(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಕೊಲ್ಲೂರಿನಲ್ಲಿ ಇದುವರೆಗೂ ಕೂಡ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ತೆರಳಲು ನಿತ್ಯ ಹಣ ನೀಡಿ ಹೋಗಬೇಕಾದ ಪರಿಸ್ಥಿತಿ ಇಂದಿಗೂ ಇದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಕುಂದಾಪುರದಲ್ಲಿ ಸುರಿಯುವ ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸಿದರು.
ದೂರದ ಕೊಲ್ಲೂರಿನಿಂದ ಕುಂದಾಪುರಕ್ಕೆ ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯ ಶಾಲೆ-ಕಾಲೇಜಿಗೆ ತೆರಳಲು ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲ ಸಾವಿರಾರು ವರ್ಷದ ಇತಿಹಾಸವಿರುವ ಕೊಲ್ಲೂರಿಗೆ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲದಿರುವುದು ಅತ್ಯಂತ ದುಃಖದ ವಿಷಯ ಹಾಗೂ ಸರಕಾರವು ಈ ಪ್ರಸಿದ್ಧ ಸ್ಥಳಕ್ಕೆ ಇಂದಿಗೂ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡದೇ ಇರುವುದು ಒಂದು ಅತ್ಯಂತ ಗಂಭೀರವಾದ ಹಾಗೂ ಮುಜುಗರದ ವಿಷಯವಾಗಿದೆ. ಇದೇ ರೀತಿ ಕೆರಾಡಿ – ಮಾರಣಕಟ್ಟೆ `ಕುಂದಾಪುರ ಮಾರ್ಗದಲ್ಲಿ 500 ಮತ್ತು ಕೆರಾಡಿ-ಬೆಳ್ಳಾಲ-ಕುಂದಾಪುರ ಮಾರ್ಗದಲ್ಲಿ 400 ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಈಗಾಗಲೇ ಈ ಮಾರ್ಗದಲ್ಲಿ ಪರವಾನಗಿ ಇದ್ದರೂ ಸಹ ಯಾವುದೇ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಇದುವರೆಗೂ ಸಂಚರಿಸುತ್ತಿಲ್ಲ.
ಈ ಸಮಸ್ಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು,ಶಾಸಕರು,ಮಂತ್ರಿಗಳು ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಬೈಂದೂರು ಶಾಸಕರು ಕೂಡ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದರು. ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ಸಮಸ್ಯೆಯನ್ನು ಬಗೆಹರಿಸದ್ದಿದ್ದಲ್ಲಿ ತಾಲೂಕು ಮಟ್ಟದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ 5000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಡಿಪೋ ಮುಂದೆ ಧರಣಿ ಮಾಡಿ ಕೆ.ಎಸ್.ಆರ್.ಟಿ.ಸಿ ಎಲ್ಲಾ ಮಾರ್ಗದ ಬಸ್ ಗಳನ್ನು ತಡೆಹಿಡಿಯಲಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುವ ಸಮಸ್ಯೆಗಳಿಗೆ ಅಧಿಕಾರಿಗಳೇ ನೇರ ಹೊಣೆ ಎಂದು ವಿದ್ಯಾರ್ಥಿಗಳು ಆಕ್ಷೋಷ ವ್ಯಕ್ತಪಡಿಸಿದರು. ಸಮಸ್ಯೆ ಪರಿಹಾರಕ್ಕೆ ವಾರಗಳ ಗಡುವು ನೀಡಲಾಯಿತು.
ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ವತಿಯಿಂದ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಎಬಿವಿಪಿ ಕುಂದಾಪುರ ತಾಲೂಕು ಸಂಚಾಲಕ ಜಯಸೂರ್ಯ ಶೆಟ್ಟಿ, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಧ್ವನಿ, ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ನಾಗೇಶ್, ಶ್ರೀನಿಧಿ, ಬಿ.ಬಿ. ಹೆಗ್ಡೆ ಕಾಲೇಜಿನ ಅನುಷಾ, ಪ್ರಥ್ವಿ, ಕಿಶನ್, ಬಸ್ರೂರು ಶಾರದಾ ಕಾಲೇಜಿನ ದೀಪಾ, ರಂಜಿತ್, ಕೋಟೇಶ್ವರ ಕಾಲೇಜಿನ ಅಭಿ, ಆರ್.ಎನ್ ಶೆಟ್ಟಿ ಕಾಲೇಜಿನ ನಿತಿನ್, ಸುಜನ್ ಮೊದಲಾದವರಿದ್ದರು.
Comments are closed.