(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಾಡಿನ ವಿಸ್ತರಣೆ ಜೊತೆಗೆ ಕಾಂಡ್ಲಾ ವನಗಳನ್ನು ಹೆಚ್ಚಿಸಬೇಕಿದೆ. ದೇಶದಲ್ಲಿ 20ಶೇಕಡಾ ಭಾಗ ನಮ್ಮಲ್ಲಿ ಅರಣ್ಯ ಪ್ರದೇಶವಿದ್ದು ಕಾಡ್ಗಿಚ್ಚು ಮೊದಲಾದ ಸಮಸ್ಯೆಗಳಿಂದ ನಾಶವಾಗುತ್ತಿದ್ದು ಇದನ್ನು ತಡೆಯಲು ಸರ್ಕಾರ, ಇಲಾಖೆ, ಸಂಘಸಂಸ್ಥೆಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ. ಜನರಿಗೆ ಅನುಕೂಲವಾಗುವಂತೆ ಸಿ.ಆರ್.ಝಡ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ಮುಂದಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅರಣ್ಯ ಇಲಾಖೆ ಮಂಗಳೂರು ವೃತ್ತ, ಕುಂದಾಪುರ ವಿಭಾಗದಿಂದ ‘ವಿಶ್ವ ಪರಿಸರ ದಿನಾಚರಣೆ-2023’ದ ಅಂಗವಾಗಿ ಜೂ.5 ಸೋಮವಾರ ಕುಂದಾಪುರ-ಕೋಡಿ ಸೇತುವೆ ಬಳಿಯ ಶ್ರೀ ನಾಗ ಜಟ್ಟಿಗೇಶ್ವರ ದೇವಸ್ಥಾನದ ಎದುರು ಹಮ್ಮಿಕೊಂಡ ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಡ್ಲಾ ಗಿಡಗಳು ಸುನಾಮಿಯಂತಹ ಪರಿಸರದ ವ್ಯತ್ಯಯಗಳನನ್ನು ತಡೆಯುತ್ತದೆ. ಕಾಂಡ್ಲಾ ವನದ ಹಸಿರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಪಕ್ಷಿ ಸಂಕುಲಕ್ಕೂ ಆಶ್ರಯ ನೀಡುವುದಲ್ಲದೆ ಜಲಚರಗಳಿಗೆ ಆವಾಸ ಸ್ಥಾನವಾಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ದೇಶದಲ್ಲಿ ಪರಿಸರ ಉಳಿಸುವ, ಅರಣ್ಯ ಬೆಳೆಸುವ ಹಾಗೂ ಸ್ವಚ್ಚತಾ ಕಾರ್ಯ ನಡೆಸುವ ಕಾರ್ಯವಾಗುತ್ತದೆ. ಪರಿಸರ, ನೀರು, ಕಾಡಿನ ಸ್ವಚ್ಚತೆಯ ಜೊತೆಗೆ ಅರಣ್ಯ ಭಾಗ ಹೆಚ್ಚು ಬೆಳಸುವ ದೃಷ್ಟಿಯಿಂದ ಸಾವಿರಾರು ಕಾರ್ಯಕ್ರಮಗಳು ನಡೆಯುತ್ತಿದ್ದು ನೆಟ್ಟ ಸಸಿಗಳ ವರ್ಧನೆಯ ಬಗ್ಗೆ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಯುವ ಪೀಳಿಗೆ ಅರಣ್ಯ ವರ್ಧನೆ ಹಾಗೂ ಸ್ವಚ್ಚತೆ, ಪರಿಸರ ರಕ್ಷಣೆ ವಿಚಾರದಲ್ಲಿ ಮುತುವರ್ಜಿ ವಹಿಸಬೇಕು. ಪರಿಸರಕ್ಕೆ ಪೂರಕವಾದ ಗಿಡಗಳನ್ನು ಬೆಳೆಸುವಲ್ಲಿ ಕಠಿಬದ್ಧರಾಗಬೇಕೆಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸುಮಾರು 1.5 ಲಕ್ಷ ಕಾಂಡ್ಲಾ ಗಿಡ ನೆಡುವ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿರುವುದು ಸಾಹಸದ ವಿಚಾರವಾಗಿದೆ. ಕಾಂಡ್ಲಾ ಗಿಡಗಳಿಂದ ಸಮುದ್ರ ಕೊರೆತ ಕಡಿಮೆಯಾಗುವುದರಿಂದ ಇದರ ಅಭಿವೃದ್ಧಿ ಮಾಡಬೇಕು. ಇದರೊಂದಿಗೆ ಸಮುದ್ರ, ನದಿ ತೀರಗಳ ಸ್ವಚ್ಚತೆಗೆ ಹೆಚ್ಚಿನ ಗಮನವನ್ನು ಸಾರ್ವಜನಿಕರು ನೀಡಬೇಕೆಂದರು.
ಇದೇ ಸಂದರ್ಭದಲ್ಲಿ ಮಾಲಾಡಿಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಸಹಕರಿಸುತ್ತಿರುವ ಸುರೇಶ್ ದೇವಾಡಿಗ ಹಾಗೂ ಕಡಲಾಮೆ ಸಂರಕ್ಷಣೆಯಲ್ಲಿ ಸಹಕಾರ ನೀಡುತ್ತಿರುವ ಬಾಬು ಮೊಗವೀರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ನದಿಯಲ್ಲಿ ಬೋಟ್ ಮೂಲಕ ತೆರಳಿದ ಶೋಭಾ ಕರಂದ್ಲಾಜೆ ನದಿ ನಡುವೆ ಬೆಳೆಸಿದ ಕಾಂಡ್ಲಾ ವನಗಳ
ವೀಕ್ಷಣೆ ಮಾಡಿದರು.
ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಕರಾವಳಿ ನಿಯಂತ್ರಣಾ ವಲಯದ ಪ್ರಾದೇಶಿಕ ನಿರ್ದೇಶಕ ಶ್ರೀಪತಿ ಬಿ.ಎಸ್., ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು ಇದ್ದರು.
ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ರಾಮಚಂದ್ರ ಸ್ವಾಗತಿಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೊಬೋ ವಂದಿಸಿದರು.
Comments are closed.