(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಮಳೆಗಾಲದಲ್ಲಿ ನೆರೆ ಕಾಣಿಸಿಕೊಂಡಾಗ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾದ ತುರ್ತು ಕಾರ್ಯಗಳು, ಇಲಾಖೆಯ ರಕ್ಷಣಾ ಕಾರ್ಯವೈಖರಿಯನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಅಣಕು ಪ್ರದರ್ಶನ ಬುಧವಾರ ತಾಲೂಕು ಆಡಳಿತ, ಅಗ್ನಿಶಾಮಕ ದಳದ ನೇತೃತ್ವದಲ್ಲಿ, ವಿವಿಧ ಇಲಾಖೆಗಳ ಉಪಸ್ಥಿತಿಯಲ್ಲಿ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದಲ್ಲಿನ ವಾರಾಹಿ ನದಿತೀರದಲ್ಲಿ ನಡೆಯಿತು.
ನೆರೆ ಬಂದಾಗ ಸ್ಥಳಕ್ಕಾಗಮಿಸುವ ಅಗ್ನಿಶಾಮಕದಳದ ಕಾರ್ಯಾಚರಣೆ, ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವ್ಯಕ್ತಿಗಳ ರಕ್ಷಣೆ, ಪ್ರಥಮ ಚಿಕಿತ್ಸೆ ಇತ್ಯಾದಿಗಳ ಪ್ರಾತ್ಯಕ್ಷಿಕೆ ನಡೆಯಿತು. ಕುಂದಾಪುರ ಕಂದಾಯ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಪೊಲೀಸ್ ಉಪವಿಭಾಗದ ಸಂಬಂಧಿತ ಠಾಣೆಗಳು, ಗೃಹರಕ್ಷಕ, ಅರಣ್ಯ ಇಲಾಖೆ, ಕುಂದಾಪುರ ಪುರಸಭೆ, ಬಳ್ಕೂರು ಗ್ರಾಮ ಪಂಚಾಯತ್, ವಲಯ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಈ ಅಣಕು ಪ್ರದರ್ಶನ ನಡೆದಿದೆ.ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿದ್ದರು.
ಈ ವೇಳೆ ಮಾತನಾಡಿದ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ, ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪವಾಗಿ ಪ್ರವಾಹ ಹೆಚ್ಚಿದ್ದಾಗ ಸಮಸ್ಯೆ ಉಂಟಾದ ಸಂದರ್ಭ ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು, ಇಲಾಖೆ, ಅಗ್ನಿಶಾಮಕ ದಳದವರು ಹೇಗೆ ಪರಿಸ್ಥಿತಿಯನ್ನು ನಿಬಾಯಿಸುತ್ತಾರೆ ಎನ್ನುವುದನ್ನು ಸಾರ್ವಜನಿಕರ ಮುಂದೆ ಅಣಕು ಪ್ರದರ್ಶನದ ರೂಪದಲ್ಲಿ ತೋರಿಸಲಾಗಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಅಣಕು ಪ್ರದರ್ಶನ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಬಳ್ಕೂರು ಗ್ರಾಮಪಂಚಾಯತ್ ಅಧ್ಯಕ್ಷ ನಿಶ್ಚಿತ್ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಕುಂದಾಪುರ ಅಗ್ನಿಶಾಮಕದಳ ಠಾಣಾಧಿಕಾರಿ ಬಾಬು ಶೆಟ್ಟಿ, ಕುಂದಾಪುರ ವಲಯ ಶಿಕ್ಷಣಾಧಿಕಾರಿ ಅರುಣ ಕುಮಾರ್ ಶೆಟ್ಟಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಕಂಡ್ಲೂರು ಗ್ರಾಮಾಂತರ ಠಾಣಾಧಿಕಾರಿ ನಿರಂಜನ ಗೌಡ, ಪಿಎಸ್ಐ ಸುಹಾಸ್, ಬಳ್ಕೂರು ಗ್ರಾಪಂ ಪಿಡಿಒ ಸುಜಾತಾ, ಸದಸ್ಯರು, ಅಂಗನವಾಡಿ ಮೇಲ್ವಿಚಾರಕಿ ಭಾಗ್ಯವತಿ, ಪುರಸಭೆ ಪರಿಸರ ಅಭಿಯಂತರ ರಾಘವೇಂದ್ರ, ಸದಾನಂದ ಬಳ್ಕೂರು ಮೊದಲಾದವರು ಇದ್ದರು.
ಬಳ್ಕೂರು ಗ್ರಾಮ ಪಂಚಾಯಿತಿ ಸಹಕಾರದಲ್ಲಿ ವಿವಿಧ ಇಲಾಖೆ ಮೂಲಕ ನೆರೆ ಹಾಗೂ ನೀರಲ್ಲಿ ಬಿದ್ದವರ ಸಂರಕ್ಷಣೆ ಅಣುಕು ಪ್ರಾತ್ಯಕ್ಷಿಕೆ ನಡೆಸಲಾಗಿದೆ. ನೆರೆಯಲ್ಲಿ ಸಿಕ್ಕವರ, ಹಾಗೂ ನದಿಯಲ್ಲಿ ದುರಂತ ಸಭಂವಿಸಿದಾಗ ಯಾರನ್ನ ಸಂಪರ್ಕಸಬೇಕು, ಏನು ಮಾಡಬೇಕು ಎನ್ನುವ ಸ್ಪಷ್ಟ ಅರಿವಿದ್ದರೆ, ನೆರೆಯಲ್ಲಿ ಸಿಕ್ಕವರ ಸ್ಥಳಾಂತರ, ಆಸ್ತಿ, ಜನ ಹಾಗೂ ಜಾನುವಾರು ರಕ್ಷಣೆ ಸಾಧ್ಯ.
-ಕಿರಣ್ ಜಿ.ಗೌರಯ್ಯ, ಕುಂದಾಪುರ ತಹಶಿಲ್ದಾರ್
ನೆರೆ, ಪ್ರಾಕೃತಿಕ ವಿಕೋಪ ಸಂದರಭ ರಕ್ಷಣಾ ಕ್ರಮ, ಸಿದ್ದತೆ, ಕೈಗೊಳ್ಳಬೇಕಾದ ನಿರ್ಧಾರಗಳು ಸಾರ್ವಜನಿಕರಿಗೆ ಅರಿವಿದ್ದರೆ, ದುರಂತಗಳ ತಪ್ಪಿಸುವ ಜೊತೆ ಜೀವ ರಕ್ಷಣೆ ಮಾಡಲು ಸಾಧ್ಯ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಈ ಅಣಕು ಕಾರ್ಯಾಚರಣೆ ಉದ್ದೇಶವಾಗಿದೆ.
-ಬಾಬು ಶೆಟ್ಟಿ, ಕುಂದಾಪುರ ಅಗ್ನಿಶಾಮಕ ದಳ ಠಾಣಾಧಿಕಾರಿ
ಅಣಕು ಪ್ರದರ್ಶನ ನೋಡಿದ ಚಿಣ್ಣರು.!
ವಾರಾಹಿ ನದಿಯಲ್ಲಿ ಅಯ್ಯೋ ಕಾಪಾಡಿ, ಜೀವ ಉಳಿಸಿ ಎನ್ನುವ ಆಕ್ರಂಧನದ ನಡುವೆ ಕರೆ ಬಂದ ತಕ್ಷಣ ಸೈರನ್ ಹಾಕಿಕೊಂಡು ಸಮಾರೋಪಾದಿಯಲ್ಲಿ ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ದೌಡಾಯಿಸುವುದು, ಸಿಬ್ಬಂದಿಗಳ ಕಾರ್ಯವೈಖರಿ, ಅವರೊಂದಿಗೆ ಕೂಡಿಕೊಳ್ಳುವ ಗೃಹರಕ್ಷಕ ಸಿಬ್ಬಂದಿ. ನೀರಿನಲ್ಲಿ ಮುಳುಗಿದ ವ್ಯಕ್ತಿಗಳನ್ನು ನಾಜೂಕಾಗಿ ಎತ್ತಿ ರಕ್ಷಿಸಿ ದಡಕ್ಕೆ ತರುವುದು. ಹಾಗೂ ಅಲ್ಲಿಂದ ಸ್ಟ್ರಕ್ಚರ್ ಮೂಲಕ ಅಂಬುಲೆನ್ಸ್ ವಾಹನಕ್ಕೆ ಹಾಕಿ ತುರ್ತು ಚಿಕಿತ್ಸೆಗೆ ಕಳಿಸುವ ಪ್ರಕ್ರಿಯೆ ಅಣಕು ಕಾರ್ಯಾಚರಣೆ ನಡೆದಿದ್ದು ಈ ವೇಳೆ ಸ್ಥಳೀಯ ಶಾಲಾ ಪುಟಾಣಿಗಳು ಹಾಜರಿದ್ದರು. ಅಣಕು ಪ್ರದರ್ಶನವಾದ್ದರಿಂದ ಒಂದಷ್ಟು ಖುಷಿ ಪಡುವ ಜೊತೆ ಪ್ರಾಕೃತಿಕ ವಿಕೋಪದ ವಿಚಾರಗಳನ್ನು ಇದರಲ್ಲಿ ವೀಕ್ಷಿಸಿದರು.
ಅಣಕು ಕಾರ್ಯಾಚರಣೆ ಹೇಗಿತ್ತು..!
ಅಗ್ನಿಶಾಮಕ ದಳದ ಬೋಟ್ ಆಗಮನ.. ಅಗ್ನಿಶಾಮಕ ಸಿಬ್ಬಂದಿಗಳು ನೀರಿನಲ್ಲಿ ಬಿದ್ದ ವ್ಯಕ್ತಿ ಸುತ್ತಿವರಿದು, ಅರೆಕ್ಷಣದಲ್ಲಿ ನದಿಯಲ್ಲಿ ಬಿದ್ದ ವ್ಯಕ್ತಿ ಎತ್ತಿ ಬೋಟಿಗೆ ಹಾಕಿ ತೀರಕ್ಕೆ ಕರೆತರುವುದು. ನದಿಯಲ್ಲಿ ಬರುತ್ತಿರುವ ಬೋಟ್ ಎಳೆದುಕೊಳ್ಳಲು ಸಾಲಾಗಿ ನಿಂತ, ಪೊಲೀಸ್, ಗೃಹರಕ್ಷಕ ಅಗ್ನಿಶಾಮಕ ಸಿಬ್ಬಂದಿ ಬೋಟಲ್ಲಿ ನೀರಿಗೆ ಬಿದ್ದು ಅರೆಪ್ರಜ್ಞಾವಸ್ಥೆಯ ವ್ಯಕ್ತಿಯನ್ನು ಎತ್ತಿ ಸ್ಟಚ್ಚರ್ನಲ್ಲಿಟ್ಟು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಕೆಲಸ ಕಣ್ಣುಮುಚ್ಚಿ ತೆರೆಯುವದರಲ್ಲಿ ನಡೆದ ಪ್ರಕ್ರಿಯೆ.
Comments are closed.