ಕುಂದಾಪುರ: ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಕೇಂದ್ರದಿಂದ ಹೆಚ್ಚುವರಿ 2500ಕೆಎಲ್ (25 ಲಕ್ಷ ಲೀಟರ್) ಸೀಮೆ ಎಣ್ಣೆ ಬಿಡುಗಡೆ ಮತ್ತು 2022-23ನೇ ಸಾಲಿನ ಹಂಚಿಕೆಗಿಂತಲೂ ಹೆಚ್ಚುವರಿ ಸೌಲಭ್ಯವನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕುಂದಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರಾವಳಿ ಪ್ರದೇಶದ ಜೀವನಾಧಾರ ಮೀನುಗಾರಿಕೆ. ಮೀನುಗಾರಿಕೆಯನ್ನೆ ಬಹುಪಾಲು ಜನರು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಮೀನುಗಾರರ ಮನವಿಯನ್ನು ಪರಿಗಣಿಸಬೇಕೆಂದು ಒತ್ತಾಯಪೂರ್ವಕವಾಗಿ ಮನವಿ ಮಾಡಿದ್ದೆ. ಅದರಂತೆ ಕೇಂದ್ರದ ಪೆಟ್ರೋಲಿಯಂ ಸಚಿವರಾದ ಹರದೀಪ ಸಿಂಗ್ ಪುರಿಯವರು ಮನವಿಗೆ ಸ್ಪಂದಿಸಿ, ಮೀನುಗಾರರ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು.
2022-23 ಸಾಲಿನಲ್ಲಿ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮಿನುಗಾರರಿಗೆ ಒಟ್ಟು 5472 ಕೆ.ಎಲ್. ಸೀಮೆ ಎಣ್ಣೆಯನ್ನು ಹಂಚಿಕೆ ಮಾಡಿತ್ತು. ಅದರಂತೆ ಹಂತಹಂತವಾಗಿ ರಾಜ್ಯದ ಮೀನುಗಾರರ ಸೌಲಭ್ಯಕ್ಕಾಗಿ 2472 ಕೆ.ಎಲ್ ಮತ್ತು 3000 ಕೆ.ಎಲ್ ಸೀಮೆ ಎಣ್ಣೆಯನ್ನು ಬಿಡುಗೊಡೆಗೊಳಿಸಿತ್ತು. ಜ.12 ರಂದು ಪೆಟ್ರೋಲಿಯಂ ಸಚಿವಾಲಯ ಹಂಚಿಕೆಗಿಂತಲೂ ಹೆಚ್ಚುವರಿಯಾಗಿ 2500 ಕೆ.ಎಲ್. ಸೀಮೆ ಎಣ್ಣೆಯನ್ನು ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸೌಲಭ್ಯಕ್ಕಾಗಿ ಬಿಡುಗಡೆಗೊಳಿಸಿ ಆದೇಶ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 2022-23ರ ಸಾಲಿನ ಅವಧಿಯ ಹಂಚಿಕೆಗಿಂತಲೂ ಹೆಚ್ಚಿನ ಪ್ರಮಾಣದ ಸೀಮೆ ಎಣ್ಣೆಯನ್ನು ರಾಜ್ಯದ ಮೀನುಗಾರರಿಗೆ ಬಿಡುಗಡೆಗೊಳಿಸಿದೆ. ಒಟ್ಟಾರೆಯಾಗಿ 7972 ಕೆ.ಎಲ್. (5472 ಕೆ.ಎಲ್.+2500ಕೆ.ಎಲ್.) ಸೀಮೆ ಎಣ್ಣೆ ಹಂಚಿಕೆಯನ್ನು 2022-23ನೆ ಸಾಲಿನಲ್ಲಿ ರಾಜ್ಯದ ಕರಾವಳಿ ಮೀನುಗಾರರು ಕೇಂದ್ರದಿಂದ ಪಡೆದುಕೊಂಡಿದ್ದಾರೆ. ಕರಾವಳಿ ಪ್ರದೇಶದ ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಸ್ಪಂದನೆಯನ್ನು ನೀಡಿದೆ.
ನಾಡಿನ ಸಮಸ್ತ ಮೀನುಗಾರರ ಪರವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿದೆ ಸದಾ ತಮ್ಮೊಂ ಕೇಂದ್ರ ಸರ್ಕಾರ ನೀಡಿದ ಸೌಲಭ್ಯಗಳನ್ನು ಸದುಪಯೋಗವಾಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಮೀನುಗಾರರಲ್ಲಿ ಮನವಿ ಮಾಡಿದ್ದಾರೆ.
Comments are closed.