ಕರಾವಳಿ

ವಿಶ್ವದ ಅತ್ಯಂತ ದುಬಾರಿ ಕಾಫಿಪುಡಿಯಲ್ಲಿ ಬೆಕ್ಕಿನ ಮಲದ ವೈಶಿಷ್ಟತೆ…ಆಶ್ಚರ್ಯವಾಯಿತೇ?

Pinterest LinkedIn Tumblr


ಏಷ್ಯಾದಲ್ಲಿ ಮೂರನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗಿರುವ ಭಾರತ ಈಗ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಬೆಕ್ಕಿನ ಮಲದಿಂದ ವಿಶ್ವದ ಅತ್ಯಂತ ದುಬಾರಿ ಕಾಫಿಪುಡಿ ಉತ್ಪಾದನೆಗೆ ಚಾಲನೆ ನೀಡಿದೆ.ಇದನ್ನು ಓದಿ… ವಾಕರಿಕೆ ಬರುತ್ತಿದೆಯೇ? ಇನ್ನು ಇದರ ಬೆಲೆ ಕೇಳಿದರೆ ಎಚ್ಚರ ತಪ್ಪುದೊಂದೇ ಬಾಕಿ.

‘ಸಿವೆಟ್ ಕಾಫಿ’ ವಿಶ್ವದ ದುಬಾರಿ ಕಾಫಿ ಎಂದೇ ಪ್ರಸಿದ್ಧಿ ಪಡೆದಿದ್ದು, ಇದನ್ನು ಪುನುಗು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ. ಪುನುಗು ಬೆಕ್ಕು ಹಾಕುವ ಮಲದಲ್ಲಿ ಸಿಗುವ ಕಾಫಿ ಬೀಜವನ್ನು ಸಂಗ್ರಹಿಸಿ, ಸಂಸ್ಕರಿಸಿ ಇದನ್ನು ತಯಾರಿಸಲಾಗುತ್ತದೆ.

ಈ ಕಾಫಿ ಅಧಿಕ ಪೋಷಕಾಂಶಗಳನ್ನು ಹೊಂದಿದ್ದು, ಒಳ್ಳೆಯ ರುಚಿಯಿಂದಲೂ ಕೂಡಿರುತ್ತದೆ. ಆದ್ದರಿಂದ ಸಿವೆಟ್ ಕಾಫಿ ಬೆಲೆ ಜೇಬು ಸುಡುತ್ತದೆ. ಯಾಕೆಂದರೆ, ಪುನುಗು ಬೆಕ್ಕಿನ ದೇಹದಿಂದ ಹೊರಬೀಳುವ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಅತ್ಯಂತ ತ್ರಾಸದಾಯಕವಾಗಿರುವುದರಿಂದ ಈಗ ಸಣ್ಣ ಮಟ್ಟದಲ್ಲಿ ಸಿವೆಟ್ ಕಾಫಿ ತಯಾರಿಸುವ ಉಪ ಕ್ರಮವನ್ನು ಕೊಡಗಿನಲ್ಲಿರುವ ಕೂರ್ಗ್ ಕನ್ಸಾಲಿಡೇಟೆಡ್ ಕಮಾಡಿಟೀಸ್(ಸಿಸಿಸಿ) ಆರಂಭಿಸಿದೆ. ಈ ಕಾಫಿಯನ್ನು ಸ್ಥಳೀಯ ಮಟ್ಟದಲ್ಲೂ ಮಾರಾಟ ಮಾಡುವ ಯೋಜನೆಯನ್ನು ಇದು ಹೊಂದಿದೆ.

ಬೆಲೆ:
ಭಾರತದಲ್ಲಿ ಸಿವೆಟ್ ಕಾಫಿ ಬೆಲೆ ಕೆಜಿಗೆ 8,000 ರೂ ಇದ್ದರೆ, ವಿದೇಶದಲ್ಲಿ ಇದರ ಬೆಲೆ ಒಂದು ಕೆಜಿಗೆ 20 ಸಾವಿರದಿಂದ 25 ಸಾವಿರ ರುಪಾಯಿಯಷ್ಟಿದೆ. ಇದಕ್ಕೆ ಯುರೋಪ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.

‘ಪ್ರಾರಂಭದಲ್ಲಿ 29ಕೆಜಿ ಸಿವೆಟ್ ಕಾಫಿಯನ್ನು ಉತ್ಪಾದಿಸಲಾಗಿತ್ತು. ನಂತರ ಸಂಸ್ಥೆ ಪ್ರಾರಂಭ ಮಾಡಿದ ಮೇಲೆ 60 ಕೆಜಿ ಮತ್ತು 2014 – 15 ರಲ್ಲಿ 200 ಕೆಜಿ ಕಾಫಿ ಉತ್ಪಾದಿಸಿದ್ದೇವೆ. ಅಕ್ಟೋಬರ್ ನಲ್ಲಿ ಸುಮಾರು ಅರ್ಧ ಟನ್ ಕಾಫಿ ಉತ್ಪಾದಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಯಾಕೆ ಬೆಕ್ಕಿನ ಮಲ?:
‘ಕೊಡಗಿನ ಕಾಡಿನಲ್ಲಿರುವ ಪುನುಗು ಬೆಕ್ಕುಗಳು ಕಾಫಿ ಹಣ್ಣುಗಳನ್ನು ತಿನ್ನಲು ತೋಟಕ್ಕೆ ಬರುತ್ತವೆ. ಅವುಗಳು ಕೇವಲ ಹಣ್ಣು ಮಾತ್ರ ತಿಂದು ಬೀಜವನ್ನು ಬಿಟ್ಟುಬಿಡುತ್ತವೆ. ಪುನುಗು ಬೆಕ್ಕಿನ ಹೊಟ್ಟೆಯಲ್ಲಿರುವ ನೈಸರ್ಗಿಕ ಕಿಣ್ವಗಳು ಕಾಫಿ ಬೀಜದ ರುಚಿಯನ್ನು ಹೆಚ್ಚು ಮಾಡುತ್ತದೆ. ಇದರಿಂದ ಈ ಕಾಫಿ ಇಷ್ಟು ವಿಶಿಷ್ಟವಾಗಿದೆ’.

‘ಇನ್ನು ನಾವು ಇದರ ಉತ್ಪಾದನೆಯನ್ನು ಆದಷ್ಟು ನೈಸರ್ಗಿಕ ರೀತಿಯಲ್ಲಿ ಮಾಡುತ್ತೇವೆ. ಬೇರೆ ದೇಶಗಳಲ್ಲಿ ಪುನುಗು ಬೆಕ್ಕುಗಳನ್ನು ಹಿಡಿದು ಬೋನಿನೊಳಗೆ ಹಾಕಿ ಒತ್ತಾಯದಿಂದ ಕಾಫಿ ಹಣ್ಣುಗಳನ್ನು ತಿನ್ನಿಸಿ ಅವುಗಳ ಮಲವನ್ನು ಸಂಗ್ರಹಿಸಲಾಗುತ್ತದೆ.’

ಮಾಹಿತಿ: ಸಂಗ್ರಹ

Comments are closed.