ಕರಾವಳಿ

ಬೈಂದೂರಿನ ನಾಗೂರು ಎಂಬಲ್ಲಿನ ಮನೆಯ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ | ಸೆರೆ ಹಿಡಿಯಲು ಸತತ ಕಾರ್ಯಾಚರಣೆ (Video)

Pinterest LinkedIn Tumblr

ಉಡುಪಿ: ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನ ಬಾವಿಯೊಂದರಲ್ಲಿ ಮಂಗಳವಾರ ಮೊಸಳೆ ಪ್ರತ್ಯಕ್ಷವಾಗಿದೆ. ನಾಗೂರು ಗ್ರಾಮದ ಒಡೆಯರ ಮಠದ ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ.

ಬೈಂದೂರು ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಅಗ್ನಿಶಾಮಕ ದಳ ಕಂದಾಯ ಇಲಾಖೆ ಅವರ ಸಹಾಯದೊಂದಿಗೆ ಬಾವಿಗೆ ಬಲೆ ಹಾಕುವುದರ ಮೂಲಕ ಕಾರ್ಯಾಚರಣೆ ನಡೆಸಿದರು. ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆಯವರು ಮೊಸಳೆಗೆ ಬೋನ್ ಇಟ್ಟು ನಾಗೂರು ನೆಟ್ವರ್ಕ್ ಅಂಡ್ ಸೆಕ್ಯೂರಿಟಿ ಸೊಲ್ಯೂಷನ್ಸ್ ಇವರ ಸಹಕಾರದೊಂದಿಗೆ ಬಾವಿಯ ಸುತ್ತಲೂ ಸಿ.ಸಿ ಕ್ಯಾಮೆರಾವನ್ನು ಅಳವಡಿಸಿ ದೂರದಿಂದ ಕಂಪ್ಯೂಟರ್ ಮೂಲಕ ಮೊಸಳೆಯ ಓಡಾಟವನ್ನು ಗಮನಿಸಲಾಗುತ್ತಿದೆ. ಮೊಸಳೆ ಬಾವಿಯಲ್ಲಿ ಇರುವ ಮಾಹಿತಿ ಸಿಕ್ಕಿದಂತೆ ಸಾವಿರಾರು ಜನರು ಮೊಸಳೆ ನೋಡಲು ಬರುತ್ತಿದ್ದಾರೆ.

ಸತತ ಕಾರ್ಯಾಚರಣೆ: ಮಧ್ಯಾಹ್ನ 2 ಗಂಟೆ ಹೊತ್ತಿಗೆ ಕಾರ್ಯಾಚರಣೆ ಆರಂಭಿಸಿದ್ದು ಮೊಸಳೆ ಬಾವಿಯಿಂದ ಹೊರ ಬರಲು ಬಾವಿಯ ದಂಡೆಯನ್ನು ನೆಲಸಮಾನಕ್ಕೆ ಒಡೆದು ಮೊಸಳೆ ಬೊನಿಗೆ ಕೋಳಿಯ ಮಾಂಸವನ್ನು ಹಾಕಿ ಸದ್ಯಕ್ಕೆ ಇಡಲಾಗಿದೆ. ಮೊಸಳೆಯನ್ನು ಹಿಡಿಯಲು ಇಲಾಖೆಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಸಂಜೆ 6 ಗಂಟೆಯ ತನಕ ಕಾರ್ಯಾಚರಣೆ ಮುಂದುವರೆದಿದೆ.

ಸದ್ಯ ಸಿಸಿ ಕ್ಯಾಮೆರಾದ ಮೂಲಕ ಮೊಸಳೆಯ ಚಲನ ವಲನದ ಬಗ್ಗೆ ನಿಗ್ಗಾ ಇಡಲಾಗಿದೆ. ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಿರುವ ಕಾರಣ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಮೊಸಳೆ ಬಾವಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

ಬೈಂದೂರು ತಹಶಿಲ್ದಾರ್ ಪ್ರದೀಪ್, ಪಿಎಸ್ಐ ತಿಮ್ಮೇಶ್ ಬಿ.ಎನ್., ಅರಣ್ಯಾಧಿಕಾರಿ ಸಂದೇಶ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

Comments are closed.