ಕಟೀಲು: ಯಕ್ಷಗಾನದ ಸಂದರ್ಭದಲ್ಲಿ ರಂಗಸ್ಥಳದಲ್ಲೇ ಹೃದಯಾಘಾತದಿಂದ ಶ್ರೀ ದುರ್ಗಾಪರಮೇಶ್ವರೀ ಮೇಳದ ಕಲಾವಿದ ಗುರುವಪ್ಪ ಬಾಯಾರು (58) ನಿಧನರಾದರು. ಗುರುವಾರ ಡಿ.22 ರಂದು ರಾತ್ರಿ ಕಟೀಲಿನ ಸರಸ್ವತಿ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನದಲ್ಲಿ ಈ ಘಟನೆ ನಡೆದಿದೆ.
ಸರಸ್ವತೀ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟದ ತ್ರಿಜನ್ಮ ಮೋಕ್ಷ ಪ್ರಸಂಗ ನಡೆಯುತಿತ್ತು. ಬಾಯಾರು ಅವರು ಶಿಶುಪಾಲನ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ಆ ಸಂದರ್ಭದಲ್ಲಿ ರಂಗಸ್ಥಳದಲ್ಲಿ ನಿಂತಿದ್ದ ಗುರುವಪ್ಪ ಬಾಯಾರು ಅವರು ರಂಗಸ್ಥಳದಿಂದ ಕೆಳಗಡೆ ಕುಸಿದುಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ನಿಧನರಾದರೆಂದು ತಿಳಿದುಬಂದಿದೆ.
ಅಷ್ಟಮಂಗಲ ಪ್ರಸಂಗವನ್ನೂ ಬರೆದಿದ್ದ ಅವರು ಕಳೆದ ಮಳೆಗಾಲದಲ್ಲಿ ಮಂಗಳೂರು ಪುರಭವನದಲ್ಲಿ ಯಕ್ಷಗಾನವನ್ನು ಆಡಿಸಿದ್ದರು. ನಾನಾ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು 2013ರಲ್ಲಿ ಕಟೀಲು ಮೇಳಕ್ಕೆ ಸೇರಿದ್ದರು. ಮಧುಕೈಟಭ, ಮುಂತಾದ ಕಿರೀಟ ವೇಷಗಳನ್ನು ಮಾಡುತ್ತಿದ್ದ ಅವರಿಗೆ ಅನೇಕ ಕಡೆ ಸನ್ಮಾನಳು ನಡೆದಿದೆ.
Comments are closed.