ಕುಂದಾಪುರ: ಕುಂಭಾಶಿಯಿಂದ ಕುಂದಾಪುರ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಯುವಕನಿಗೆ ಕುಂಭಾಶಿ ಪಾಕಶಾಲಾ ಸಮೀಪದ ಬೀಚ್ ರಸ್ತೆ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಕುಂಭಾಶಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಳೆಕಟ್ಟು ಸಮೀಪದ ನಿವಾಸಿ ಪ್ರಶಾಂತ್ ಹಾಗೂ ಅವರ ಸ್ನೇಹಿತ ವಿಘ್ನೇಶ್ ಕೆಲಸದ ನಿಮಿತ್ತ ಕುಂದಾಪುರ ಕಡೆಗೆ ಹೋಗುವಾಗ ಈ ಅಪಘಾತ ಸಂಭವಿಸಿದ್ದು ಬೈಕ್ ಚಾಲನೆ ಮಾಡುತ್ತಿದ್ದ ಯುವಕ ಪ್ರಶಾಂತ್ ಪೂಜಾರಿ (25) ತೀವ್ರ ಸ್ವರೂಪದ ಗಾಯಗಳಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಬೈಕ್ ಸಹಸವಾರ ವಿಘ್ನೇಶ್ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕುಂಭಾಶಿ ಬೀಚ್ ರಸ್ತೆಯಿಂದ ಬಂದ ಕಾರು ಏಕಾಏಕಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರ ಕಡೆಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅದೇ ದಿಕ್ಕಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಕಾರು ಮತ್ತು ಬೈಕ್ ಡಿಕ್ಕಿ ಹೊಡೆದು ಸರಣಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಬೈಕ್, ಕಾರು ಜಖಂ ಗೊಂಡಿದೆ. ಅಲ್ಲದೆ ಬಸ್ಸಿನ ಮುಂಭಾಗಕ್ಕೂ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣೆ ಠಾಣಾಧಿಕಾರಿ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.
Comments are closed.