ಕರ್ನಾಟಕ

ಮಹಿಳೆಯರ ರಕ್ತದಲ್ಲೂ ಪುರುಷ ಹಾರ್ಮೋನ್ ಸ್ವಲ್ಪ ಮಟ್ಟಿಗೆ ಇದೆಯಂತೆ….ನಿಮಗಿದು ಗೊತ್ತೇ ?

Pinterest LinkedIn Tumblr

women_body_hermons

ಮಂಗಳೂರು: ಪುರುಷರಂತೆ ಮಹಿಳೆಯರಲ್ಲಿಯೂ ಕೂದಲು ಬೆಳೆಯುವುದನ್ನು ಹಿರುಟಿಸಂ ಎನ್ನುತ್ತಾರೆ. ಈ ಸಮಸ್ಯೆ ಇರುವವರಿಗೆ ಕೆನ್ನೆಯ ಮೇಲೆ, ಮೇಲ್ದುಟಿಯಲ್ಲಿ, ಮುಖದ ಬದಿಗಳಲ್ಲಿ, ಎದೆಯ ಮೇಲೆ, ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಕೂದಲು ಬೆಳೆಯುತ್ತದೆ. ಮಹಿಳೆಯರಲ್ಲಿ ಈ ಭಾಗದಲ್ಲಿ ಕೂದಲು ಬೆಳೆಯುವುದನ್ನು ಕೆಲವು ಸಂಸ್ಕೃತಿಗಳಲ್ಲಿ ಸಹಜವಾಗಿ ಸ್ವೀಕರಿಸಲಾಗುತ್ತದೆ. ಆದರೆ ಕೆಲವೆಡೆ ಈ ಬೆಳವಣಿಗೆ ಮಹಿಳೆಯರಿಗೆ ಇರಿಸುಮುರಿಸನ್ನು ಉಂಟುಮಾಡುತ್ತದೆ.

ಈ ಬೆಳವಣಿಗೆಗೆ ಪುರುಷ ಹಾರ್ಮೋನ್‌ಗಳು (ಅಂಡ್ರೋಜೆನ್ಸ್‌) ಕಾರಣ. ಪುರುಷ ಹಾರ್ಮೋನ್‌ಗಳಲ್ಲಿ ಟೆಸ್ಟೊಸ್ಟರೋನ್ ಹೆಚ್ಚು ಪ್ರಭಾವಿ. ಎಲ್ಲ ಮಹಿಳೆಯರ ರಕ್ತದಲ್ಲೂ ಈ ಪುರುಷ ಹಾರ್ಮೋನ್ ಸ್ವಲ್ಪ ಮಟ್ಟಿಗೆ ಇರುತ್ತವೆ.

ಕೂದಲು ಹೇಗೆ ಬೆಳೆಯುತ್ತದೆ?
ದೇಹದ ಮೇಲೆ ಅಥವಾ ತಲೆಯಲ್ಲಿ ಕಾಣುವ ಪ್ರತಿ ಕೂದಲಿಗೂ ದೇಹದ ಒಳಗೆ ಬುನಾದಿ ಇರುತ್ತದೆ. ಬೆಳವಣಿಗೆಯಾಗುತ್ತಿರುವ ಕೂದಲಿನ ಜೀವಕೋಶಗಳಿಗೆ ಬಣ್ಣ ನೀಡುವ ವ್ಯವಸ್ಥೆಯೂ ದೇಹದಲ್ಲಿದೆ. ತೊಡೆಯ ಭಾಗದಲ್ಲಿ ಒಂದು ದಿನಕ್ಕೆ ಸರಾಸರಿ 0.2 ಮಿ.ಮೀ. ಉದ್ದದಷ್ಟು ಕೂದಲು ಬೆಳೆಯುತ್ತದೆ. ತಲೆಯಲ್ಲಿ ಒಂದು ದಿನಕ್ಕೆ 0.5 ಮಿ.ಮೀ. ಉದ್ದದಷ್ಟು ಕೂದಲು ಬೆಳೆಯುತ್ತದೆ. ಕೂದಲ ಬೆಳವಣಿಗೆ ನಿಂತ ತಕ್ಷಣ, ಅದು ಉದುರುತ್ತದೆ.

ದೇಹದ ಮೇಲಿನ ಕೂದಲು ಮೂರು ತಿಂಗಳವರೆಗೆ ಬೆಳೆದರೆ, ತಲೆಯಲ್ಲಿನ ಪ್ರತಿ ಕೂದಲು ಮೂರು ವರ್ಷ ಬೆಳೆಯುತ್ತದೆ. ನಂತರ ಕೂದಲು ಬೆಳೆಯುವುದು ನಿಲ್ಲುತ್ತದೆ.ಬೆಳವಣಿಗೆ ನಿಲ್ಲಿಸಿದ ಕೂದಲಿನ ಕಡುಬಣ್ಣದ ತೀವ್ರತೆ ಕಡಿಮೆಯಾಗುತ್ತದೆ. ಇಂಥ ಕೂದಲಿನ ಸನಿಹದಲ್ಲಿಯೇ ಎರಡನೇ ಬುನಾದಿಯು ಹೊಸ ಕೂದಲು ಬೆಳೆಸುವ ಮತ್ತೊಂದು ಆವೃತ್ತಿಯನ್ನು ಆರಂಭಿಸುತ್ತದೆ. ಹಳೆಯ ಕೂದಲು ಉದುರುವವರೆಗೆ ಹೊಸ ಕೂದಲು ವಿಶ್ರಾಂತ ಸ್ಥಿತಿಯಲ್ಲಿಯೇ ಇರುತ್ತದೆ.

ಸತತವಾಗಿ ದೇಹದಲ್ಲಿ ಶೇ. 86ರಷ್ಟು ಕೂದಲ ಜೀವಕೋಶಗಳು ಬೆಳೆಯುತ್ತಿರುತ್ತವೆ, ಶೇ. 1ರಷ್ಟು ಜೀವಕೋಶಗಳು ಬೆಳವಣಿಗೆ ನಿಲ್ಲಿಸಿರುತ್ತವೆ, ಶೇ. 13ರಷ್ಟು ಜೀವಕೋಶಗಳು ಪೊರೆ ಕಳಚಿಕೊಳ್ಳುತ್ತಿರುತ್ತವೆ.

ಶರೀರದ ಯಾವ ಭಾಗದಲ್ಲಿ ಕೂದಲು ಬೆಳೆಯುತ್ತದೆ?
ಅಂಗೈ ಮತ್ತು ಅಂಗಾಲು ಹೊರತುಪಡಿಸಿ ದೇಹದ ಎಲ್ಲ ಭಾಗದಲ್ಲಿಯೂ ಕಿರು ಕೂದಲು ಕಾಣಿಸಿಕೊಳ್ಳುತ್ತದೆ. ಟೆಸ್ಟೊಸ್ಟರೋನ್ ಹಾರ್ಮೋನ್‌ ಈ ಕಿರುಕೂದಲ ಬುನಾದಿಗೆ ಭದ್ರತೆ ಒದಗಿಸುತ್ತದೆ. ಕಿರುಕೂದಲು ಕ್ರಮೇಣ ಗಟ್ಟಿ ಕೂದಲಾಗಲು ಮತ್ತು ದಪ್ಪವಾಗಿ, ಉದ್ದವಾಗಿ ಮತ್ತು ಕಡುಕಪ್ಪಾಗಲು ಈ ಹಾರ್ಮೋನ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ.ಮಹಿಳೆಯರ ದೇಹದ ಎರಡು ಮುಖ್ಯ ಭಾಗಗಳಲ್ಲಿ ಕೂದಲ ಬೆಳವಣಿಗೆ ಕಂಡು ಬರುತ್ತದೆ. ಜನನಾಂಗದ ಕೆಳ ಪ್ರದೇಶ ಮತ್ತು ಕಂಕುಳು.

ಕಂಕುಳಿನಡಿ ಕೂದಲು ಕಾಣಿಸಿಕೊಳ್ಳುವ ಎರಡು ದಿನ ಮೊದಲು ಜನನಾಂಗದ ಬಳಿ ಕೂದಲು ಕಾಣಿಸಿಕೊಳ್ಳುತ್ತದೆ. ಯುವತಿಯರಲ್ಲಿ ನಡುಹರೆಯದಲ್ಲಿ ಇಂಥ ಕೂದಲು ಕಾಣಿಸಿಕೊಳ್ಳುತ್ತದೆ. ಅಡರ್ನಲ್ ಗ್ರಂಥಿಗಳಿಂದ ಸ್ರವಿಸುವ ಹಾರ್ಮೋನ್‌ಗಳು ಇದಕ್ಕೆ ಕಾರಣ. ಸಣ್ಣ ತ್ರಿಕೋನಾಕಾರದ ಈ ಗ್ರಂಥಿಗಳು ಕಿಡ್ನಿಯ ಮೇಲ್ಭಾಗದಲ್ಲಿ ಇರುತ್ತವೆ.

ಮುಖ ಮತ್ತು ದೇಹದ ಇತರ ಭಾಗ
ಜನನಾಂಗದ ಮೇಲ್ಭಾಗ, ಹೊಟ್ಟೆ ಮತ್ತು ಬೆವರಿನ ಗ್ರಂಥಿಗಳನ್ನೂ ಇದು ಒಳಗೊಳ್ಳುತ್ತದೆ. ಪುರುಷ ಹಾರ್ಮೋನ್‌ಗಳಿಗೆ ಪ್ರತಿಕ್ರಿಯೆಯಾಗಿ ಈ ಭಾಗದಲ್ಲಿ ಕೂದಲು ಬೆಳೆಯುತ್ತದೆ. ಆದರೆ ಇಲ್ಲಿ ಜನನಾಂಗ ಮತ್ತು ಕಂಕುಳ ಭಾಗದಲ್ಲಿ ಬೆಳೆದಷ್ಟು ತೀವ್ರವಾಗಿ ಕೂದಲು ಬೆಳೆಯುವುದಿಲ್ಲ. ಈ ಭಾಗದಲ್ಲಿ ಕೂದಲು ಬೆಳೆಯಲು ಮಹಿಳೆಯರ ದೇಹದಲ್ಲಿ ಪುರುಷ ಹಾರ್ಮೋನ್‌ಗಳು ಹೆಚ್ಚು ಪ್ರಮಾಣದಲ್ಲಿ ಸ್ರವಿಕೆಯಾಗಬೇಕಾಗುತ್ತದೆ.

ಪುರುಷರಿಗೆ ಈ ಭಾಗದಲ್ಲಿ ಹೆಚ್ಚು ಕೂದಲು ಬೆಳೆಯುತ್ತದೆ. ಅವರ ರಕ್ತದಲ್ಲಿ ಟೆಸ್ಟೊಸ್ಟರೋನ್ ಹಾರ್ಮೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಕೆಯಾಗುವುದೇ ಇದಕ್ಕೆ ಕಾರಣ.ಪುರುಷರ ಹಾರ್ಮೋನ್‌ಗಳ ಪ್ರಮಾಣ ಹೆಚ್ಚಾಗುವುದು ಜಿಡ್ಡು ಚರ್ಮ ಮತ್ತು ಮೊಡವೆಗಳಿಗೂ ಕಾರಣವಾಗುತ್ತದೆ. ಕಾಲಿನ ಮೇಲೆ ಕೂದಲು ಬೆಳೆಯುವುದು ಪುರುಷರಿಗೆ ಸಾಮಾನ್ಯ. ಕೈ ಮೇಲೆ ಕೂದಲು ಬೆಳೆಯುವುದು ಸ್ತ್ರೀ–ಪುರಷರಿಬ್ಬರಿಗೂ ಸಾಮಾನ್ಯ ಸಂಗತಿ.

ತಲೆಗೂದಲು:
ದೇಹದ ಇತರ ಭಾಗದಲ್ಲಿ ಬೆಳೆಯುವ ಕೂದಲಿಗಿಂತ ತಲೆಗೂದಲು ಭಿನ್ನ. ಇದರ ಬೆಳವಣಿಗೆ ಪುರುಷ ಹಾರ್ಮೋನ್‌ಗಳನ್ನು ಅವಲಂಬಿಸಿರುವುದಿಲ್ಲ. ಕೆಲವು ಮಹಿಳೆಯರಲ್ಲಿ ಪುರುಷ ಹಾರ್ಮೋನ್‌ಗಳು ಬೊಕ್ಕತಲೆಗೆ ಕಾರಣವಾಗುವುದು ಕಂಡು ಬಂದಿದೆ. ಮಹಿಳೆಯರ ತಲೆ ಮೇಲೆ ಕಂಗೊಳಿಸುತ್ತಿದ್ದ ದಟ್ಟ ಕಪ್ಪುಕೂದಲು ಪುರುಷ ಹಾರ್ಮೋನ್ ಸ್ರವಿಕೆಯ ನಂತರ ತೆಳುವಾಗಿ, ಬಳಿಕ ವಿರಳ ಕೂದಲಾಗಿ ಪರಿವರ್ತನೆಗೊಂಡ ಹಲವು ಉದಾಹರಣೆಗಳಿವೆ.

ಕೂದಲುದುರುವಿಕೆ ನಿಮ್ಮೊಬ್ಬರ ಸಮಸ್ಯೆಯಲ್ಲ:
ದೇಹದ ಬೇಡದ ಸ್ಥಳದಲ್ಲಿ ಕೂದಲು ಬೆಳೆಯುವುದು ನಿಮ್ಮೊಬ್ಬರ ಸಮಸ್ಯೆಯಲ್ಲ. ನಿಮ್ಮಂತೆಯೇ ಹಲವು ಮಹಿಳೆಯರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಕೂದಲು ಬೆಳೆಯುವುದು ಹಾರ್ಮೋನ್ ಅಸಹಜ ಸ್ರವಿಸುವಿಕೆಯನ್ನು ಸೂಚಿಸುತ್ತದೆ. ಇಂಥ ಸಂದರ್ಭಗಳಲ್ಲಿ ಹೆಚ್ಚಿನ ತಪಾಸಣೆ ಅಗತ್ಯ. ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ಯೋನಿಯ ಭಗಾಂಕುರದ ಹಿಗ್ಗುವಿಕೆ, ಸ್ತನಗಳ ಕುಗ್ಗುವಿಕೆ, ಕಪೋಲ ಭಾಗದಿಂದ (ಹಣೆ ಮತ್ತು ಕಿವಿ ನಡುವಣ ಸ್ಥಳ) ಕೂದಲು ಉದುರುವುದು, ಜನನಾಂಗಗಳಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ.

ಭಾರತದಲ್ಲಿ ಶೇ. 18ರಷ್ಟು ಮಹಿಳೆಯರ ಎದೆಭಾಗದಲ್ಲಿ, ಶೇ. 28ರಷ್ಟು ಮಹಿಳೆಯರ ಮುಖದಲ್ಲಿ ಮತ್ತು ಶೇ. 35ರಷ್ಟು ಮಹಿಳೆಯರ ಕಾಲಿನ ಮೇಲೆ ಅಸಹಜ ಕೂದಲು ಬೆಳೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಮಹಿಳೆಯರಲ್ಲಿ ಪುರುಷ ಹಾರ್ಮೋನ್ ಹೇಗೆ ಬರುತ್ತದೆ?
ಮಹಿಳೆಯರಲ್ಲಿ ಒಟ್ಟು ಮೂರು ಮೂಲಗಳಿಂದ ಪುರುಷ ಹಾರ್ಮೋನ್‌ಗಳು ಕಾಣಿಸಿಕೊಳ್ಳುತ್ತವೆ.
* ಅಡ್ರಿನಲ್ ಗ್ರಂಥಿಗಳು
* ಅಂಡಾಶಯ
* ಇತರ ಹಾರ್ಮೋನ್‌ಗಳನ್ನು ಪುರುಷ–ಹಾರ್ಮೋನ್‌ಗಳಾಗಿ ಪರಿವರ್ತಿಸುವ ಕೊಬ್ಬು.

ತಾಯಿಯ ಗರ್ಭದಲ್ಲಿ ಮಗು ಇದ್ದಾಗ ಅಡ್ರಿನಲ್ ಗ್ರಂಥಿಗಳು ಪುರುಷ ಹಾರ್ಮೋನ್‌ಗಳನ್ನು ಸ್ರವಿಸುತ್ತವೆ. ಮಗುವಿನ ಜನನದ ನಂತರ ಈ ಪ್ರಕ್ರಿಯೆ ನಿಂತು ಹೋಗುತ್ತದೆ.ಮಗು ಹರೆಯಕ್ಕೆ ಕಾಲಿಟ್ಟ ಕೂಡಲೆ ಅಡ್ರಿನಲ್ ಗ್ರಂಥಿಗಳು ಜಾಗೃತಗೊಳ್ಳುತ್ತವೆ. ಪುರುಷ ಹಾರ್ಮೋನ್‌ ಸ್ರವಿಕೆ ಮತ್ತೆ ಆರಂಭವಾಗುತ್ತದೆ. ಜನನಾಂಗ ಮತ್ತು ಕಂಕುಳಲ್ಲಿ ಕೂದಲ ಬೆಳವಣಿಗೆಗೆ ಈ ಹಾರ್ಮೋನ್‌ ಮುಖ್ಯ ಕಾರಣ.

ಇದನ್ನು ಅನುಸರಿಸಿ ಅಂಡಾಶಯ ಕೆಲಸ ಆರಂಭಿಸುತ್ತದೆ. ಪುರುಷ ಮತ್ತು ಸ್ತ್ರೀ ಹಾರ್ಮೋನ್‌ಗಳ ಸ್ರವಿಸುವಿಕೆಗೆ ಚಾಲನೆ ನೀಡುತ್ತದೆ. ಋತುಚಕ್ರ ಆರಂಭವಾದ ನಂತರ ಇದು ಜಾಗೃತಗೊಳ್ಳುತ್ತದೆ. ಮೆನೊಪಾಸ್‌ ನಂತರ, ಸಾಮಾನ್ಯವಾಗಿ ಅಂಡಾಶಯ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆದರೂ ಶೇ. 50ರಷ್ಟು ಮಹಿಳೆಯರಲ್ಲಿ ಅಂಡಾಶಯವು ಟೆಸ್ಟೊಸ್ಟರೊನ್ ಉತ್ಪತ್ತಿ ಮಾಡುತ್ತದೆ.

ನಿಮಗೆ ಈ ಲೇಖನ ಇಷ್ಟವಾದರೇ ಶೇರ್ ಮಾಡಿ ಹಾಗೂ ಇತರಿಗೆ ಇದರ ಬಗ್ಗೆ ತಿಳಿಯಲು ಸಹಾಯ ಮಾಡಿ.

Comments are closed.