ಕುಂದಾಪುರ: ಭಯೋತ್ಪಾದಕ ಎಂದು ನನ್ನನ್ನು , ನನ್ನ ಪಕ್ಷದ ಕಾರ್ಯಕರ್ತರನ್ನು ಬಿಂಬಿಸಿದ್ದೀರೋ ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಭಯೋತ್ಪಾದನೆಗೆ ಬೆಂಬಲ ಕೊಟ್ಟಿರುವ ಕೇಸುಗಳಿದ್ದರೆ ನೀವು ತೋರಿಸಬೇಕು. ಇಲ್ಲವಾದಲ್ಲಿ ಈ ಕ್ಷೇತ್ರದ ಜನರೆದುರುವ ನೀವು ಕ್ಷಮೆ ಕೇಳಬೇಕು. ನಿಮ್ಮ ಹೇಳಿಕೆಗೆ ನಿಮ್ಮ ವಿರುದ್ದ ಕೇಸು ಹಾಕಲು ಹೋಗುವುದಿಲ್ಲ. ತಾಯಿ ಮೂಕಾಂಬಿಕೆ ಇದ್ದಾಳೆ. ನೀವು ಹೇಳಿರುವ ಮಾತು ಸತ್ಯವೋ, ಸುಳ್ಳೋ ಅವಳೇ ನಿರ್ಧರಿಸುತ್ತಾಳೆ. ನಿಮ್ಮ ಸುಳ್ಳುಗಳು ಇಲ್ಲಿಗೆ ಕೊನೆಯಾಗಬೇಕು ಎಂದು ಕೆ. ಗೋಪಾಲ ಪೂಜಾರಿ ಸಚಿವ ಶ್ರೀನಿವಾಸ ಪೂಜಾರಿಯವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಸಹಸ್ರಾರು ಕಾರ್ಯಕರ್ತರೊಂದಿಗೆ ಯಡ್ತರೆ ಬೈಪಾಸ್ ನಿಂದ ಪಾದಯಾತ್ರೆ ನಡೆಸಿ ಬಳಿಕ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ನಡೆದ ಬೃಹತ್ ಬಹಿರಂಗಸಭೆಯಲ್ಲಿ ಅವರು ಮಾತನಾಡಿದರು.
ಭಯೋತ್ಪಾದನೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ಶ್ರೀನಿವಾಸ ಪೂಜಾರಿ ಅವರಿಗಿಲ್ಲ. ಅವರದೇ ಪಕ್ಷದ ಕಾರ್ಯಕರ್ತ ಯಡಮೊಗೆ ಉದಯ ಗಾಣಿಗ ಕೊಲೆ, ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳು ಯಾರು ಎನ್ನುವುದು ತಿಳಿದಿಲ್ಲವೇ? ಬಿಜೆಪಿ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಾದಾಗ ನಿಮ್ಮ ಪಕ್ಷದ ಕಾರ್ಯಕರ್ತರು ಓಡಿಸಿಕೊಂಡು ಬಂದದ್ದು ಯಾರನ್ನ ಎನ್ನುವುದು ನಿಮ್ಮ ಗಮನಕ್ಕಿರಲಿ. ಶ್ರೀನಿವಾಸ ಪೂಜಾರಿಯವರಿಗೆ ಅಧಿಕಾರದ ಮದ ಏರಿದೆ. ಕರಾವಳಿಗೆ ಕುಚಲಕ್ಕಿ ಕೊಡುತ್ತೇನೆಂದು ಹೇಳಿಕೆ ಕೊಟ್ಟು ಕೊನೆಗೂ ಕುಚಲಕ್ಕಿ ಕೊಡುವ ಕೆಲಸಕ್ಕೆ ಮುಂದಾಗಿಲ್ಲ. ನಾನು ನಾಲ್ಕು ಅವಧಿಗೆ ಶಾಸಕನಾಗಿ ಜನರ ನೋವು ನಲಿವುಗಳಿಗೆ ಸ್ಪಂದಿಸಿದ್ದೇನೆ ಬಿಟ್ಟರೆ ನಿಮ್ಮ ಹಾಗೆ ಜನರಿಗೆ ಸುಳ್ಳು ಹೇಳಿಲ್ಲ.
ಸಚಿವ ಶ್ರೀನಿವಾಸ ಪೂಜಾರಿಯವರ ಭಯೋತ್ಪಾದಕ ಹೇಳಿಕೆಯ ವಿರುದ್ದ ವಾಗ್ದಾಳಿ ನಡೆಸಿದ ಕೆ. ಗೋಪಾಲ ಪೂಜಾರಿ ಅವರು, ಭಯೋತ್ಪಾದಕರು ಯಾರು, ಯಾವ ಪಕ್ಷದವರೆಂದು ಜನರಿಗೆ ತಿಳಿದಿದೆ. ಸ್ವಾತಂತ್ರ್ಯ ಸಿಕ್ಕ ದಿನಗಳಲ್ಲಿ ಒಂದು ಸೂಜಿ ಉತ್ಪಾದನೆಗೂ ಸಾಧ್ಯವಾಗದ ಭಾರತಕ್ಕೆ ನಾಯಕತ್ವ ಕೊಟ್ಟಿದ್ದು ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷ. ಇಂದು ಇಡೀ ವಿಶ್ವದಲ್ಲೇ ಭಾರತ ಮುಂಚೂಣಿಯಲ್ಲಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ನಮ್ಮ ನಾಯಕರಾದ ಇಂದಿರಾಗಾಂಧಿ, ರಾಜೀವ್ ಗಾಂದಿಯವರು ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಇದಕ್ಕಿಂತ ದೊಡ್ಡ ದೇಶಭಕ್ತರ ಪಕ್ಷ ನಿಮಗೆ ಬೇಕಾ ಎಂದು ಪ್ರಶ್ನಿಸಿದರು.
ನಾನು ನಾಲ್ಕು ಬಾರಿ ಅಧಿಕಾರದಲ್ಲಿದ್ದಾಗ ರಾಜಕೀಯ ಮಾಡಿದವನಲ್ಲ. ಯಾರೇ ನನ್ನ ಮನೆಗೆ ಬಂದರೂ ಅವರಿಗೆ ನನ್ನ ಕೈಲಾದ ಕೆಲಸ ಮಾಡಿಕೊಡಿಸುತ್ತಿದ್ದೆ. ಕಾಂಗ್ರೆಸ್, ಬಿಜೆಪಿ ಎಂದು ನೋಡಿಲ್ಲ. ಬಿಜೆಪಿಗರಂತೆ ಸುಳ್ಳು ಭರವಸೆಗಳನ್ನು ಕೊಟ್ಟಿಲ್ಲ. ಏನೆಲ್ಲಾ ಭರವಸೆಗಳನ್ನು ಕೊಟ್ಟಿದ್ದೇನೊ ಆ ಭರವಸೆಗಳನ್ನು ಅವಧಿಯಲ್ಲಿ ಈಡೇರಿಸಿದ್ದೇನೆ. ಬೈಂದೂರು ಪ್ರತ್ಯೇಕ ತಾಲೂಕು, ಆಡಳಿತ ಸೌಧಕ್ಕೆ ೧೦ ಕೋಟಿ ರೂ. ಹಣ ಬಿಡುಗಡೆ, ಐಟಿಐ ಕಾಲೇಜು, ಕೆಇಬಿ ಸಬ್ ಡಿವಿಜನ್, ಶಾಸಕರ ಕಚೇರಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಬೈಂದೂರು ಜನತೆಗೆ ನೀಡಿದ್ದೇನೆ ಎಂದರು.
ನಮ್ಮ ಅವಧಿಯಲ್ಲಿ ಗ್ಯಾಸ್ 400 ರೂ ಇದ್ದಾಗ ಶಾಸ್ತ್ರೀವೃತ್ತದಲ್ಲಿ ಗ್ಯಾಸ್ ಮತ್ತು ಒಲೆ ತಂದು ಚಪಾತಿ ಮಾಡಿದ ಶೋಭಾ ಕರಂದ್ಲಾಜೆ ಇದೀಗ ಗ್ಯಾಸ್ ಬೆಲೆ 1200 ಆದಾಗ ಎಲ್ಲಿಗೆ ಹೋಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಜನರು ಹೈರಾಣಾಗಿದ್ದಾರೆ. ನಿಮಗೆ ಮತ್ತೆ ಜನಪರ ಸರ್ಕಾರ ಬೇಕು ಎಂದಾದರೆ ನೀವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕೆ. ಗೋಪಾಲ ಪೂಜಾರಿ ಮನವಿ ಮಾಡಿಕೊಂಡರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ, ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಸಂಪಿಗೇಡಿ ಸಂಜೀವ ಶೆಟ್ಟಿ, ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ವಿಜಯ್ ಶೆಟ್ಟಿ ಕಾಲ್ತೋಡು, ರಮೇಶ್ ಗಾಣಿಗ ಕೊಲ್ಲೂರು, ವಾಸುದೇವ ಯಡಿಯಾಳ, ಗೌರಿ ದೇವಾಡಿಗ, ಮಂಜುಳಾ ದೇವಾಡಿಗ, ಪ್ರಸನ್ನ ಕುಮಾರ ಶೆಟ್ಟಿ ಕೆರಾಡಿ, ಪ್ರಚಾರ ಸಮಿತಿಯ ಸುಬ್ರಮಣ್ಯ ಭಟ್, ಶೇಖರ್ ಪೂಜಾರಿ, ಅರವಿಂದ ಪೂಜಾರಿ ಮೊದಲಾದವರಿದ್ದರು.
ಬಿದ್ದು ಮೊಣಕಾಲಿಗೆ ಪೆಟ್ಟಾದಾಗ ನನಗೆ ನೋವಾಗಿರಲಿಲ್ಲ. ಆದರೆ ನಾಲ್ಕು ಬಾರಿ ಶಾಸಕನಾಗಿ ಈ ಕ್ಷೇತ್ರದ ಜನರ ಪ್ರಾಮಾಣಿಕ ಸೇವೆ ಮಾಡಿದ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಭಯೋತ್ಪಾದಕರು ಎಂದು ಕರೆದದ್ದು ಮನಸ್ಸಿಗೆ ಭಾರೀ ನೋವಾಯಿತು. ಯಾವ ಭಯೋತ್ಪಾದಕರು ಎಂದು ಶ್ರೀನಿವಾಸ ಪೂಜಾರಿಯವರು ನನ್ನನ್ನು, ನನ್ನ ಕಾರ್ಯಕರ್ತನ್ನು ಕರೆದರೋ ಅವರಿಗೆ ಚುನಾವಣೆಯಲ್ಲಿ ನೀವೆಲ್ಲರೂ ತಕ್ಕ ಉತ್ತರ ಕೊಡಬೇಕು.
– ಕೆ. ಗೋಪಾಲ ಪೂಜಾರಿ, ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿನಾಮಪತ್ರ ಸಲ್ಲಿಕೆ
ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಇಂದು ಬೈಂದೂರಿನ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ಅವರು ನಾಮಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ವಾಸುದೇವ ಯಡಿಯಾಳ, ಎಸ್. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಇದ್ದರು.
Comments are closed.