ಹೊಸದಿಲ್ಲಿ: ಯಾರೇ ಕೂಗಾಡಲಿ..ಯಾರೇ ಹೋರಾಡಲಿ…ಎಮ್ಮೇ ನಿನಗೆ ಸಾಟಿ ಇಲ್ಲ…ಬೆಳ್ಳಿ ತೆರೆಯ ಮೇಲೆ ಅಣ್ಣಾವ್ರ ಹಾಡಿದ ಈ ಹಾಡನ್ನು ಈಗ ಹರಿಯಾಣ ಮೂಲದ ಕೃಷಿಕ ಕರ್ಮವೀರ ಸಿಂಗ್ ಸ್ವಲ್ಪ ಬದಲಾಯಿಸಿ ಹಾಡುತ್ತಿದ್ದಾರೆ. ಎಮ್ಮೆ ಬದಲಿಗೆ ವರ್ಷಕ್ಕೆ 45 ಲಕ್ಷ ರೂ. ದುಡಿಯುವ ತಮ್ಮ ಕೋಣದ ಗುಣಗಾನ ಮಾಡುತ್ತಿದ್ದಾರೆ.
ಹೌದು, ಯುವರಾಜ ಹೆಸರಿನ ಮುರ‌್ರಾ ತಳಿಯ ಕೋಣ ‘ಯುವರಾಜ’ ಕರ್ಮವೀರ ಸಿಂಗ್ ಅವರ ಅದೃಷ್ಟದ ಬಾಗಿಲನ್ನು ತೆರೆದಿದೆ. ಕೃತಕ ಗರ್ಭಧಾರಣೆಗಾಗಿ ಈ ಕೋಣದ ವೀರ್ಯವನ್ನು ಮಾರುವ ಮೂಲಕ ಸಿಂಗ್ ವರ್ಷಕ್ಕೆ 40ರಿಂದ 45 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.
ಇತ್ತೀಚೆಗೆ ಇಲ್ಲಿ ನಡೆದ ಕೃಷಿ ಮೇಳದಲ್ಲಿ ನಿಜಕ್ಕೂ ‘ಯುವರಾಜ್ ಸಿಂಗ್’ ಕೋಣ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ದೇಶದ ವಿವಿಧೆಡೆಯಿಂದ ಬಂದಿದ್ದ ರೈತರು ಈ ಕೋಣದ ವೀರ್ಯಕ್ಕಾಗಿ ಅಕ್ಷರಶಃ ಮುಗಿಬಿದ್ದಿದ್ದರು.
ಇವರ ಕಾಟ ತಡೆಯಲಾದರೆ, ಕೊನೆಗ ಕರ್ಮವೀರ ಸಿಂಗ್ ಅವರನ್ನೆಲ್ಲಾ ಹರಿಯಾಣದ ಕುರುಕ್ಷೇತ್ರದ ಬಳಿ ಇರುವ ತಮ್ಮ ಗ್ರಾಮಕ್ಕೆ ಬರುವಂತೆ ಮನವಿ ಮಾಡಿದರು.
9 ಕೋಟಿ ಕೊಟ್ಟರೂ ಕೊಡಲ್ಲ:
ಕರ್ಮವೀರ್ ಅವರ ಬಳಿ ಇರುವ ಮುರ‌್ರಾ ಕೋಣಕ್ಕೆ ಬೇಡಿಕೆ ಎಷ್ಟಿದೆಯೆಂದರೆ, ಈಗಾಗಲೇ ಕೆಲವರು ಇದಕ್ಕೆ 9 ಕೋಟಿ ರೂ.ಗೆ ಬೆಲೆ ಕಟ್ಟಿ ಮಾರಲು ಕೋರಿದ್ದರಂತೆ. ಆದರೆ, ಇದಕ್ಕೆ ಸಿಂಗ್ ಬಿಲ್‌ಕುಲ್ ಒಪ್ಪಿಲ್ಲ.
ತಿಂಗಳಿಗೆ 25,000 ರೂ. ಖರ್ಚು:
”ಎಂಟು ವರ್ಷ ವಯಸ್ಸಿನ ‘ಯುವರಾಜ’ನ ಆಹಾರಕ್ಕಾಗಿ ತಿಂಗಳಿಗೆ 25,000 ರೂ. ಖರ್ಚು ಮಾಡುತ್ತೇನೆ. ಇದರಿಂದ ಬರುವ ಆದಾಯವನ್ನು ಫಾರಂನಲ್ಲಿರುವ ಇತರ ಮುರ‌್ರಾ ಎಮ್ಮೆಗಳ ಸಾಕಣೆಗೆ ಖರ್ಚು ಮಾಡುತ್ತೇನೆ,” ಎನ್ನುತ್ತಾರೆ ಸಿಂಗ್
ಡೋಸ್ ಲೆಕ್ಕದಲ್ಲಿ ವೀರ್ಯ ಮಾರಾಟ:
‘ಯುವರಾಜ’ನ ವೀರ್ಯವನ್ನು ಡೋಸ್ ಲೆಕ್ಕದಲ್ಲಿ ಮಾರುವ ಸಿಂಗ್, ಸಿಂಗಲ್ ಡೋಸ್‌ಗಾಗಿ 300 ರೂ. ಪಡೆಯುತ್ತಾರೆ. ಈ ವ್ಯಾಪಾರವನ್ನು ಸೇವೆಯೆಂದು ತಿಳಿದಿರುವುದರಿಂದ ಉದ್ದೇಶಪೂರ್ವಕವಾಗಿಯೇ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ ಎನ್ನುವ ಅವರು, ಪ್ರತಿಷ್ಠಿತ ಕೋಣವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡುತ್ತಿರುವುದಾಗಿಯೂ ಹೇಳಿದ್ದಾರೆ.
Comments are closed.