ಕುಂದಾಪುರ: ವಕೀಲರ ರಕ್ಷಣಾ ಅಧಿನಿಯಮವನ್ನು ವಿಧಾನಸಭಾ ಅಧಿವೇಶನದಲ್ಲಿ ಅಂಗೀಕಲಿಸಲು ಕುಂದಾಪುರ ವಕೀಲರ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದಿಂದ ಕುಂದಾಪುರ ಸಹಾಯಕ ಕಮಿಷನರ್ ಕಚೇರಿ ತನಕ ವಕೀಲರ ಜಾಥಾ ನಡೆಯಿತು.
ಈ ಸಂದರ್ಭ ಮಾತನಾಡಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ವಕೀಲರು ದಿನನಿತ್ಯ ಕಕ್ಷಿಗಾರರು ಸಾರ್ವಜನಿಕರು ಮತ್ತು ಪೊಲೀಸರು ಸೇರಿ ಸರ್ಕಾರದ ಬೇರೆ ಬೇರೆ ಇಲಾಖೆಗಳ ಬೇರೆ ಬೇರೆ ಪ್ರಾಧಿಕಾರದ ಜೊತೆಯಲ್ಲಿ ಕೆಲಸ ಮಾಡುತ್ತೇವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ದೇಶದ ಇತರ ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ ವಕೀಲರ ಮೇಲೆ ಪೊಲೀಸರು ಹಾಗೂ ಸಾರ್ವಜನಿಕರಲ್ಲಿ ಕೆಲವು ಗೂಂಡಾ ಪ್ರವೃತ್ತಿಯ ವ್ಯಕ್ತಿಗಳು ಅಲ್ಲದೇ ತಮ್ಮ ಪ್ರಕರಣದಲ್ಲಿ ನ್ಯಾಯಾಲಯದಿಂದ ಪ್ರತಿಕೂಲ ಆದೇಶ ಅಥವಾ ತೀರ್ಪು ಬಂದಾಗ ಕಕ್ಷಿಗಾರರು ಕೂಡ ವಕೀಲರ ಮೇಲೆ ಹಲ್ಲೆ ನಡೆಸಿದ ಮತ್ತು ಕೊಲೆ ಕೂಡ ನಡೆಸಿದ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗೆ ಸಾರ್ವಜನಿಕವಾಗಿ ವಕೀಲರೊಬ್ಬರನ್ನು ಪ್ರಕರಣದ ಎದುರು ಕಕ್ಷಿಗಾರರು ಹಲ್ಲೆ ನಡೆಸಿದ್ದು ಮತ್ತು ಕೆಲವು ದಿನಗಳ ಹಿಂದೆ ಪೊಲೀಸ್ ಅಧಿಕಾರಿಯೊಬ್ಬರು ಮಂಗಳೂರಿನ ಯುವ ವಕೀಲರನ್ನು ರಾತ್ರೋರಾತ್ರಿ ಎಳೆದುಕೊಂಡು ಹೋಗಿ ಹಿಂಸೆ ನೀಡಿದ ಪ್ರಕರಣ ನಡೆದಿದ್ದು ಆ ಕುರಿತು ರಾಜ್ಯಾದಂತ ವಕೀಲರು ಪ್ರತಿಭಟನೆ ನಡೆಸಿದ್ದರು. ಇಂತಹ ಅನೇಕ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದು ವಕೀಲರಿಗೆ ಜೀವ ರಕ್ಷಣೆ ಇಲ್ಲದಾಗಿದೆ. ಮುಂಬರುವ ಬೆಳಗಾವಿಯ ವಿಧಾನಸಭಾ ಅಧಿವೇಶನದಲ್ಲಿ ವಕೀಲರ ರಕ್ಷಣಾ ಅಧಿನಿಯಮ ಅಂಗೀಕರಿಸಬೇಕು ಎಂದವರು ಮನವಿ ಮಾಡಿದರು.
ಹಿರಿಯ ವಕೀಲರಾದ ಟಿ.ಬಿ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿದರು.
ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ಅವರ ಮೂಲಕವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಪದಾಧಿಕಾರಿಗಳಾದ ಬೀನಾ ಜೋಸೆಫ್, ರಿತೇಶ್ ಬಿ., ಹಾಲಾಡಿ ದಿನಕರ್ ಕುಲಾಲ್ ಮೊದಲಾದವರಿದ್ದರು.
Comments are closed.