ಮಂಗಳೂರು: ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಬಂದಾಗ ಅನೇಕರು ಫೋನ್ ಕರೆಗಳಲ್ಲಿ ನೂರಕ್ಕೆ ನೂರು ಎಲ್ಲವನ್ನೂ ಭದ್ರವಾಗುವ ಹಾಗೆ ಮಾಡಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿ ಇಷ್ಟು ಖರ್ಚುಬರುತ್ತದೆ ಎಂದು ಹೇಳುತ್ತಾರಲ್ಲಾ ಏನು ಮಾಡುವುದು ಎಂದು ಪ್ರಶ್ನಿಸುತ್ತಾರೆ. ಈ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವಾಸ್ತವವಾಗಿ ಇದು ಸಾಧ್ಯವಿಲ್ಲ. ಹಾಗೆಂದು ಸಾಧ್ಯವಾದಷ್ಟು ಮಾಡಿಕೊಳ್ಳುವುದು ಕಡಿಮೆ ಹೊರೆಯಾಗುವಂತೆ ಸರಳ ವಿಧಾನಗಳಲ್ಲಿ ನಿರೂಪಿಸಿಕೊಳ್ಳುವುದು ಸೂಕ್ತ. ವೃಥಾ ಹಣಪೋಲು ಮಾಡಬೇಡಿ.
ಮುಖ್ಯವಾಗಿ ನಿಮ್ಮ ಮನೆ ಬಾಗಿಲು ಪೂರ್ವಭಾಗಕ್ಕೆ ಬರುತ್ತಿದ್ದಲ್ಲಿ ಪೂರ್ವಭಾಗದ ಒಂದೆಡೆ ಪುಟ್ಟ ಟೇಬಲ್ ಒಂದನ್ನು ಇರಿಸಿ ಗಾಜಿನ ಒಂದು ಚಿಕ್ಕ ಹೂದಾನಿಯಲ್ಲಿ ಕೆಂಪು, ಹಳದಿ, ಬಿಳಿ ಹೂಗಳು ಸೇರಿಕೊಂಡಿರುವ ಹೂ ಗುತ್ಛ ಒಂದನ್ನು ಎರಡು ಅಥವಾ ಮೂರು ದಿನಕ್ಕೊಮ್ಮೆ ಇಡಿ. ಹೂದಾನಿಯಲ್ಲಿ ಶುದ್ಧವಾದ ನೀರಿರಲಿ. ಹೂಗಳು ಯಾವ ಕಾರಣಕ್ಕೂ ಒಣಗುವಂತಿರ ಬಾರದು. ಮನೆಯ ಪೂಜಾಗೃಹದಲ್ಲಿ ಈ ಹೂಗಳನ್ನು ಹೂದಾನಿಯಲ್ಲಿ ಒಂದೆಡೆ ಇರಿಸಿದರೂ ಸೂಕ್ತವೇ. ಕೆಂಪು ಹಾಗೂ ಬಿಳಿ ಹೂಗಳು ಜಾಸ್ತಿ ಇರಲಿ. ಮನೆಯ ಬಾಗಿಲು ಪಶ್ಚಿಮಾಭಿಮುಖವಾಗಿದ್ದಲ್ಲಿ ಮೇಲೆ ಹೇಳಿದ ರೀತಿಯಲ್ಲೇ ಹೂಗಳನ್ನು ಸೂಕ್ತವಾಗಿ ಇರಿಸಿ. ಆದರೆ ಉಳಿದ ಹೂಗಳಿಗಿಂತ ಹಾಗೂ ಬಿಳಿ ಹೂಗಳು ಜಾಸ್ತಿ ಇರಲಿ. ಹಳದಿ ಹೂಗಳೂ ಇರಲಿ. ಆದರೆ ಪ್ರಮಾಣ ಕಡಿಮೆ ಇರಬೇಕು.
ಮನೆಯ ಬಾಗಿಲು ದಕ್ಷಿಣಾಭಿಮುಖವಾಗಿದ್ದಲ್ಲಿ ಪುಟ್ಟ ಟೇಬಲ್‌ನ ಮೇಲೆ ಚಿಕ್ಕ ಹೂದಾನಿಯಲ್ಲಿ ನೀರು ತುಂಬಿ ಪ್ರಧಾನವಾಗಿ ನೀಲಿ ಹೂಗಳು ಜಾಸ್ತಿ ಇರುವಂತೆ ಗಮನವಿರಿಸಿ ಜಾಸ್ತಿ ಹಸಿರು, ಜೇನು ಹಾಗೂ ನೇರಳೇ ಬಣ್ಣದ ಹೂಗುತ್ಛ ಇರಲಿ. ಯಾವ ಕಾರಣಕ್ಕೂ ಬಿಳಿ, ಕೆಂಪು ಹಳದಿ ಹೂಗಳಾಗಲೀ ಉಳಿದಂತೆ ಕಿತ್ತಳೆ ಕೇಸರಿ ಬಣ್ಣದ ಹೂಗಳಾಗಲೀ ಇರಲೇ ಕೂಡದು. ಈ ಬಣ್ಣಗಳು ದಕ್ಷಿಣಾಭಿ ಮುಖದ ಸ್ಪಂದನಗಳನ್ನು ಕೆಡಿಸುತ್ತದೆ. ದಕ್ಷಿಣಾಭಿಮುಖದ ಬಾಗಿಲ ಕಡೆಯ ಧನಾತ್ಮಕವಲ್ಲದ ಸ್ಪಂದನಗಳು ನೀಲಿ ಹೂಗಳಿಂದಾಗಿ ನಿಯಂತ್ರಣಕ್ಕೆ ಬರುತ್ತದೆ.
ಇನ್ನು ಉತ್ತರಾಭಿಮುಖದ ಬಾಗಿಲಿಗಿರುವ ಮನೆಗಳಲ್ಲಿ ಎಲ್ಲಾ ರೀತಿಯ ಬಣ್ಣಗಳನ್ನು ಬಳಸಿಕೊಂಡು ಹೂಗುತ್ಛ ಇರಿಸಬಹುದು. ಒಂದೇ ಒಂದು ನೆನಪಿಡಿ. ತಪ್ಪಿ ಕೂಡಾ ನೀಲಿ ಹೂಗಳನ್ನು ಇಲ್ಲಿ ಸಂಯೋಜಿಸಬೇಡಿ. ಇದು ಕುಬೇರನ ದಿಕ್ಕಾದುದರಿಂದ ನೀಲಿಯನ್ನು ಜೋಡಿಸಬಾರದು. ನೇರಳೆ ಬಣ್ಣದ ಹೂಗಳು ಜಾಸ್ತಿ ಇದ್ದಷ್ಟೂ ಉತ್ತಮ. ಧನಪ್ರಾಪ್ತಿಗೆ ಇದರಿಂದ ಸಿದ್ಧಿ ಉಂಟಾಗುತ್ತದೆ. ಒಂದು ಮುಖ್ಯವಾದ ವಿಚಾರ ಎಂದರೆ ಎಲ್ಲಾ ಸಂದರ್ಭಗಳಲ್ಲೂ ಹೂಗಳು ಬಾಡದಂತಿರಲಿ. ಹೂಗಳು ಸೊಗಸಾಗೇ ಇದ್ದಲ್ಲಿ ವಾರಕ್ಕೊಮ್ಮೆ ಹೂಗಳನ್ನು ಬದಲಾಯಿಸಿದರೂ ಪರವಾಗಿಲ್ಲ. ಇನ್ನು ಬದಲಾಯಿಸಬೇಕಾದ ದಿನಗಳ ವಿಚಾರದಲ್ಲೂ ಇಂಥದ್ದೇ ದಿನ ಎಂದು ಪರಿಗಣಿಸಬೇಕಾದ ಅವಶ್ಯಕತೆಯಿಲ್ಲ. ಆದರೆ ಅಮಾವಾಸ್ಯೆಯ ದಿನಗಳಂದು ಮಾತ್ರ ಬದಲಿಸಬೇಡಿ. ಒಂದು ವಾರಕ್ಕಿಂತ ಅಧಿಕವಾಗಿ ಉಪಯೋಗಿಸಿದ ಹೂಗುತ್ಛಗಳು ಮುಂದುವರೆಯದಂತಿರಲಿ. ಈ ಕುರಿತು ನಿಗಾ ವಹಿಸಿ. ಈ ಹೂಗಳಿಂದ ಅಷ್ಟ ದಿಕಾಪಾಲಕರಾದ ಈಶ್ವರ, ಇಂದ್ರ, ಅಗ್ನಿ, ಯಮ, ನಿಋತ, ವರುಣ, ವಾಯು ಹಾಗೂ ಕುಬೇರಾದಿಗಳು ಮನೆಯ ದಿವ್ಯತೆಗೊಂದು ಪರಿಶೋಭೆ ಒದಗಿಸುತ್ತಾರೆ.
Comments are closed.