(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ತಾಲೂಕಿನ ಕೋಟೇಶ್ವರದ ಮಠದಬೆಟ್ಟಿನ ನಿವಾಸಿ ಶಿಥಿಲವಾದ ಗುಡಿಸಲು ವಾಸಿಯಾಗಿದ್ದ ನೀಲು ಅಜ್ಜಿಯ ಕನಸಿನ ಸೂರಿಗೆ ಸಮಾನ ಮನಸ್ಕರರ ತಂಡ ಹೆಗಲಾಗಲಿದ್ದು ‘ನೀಲು ನಿಲಯ’ ಮನೆ ಹಸ್ತಾಂತರ ಕಾರ್ಯಕ್ರಮ ಸರಳವಾಗಿ ಎ.5 ಬೆಳಿಗ್ಗೆ ನಡೆಯಿತು.
ಎರಡೂವರೆ ತಿಂಗಳ ಅಭಿಯಾನ..ಸೂರು ನಿರ್ಮಾಣ..!
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ಕೆ ನುಕ್ಕೆ ಸೊಪ್ಪು ಸಂಗ್ರಹಿಸಿ ನೀಡುವ ಕಾರ್ಯವನ್ನು ಹಲವು ದಶಕಗಳಿಂದ ಮಾಡುತ್ತಾ ಬಂದ ಪರಿಶಿಷ್ಟ ಜಾತಿ ಸಮುದಾಯದ ನೀಲು ಅಜ್ಜಿಗೆ ಇರಲು ಸೂರು ಇರಲಿಲ್ಲ. ಕೋಟೇಶ್ವರ ಗ್ರಾಮಪಂಚಾಯತ್ ನಲ್ಲಿ ನಡೆಯುವ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಗ್ರಾ.ಪಂ ನಿಂದ ಮನೆ ನೀಡಲು ನೀಲು ಅಜ್ಜಿಯಿದ್ದ ಜಾಗದಲ್ಲಿನ ದಾಖಲೆ ಪತ್ರಗಳ ಸಮಸ್ಯೆಯಿಂದ ತೊಡಕುಂಟಾಗಿತ್ತು. ಆದರೆ ಇದನ್ನು ಮನಗಂಡ ಗ್ರಾಮಪಂಚಾಯತ್ ಮನೆ ರಿಪೇರಿಗಾಗಿ ತುರ್ತು 15 ಸಾವಿರ ಅನುದಾನ ನೀಡಲಾಗಿತ್ತು. ಸಂಪೂರ್ಣ ಮನೆ ನಿರ್ಮಾಣಕ್ಕೆ ಗ್ರಾ.ಪಂ ಅಧ್ಯಕ್ಷರು, ಪಿಡಿಓ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಗ್ರಾ.ಪಂ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಂಕದಕಟ್ಟೆ ಮನೆ ನಿರ್ಮಾಣದ ಸಂಪೂರ್ಣ ಜವಬ್ದಾರಿ ಹೊತ್ತು ಸಮಾನ ಮನಸ್ಕ ದಾನಿಗಳ ಸಹಕಾರದೊಂದಿಗೆ ನೀಲು ಅಜ್ಜಿಗೆ ಸೂರು ನಿರ್ಮಿಸಿದ್ದರು. ದೇವಸ್ಥಾನದವರು ಕೂಡ ಮನೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿದ್ದರು. ಕೇವಲ ಎರಡೂವರೆ ತಿಂಗಳ ಹಿಂದೆ ನೀಲು ಅಜ್ಜಿ ಸೂರು ನಿರ್ಮಾಣದ ಅಭಿಯಾನ ಆರಂಭವಾಗಿದ್ದು ಇದೀಗಾ ‘ನೀಲು ನಿಲಯ’ ಹಸ್ತಾಂತರವಾಗಿದೆ.
ವಿಶ್ವೇಶ್ವರ ಉಡುಪ ಪೂಜಾವಿಧಿ ನೆರವೇರಿಸಿ ಗೃಹಪ್ರವೇಶ ನೆರವೇರಿಸಿದರು. ವೇಳೆ ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ ದೇವಾಡಿಗ, ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ನಾಗರಾಜ ಎಂ. ಕಾಂಚನ್, ರಾಘವೇಂದ್ರ ಪೂಜಾರಿ, ರಾಜು ಮರಕಾಲ, ಉದಯ ನಾಯಕ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್, ಉದ್ಯಮಿಗಳಾದ ಮಹೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ಸಮಾಜ ಸೇವಕ ದಿನೇಶ್ ಬಾಂಧವ್ಯ, ಜನಸೇವಾ ಟ್ರಸ್ಟ್‌ನ ವಸಂತ ಗಿಳಿಯಾರ್, ಸ್ಥಳೀಯರಾದ ಸುನೀಲ್ ದಫೇದಾರ್, ರವಿ ಕಾಗೇರಿ, ಕೋಟೇಶ್ವರ ಎಸ್.ಎಲ್.ಆರ್.ಎಂ ಘಟಕದ ಮೇಲ್ವಿಚಾರಕಿ ಅನ್ನಪೂರ್ಣ ಇದ್ದರು.
ಶಿಥಿಲವಾಗಿದ್ದ ಗುಡಿಸಲು..!
ಆಗಲೋ-ಈಗಲೋ ಬೀಳುವಂತಿದ್ದ ಗೆದ್ದಲು ಹಿಡಿದ ಹಳೆಯ ಗೋಡೆ, ಮೇಲ್ಛಾವಣಿಗೆ ಹಳೆಯ ಟಾರ್ಪಾಲು ಹೊದಿಕೆ, ಅದಕ್ಕೆ ಆಧಾರವಾಗಿ ನಿಲ್ಲಿಸಿದ ಮರದ ಗೆಲ್ಲು ಈ ಗುಡಿಸಲಿನ ಫಿಲ್ಲರ್ ಆಗಿತ್ತು. ಅರವತ್ತರ ಇಳಿವಯಸ್ಸಿನ ನೀಲು ಅಜ್ಜಿ ಈ ಗುಡಿಸಲಲ್ಲಿ ಒಂಟಿಯಾಗಿ ದುಸ್ತರ ಬದುಕು ನಡೆಸುತ್ತಿದ್ದು ಗಮನಕ್ಕೆ ಬಂದ ಬಳಿಕ ಗ್ರಾ.ಪಂ ನೇತೃತ್ವ, ದಾನಿಗಳ ಸಹಕಾರದಲ್ಲಿ ಇದೀಗಾ ನೀಲು ಅವರಿಗೆ ಸುಸಜ್ಜಿತ ಸೂರು ಸಿಕ್ಕಿದೆ.
Comments are closed.