ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ರೈತಸಿರಿ ಅಗ್ರಿಮಾಲ್ ಇದರ ಶಂಕುಸ್ಥಾಪನೆ ಹಾಗೂ ರೈತಸಿರಿ ಸಮಾವೇಶದಲ್ಲಿ ಅವರು ರೈತಸಿರಿ ಅಗ್ರಿಮಾಲ್ ಶಂಕುಸ್ಥಾಪನೆ ಶಂಕು ಸ್ಥಾಪನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಕೋವಿಡ್ ಬಂದಾಗಲೂ ನಮ್ಮ ದೇಶದಲ್ಲಿ ಅನ್ನಕ್ಕೆ ಕ್ಷಯ ಬರಲಿಲ್ಲ, ಇದಕ್ಕೆ ಕಾರಣ ನಮ್ಮ ದೇಶದ ರೈತಾಪಿ ವರ್ಗ. ಭರವಸೆ ಬದುಕಾಗಬಾರದು, ಬದುಕೆ ಭರವಸೆಯಾಗಬೇಕು. ನನ್ನ ಸಿದ್ದಾಂತಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂದೇನಿಲ್ಲ, ಅವರವರ ಸಿದ್ಧಾಂತಗಳೆ ಎಲ್ಲರನ್ನು ಕಾಯುತ್ತದೆ. ಇನ್ನೊಬ್ಬರಿಗೋಸ್ಕರ ಬದುಕಬಾರದು, ನಮಗೆ ನಾವೇ ಮಾದರಿಯಾಗಬೇಕು. ಕೊಳಕು ಹಾಗೂ ತೊಳಕನ್ನು ತೊಳೆಯುವುದೇ ನಿಜವಾದ ಅಧ್ಯಾತ್ಮ. ಪ್ರಕೃತಿಯಿಂದ ಕಲಿತ ಪಾಠವೇ ನಿಜವಾದ ಜೀವನ ಪಾಠ. ನಮ್ಮ ಸಂಸ್ಕೃತಿ ಉಳಿದಿರುವುದು ಗ್ರಾಮೀಣ ಭಾಗದ ಮಹಿಳೆಯರಿಂದ. ಸೆಲ್ಫಿ ತೆಗೆದುಕೊಳ್ಳುವ ಮೊದಲು ಪ್ರತಿಯೊಬ್ಬರ ಆತ್ಮ ಸಾಕ್ಷಾತ್ಕಾರವಾಗಿಸಿಕೊಳ್ಳಬೇಕು. ಕಾರ್ಯ ಶಕ್ತಿ ಇರುವುದು ಸಾಮಾನ್ಯ ಜನರಲ್ಲಿ. ಸತ್ಯ ಯಾವಾಗಲೂ ಅಪಥ್ಯವಾಗಿರುತ್ತದೆ. ನಡೆದಾಡುವ ಜ್ಞಾನ ಭಂಡಾರದಂತಿರುವ ಅಪ್ಪಣ್ಣ ಹೆಗ್ಡೆಯವರು ನಡೆದಾಡುವ ಧರ್ಮಸ್ಥಳದ ಮಂಜುನಾಥನ ಪ್ರತಿರೂಪದಂತೆ ಎಂದು ಅವರು ಹೇಳಿದರು.
ನಮ್ಮ ರೀತಿ-ನೀತಿಗಳು ಸಹಜವಾಗಿರಬೇಕು. ಪ್ರತಿಯೊಂದು ಮಣ್ಣಿನಲ್ಲಿ ಸತ್ವ ಹಾಗೂ ಶಕ್ತಿ ಇರುತ್ತದೆ. ಆಧುನೀಕತೆ ಹಾಗೂ ಪಾಶ್ಚತ್ಯ ಮೋಹಗಳಿಂದಾಗಿ ಸಂಸ್ಕೃತಿ ಮರೆತಾಗ ನಮ್ಮ ಸಂಸ್ಕಾರಗಳು ದೂರವಾಗುತ್ತದೆ. ಎಲ್ಲರನ್ನೂ ಮೆಚ್ಚಿಸಿಕೊಳ್ಳಬೇಕು ಎಂದೇನಿಲ್ಲ, ಆದರೆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಪ್ರಕೃತಿಯನ್ನು ಕಾಯುವುದು ಹಾಗೂ ಧರ್ಮವನ್ನು ಪಾಲನೆ ಮಾಡುವುದೇ ನಿಜವಾದ ಸನಾತನ. ಹೊಗಳಿಕೆ ಹಾಗೂ ತೆಗಳಿಕೆ ಎನ್ನುವುದು ಭ್ರಮೆ. ದುರಂಕಾರವನ್ನು ಮೀರಿದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ನಮ್ಮ ಹಿರಿಯರು ಧರ್ಮ, ಸಂಸ್ಕೃತಿ ಹಾಗೂ ಮಾನವತೆಯ ಸಂಸ್ಕಾರವನ್ನು ನಮಗೆ ನೀಡಿದ್ದಾರೆ. ಅದನ್ನು ಪಾಲಿಸಿ ಬದುಕುವುದೆ ನಿಜವಾದ ಬದುಕು. ಯಶಸ್ಸಿನ ಹಿಂದಿನ ಕತೃ ಶಕ್ತಿಗಳನ್ನು ಗುರುತಿಸಿ ಅಭಿನಂದಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅವಮಾನದ ನಂತರ ಸನ್ಮಾನ ಇದ್ದೇ ಇರುತ್ತದೆ ಎಂದರು
ರೈತಸಿರಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ನಟ, ನಿರ್ದೇಶಕ ರಿಶಬ್ ಶೆಟ್ಟಿ ಅವರು, ವೇದಿಕೆಯ ಮೇಲಿನ ಕುರ್ಚಿಗಳು ತುಂಬುದಕ್ಕಿಂತಲೂ, ಸಭಿಕರ ಸಾಲಿನ ಕುರ್ಚಿಗಳು ತುಂಬುವುದರಿಂದ ಸಭೆಯ ಗಾಂಭೀರ್ಯತೆ ಹೆಚ್ಚಾಗುತ್ತದೆ. ದೇಶದ ಬೆನ್ನೇಲುಬುಗಳಾಗಿರುವ ರೈತ ವರ್ಗದ ಸಂಕಷ್ಟಗಳಿಗೆ ಸಮಾಜ ಸ್ಪಂದಿಸಬೇಕು. ರೈತರ ಅಭಿವೃದ್ಧಿಯ ಸದುದ್ದೇಶಕ್ಕಾಗಿ ಎಷ್ಟೋ ಸಹಕಾರಿ ಸಂಘಗಳು ಹುಟ್ಟಿದ್ದರೂ, ಅದರಲ್ಲಿ ಯಶಸ್ಸು ಕಂಡಿರುವ ಸಂಘಗಳ ಬೆರಳೆಣಿಕೆಯಷ್ಟು ಮಾತ್ರ, ಅದರಲ್ಲಿ ಮುಂಚೂಣಿಯಲ್ಲಿ ಇರುವುದು ಖಂಬದಕೋಣೆಯ ರೈತರ ಸೇವಾ ಸಹಕಾರಿ ಸಂಘ ಎನ್ನುವ ಹೆಮ್ಮೆ ಇದೆ. ರೈತರಿಗೆ ಅಗತ್ಯವಾಗಿರುವ ಎಲ್ಲವನ್ನು ಒಂದೇ ಸೂರಿನಡಿಯಲ್ಲಿ ನೀಡುವ ಅಗ್ರಿಮಾಲ್ ಯೋಜನೆ ಅತ್ಯಂತ ಸುತ್ಯರ್ಹವಾದುದು ಎಂದರು.
ಸ್ವ-ಸಹಾಯ ಗುಂಪುಗಳಿಗೆ ಸವಲತ್ತು ವಿತರಣೆ ಮಾಡಿ ಮಾತನಾಡಿದ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಅವರು, 100 ಕೋಟಿಗಳಿಂತಲೂ ಹೆಚ್ಚಿನ ಠೇವಣೆಯನ್ನು ಹೊಂದಿರುವ ಖಂಬದಕೋಣೆಯ ರೈತರ ಸೇವಾ ಸಹಕಾರಿ ಸಂಘದ ಮಾದರಿ ಸಂಘವಾಗಿ ಬೆಳೆಯುತ್ತಿದೆ. ಸಂಸ್ಥೆಯ ಬೆಳವಣಿಗೆ ಆಗುವುದು ಸಂಸ್ಥೆಯ ಸದಸ್ಯರು ಹಾಗೂ ಗ್ರಾಹಕರಿಂದ ಮಾತ್ರ. ರೈತರ ವಿಶ್ವಾಸವನ್ನು ಇರಿಸಿಕೊಂಡು ಸಂಸ್ಥೆ ಮುನ್ನಡೆಯಲಿ ಎಂದು ಹಾರೈಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು, ರೈತಸಿರಿ ಗುಂಪುಗಳಿಗೆ ಸಮವಸ್ತ್ರ ವಿತರಣೆ ಮಾಡಿದರು.ಕೆರ್ಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಧವ ದೇವಾಡಿಗ, ಖಂಬದಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ್ ಶೆಟ್ಟಿ, ಖಂಬದಕೋಣೆಯ ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡ್, ಪ್ರಭಾರ ಸಿಇಓ ವಿಷ್ಣು ಆರ್ ಪೈ, ನಿರ್ದೇಶಕರಾದ ಕೆ.ಮೋಹನ್ ಪೂಜಾರಿ, ಗುರುರಾಜ್ ಹೆಬ್ಬಾರ್, ವಿರೇಂದ್ರ ಶೆಟ್ಟಿ, ಮಂಜು ದೇವಾಡಿಗ, ನಾಗರಾಜ್ ಖಾರ್ವಿ, ಭರತ್ ದೇವಾಡಿಗ, ಹೂವ ನಾಯ್ಕ್, ದಿನೀತಾ ಶೆಟ್ಟಿ, ಜಲಜಾಕ್ಷಿ ಪೂಜಾರಿ ಇದ್ದರು.
ಕಾಲ್ತೋಡು ಮೆಟ್ಟಿನಹೊಳೆ, ಶ್ರೀ ಮಹಾಲಸ ಮಾರಿಕಾಂಬಾ ನವೋದಯ ಸ್ವಸಹಾಯ ಗುಂಪಿಗೆ ಹಾಗೂ ಉಪ್ಪುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಸಹಾಯ ಧನ ವಿತರಿಸಲಾಯಿತು. ರೈತ ಕೂಟದ ಸದಸ್ಯರಿಗೆ ಸವಲತ್ತು ಹಾಗೂ ಮಲ್ಲಿಗೆ ಗಿಡ ವಿತರಿಸಲಾಯಿತು. ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕ ಮಂಜು ದೇವಾಡಿಗ ಸ್ವಾಗತಿಸಿದರು, ಖಂಬದಕೋಣೆಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು, ಆರ್.ಜೆ ನಯನಾ ಶೆಟ್ಟಿ ನಿರೂಪಿಸಿದರು, ಖಂಬದಕೋಣೆಯ ರೈತರ ಸೇವಾ ಸಹಕಾರಿ ಸಂಘದ ಪ್ರಭಾರ ಸಿಇಓ ವಿಷ್ಣು ಆರ್ ಪೈ ವಂದಿಸಿದರು.
Comments are closed.