ತೂಕ ಹೆಚ್ಚಾದ ಹಾಗೆ ಬೇರೆ ಬೇರೆ ರೀತಿಯ ಅಪಾಯಗಳು ಎದುರಾಗುತ್ತವೆ. ಆದರೆ ಸ್ವಲ್ಪ ಹೆಚ್ಚುವರಿ ತೂಕ ಇದ್ದ ಕೂಡಲೇ ಏನೇನೋ ಕಸರತ್ತು ಮಾಡಿ ಅದನ್ನು ಕೆಳಕ್ಕೆ ತರಲೇಬೇಕು ಎಂದೇನಿಲ್ಲ. ಹೀಗಾಗಿ ಅಲ್ಪಪ್ರಮಾಣದಲ್ಲಿ ಹೆಚ್ಚುವರಿ ತೂಕ ಇದ್ದರೆ ಒಳ್ಳೆಯದೇ. ಆದರೆ ಅತಿಯಾದ ತೂಕ ಇರಬಾರದು ಅಷ್ಟೇ. ಆದರೆ ಹೆಚ್ಚುವರಿ ತೂಕವುಳ್ಳ ವ್ಯಕ್ತಿಯು ಕೂಡ ಚೆನ್ನಾಗಿ ಕೆಲಸ ಮಾಡಿದರೆ (ದೈಹಿಕ ಪರಿಶ್ರಮಪಟ್ಟರೆ) ಅಂಥವರಿಗೆ ಅನಾರೋಗ್ಯ ಬರುವುದಿಲ್ಲ.
ಆಕ್ಟೀವ್ ಆಗಿರಬೇಕು. an active overweight person is healthier than inactive thin person. ಸಣ್ಣ, ಕೃಶ ವ್ಯಕ್ತಿಯಾಗಿದ್ದರೂ ಏನೂ ಕೆಲಸ ಮಾಡದಿದ್ದರೆ ಅವನಿಗೂ ಅನಾರೋಗ್ಯ ಉಂಟಾಗುತ್ತದೆ. ಹಾಗಾಗಿ ತೂಕದ ವಿಷಯದಲ್ಲಿ ಕೂಡ ಹೆಚ್ಚಾಗಿರುವುದು ಸರಿಯಲ್ಲ ಎಂಬ ವಿಚಾರವು ಸಾಮಾನ್ಯ ದೃಷ್ಟಿಕೋನದಲ್ಲಿ ನೋಡಿದಾಗ ಸರಿಯಾದುದೇ. ಆದರೆ ಅದರ ಒಳಹೊಕ್ಕು ನೋಡಿದರೆ ಇನ್ನೂ ಬೇರೆ ಬೇರೆ ಬಗೆಯ ಆಯಾಮಗಳು ಕಂಡುಬರುತ್ತವೆ.
ಹೃದಯದ ಆರೋಗ್ಯ ಹೆಚ್ಚಿಸಬೇಕು ಎಂದಾದರೆ ಒಳ್ಳೆಯ ಆಹಾರವನ್ನು ಸೇವಿಸಬೇಕು ಎಂಬ ಮಾತಿದೆ. ಆ ಬಗ್ಗೆ ಗಮನಿಸೋಣ. ನನಗೆ ಗೊತ್ತಿದ್ದ ಹಾಗೆ – ಹೃದಯಕ್ಕೆ ಒಳ್ಳೆಯ ಆಹಾರ, ಶ್ವಾಸಕೋಶಗಳಿಗೆ ಒಳ್ಳೆಯ ಆಹಾರ, ಮಿದುಳಿಗೆ ಒಳ್ಳೆಯ ಆಹಾರ, ಹೊಟ್ಟೆಗೊಂದು ಒಳ್ಳೆಯ ಆಹಾರ ಎಂದೆಲ್ಲ ಭೇದಗಳೇನೂ ಇಲ್ಲ. ಮನುಷ್ಯ ಸೇವಿಸುವ ಆಹಾರಗಳೆಲ್ಲ ಒಳ್ಳೆಯ ಆಹಾರಗಳೇ. ಮನುಷ್ಯನಿಗೆ ಯಾವ ಆಹಾರವನ್ನು ತಿನ್ನಬೇಕು ಎಂಬ ಆಸೆ ಇದೆಯೋ, ಆತನ ಪೂರ್ವಜರು ಯಾವ ಆಹಾರವನ್ನು ಸೇವಿಸುತ್ತ ಬಂದಿದ್ದರೋ ಅದನ್ನೇ ನಾವು ಕೂಡ ಮುಂದುವರಿಸುವುದು ಒಳ್ಳೆಯದು.
ನಾನು ಇಲ್ಲೆಲ್ಲೋ ಕರ್ನಾಟಕದಲ್ಲಿ ಇದ್ದುಕೊಂಡು; ಮೆಡಿಟರೇನಿಯನ್ ಆಹಾರ ತಿನ್ನುತ್ತೇನೆ, ಪೇಲಿಯೋ ಡಯಟ್ (ಸುಮಾರು ಒಂದು ಲಕ್ಷ ವರ್ಷಗಳ ಹಿಂದೆ ಪ್ರಚಲಿತದಲ್ಲಿದ್ದ ಆಹಾರಪದ್ಧತಿ) ಮಾಡುತ್ತೇನೆ – ಎಂಬಂಥ ಪ್ರಯೋಗಗಳನ್ನೆಲ್ಲ ಮಾಡಬಾರದು. ಯಾಕೆಂದರೆ ನಮ್ಮ ದೇಹಕ್ಕೆ ಆ ಬಗೆಯ ಆಹಾರಪದಾರ್ಥಗಳು ಒಗ್ಗುವುದಿಲ್ಲ. ‘ನನಗೆ ಈ ಆಹಾರ ಒಳ್ಳೆಯದು, ನನ್ನ ಪೂರ್ವಜರು ಈ ಆಹಾರವನ್ನೇ ಸೇವಿಸುತ್ತಿದ್ದರು. ಅದೇ ಪರಿಸರದಲ್ಲಿಯೇ ನಾನು ಬೆಳೆದುಬಂದಿದ್ದು, ಮುಂದೆಯೂ ನಾನು ಅದೇ ಆಹಾರದ ಪೌಷ್ಟಿಕಾಂಶದ ಆಧಾರದಿಂದಲೇ ಬೆಳೆಯಬೇಕು’ ಎಂಬುದೆಲ್ಲ ನಮ್ಮ ದೇಹಕ್ಕೆ ಗೊತ್ತಿದೆ. ಹಾಗಾಗಿ ಅದೇ ಆಹಾರವನ್ನೇ ಸೇವಿಸುವುದು ಒಳ್ಳೆಯದು. ಆದರೆ ಇಲ್ಲಿ ಪ್ರಶ್ನೆ ಏನೆಂದರೆ – ನಮ್ಮ ಪೂರ್ವಜರು ತುಂಬ ಕೆಲಸ ಮಾಡುತ್ತಿದ್ದರು. ನಾವು ಮಾಡುವುದಿಲ್ಲ. ಹಾಗಾಗಿ ಅವರು ತಿಂದಷ್ಟು ಪ್ರಮಾಣದ ಆಹಾರವನ್ನು ನಾವು ತಿನ್ನಬಾರದು. ಇಷ್ಟೇ ವ್ಯತ್ಯಾಸ. ಹಾಗಾಗಿ ಸ್ವಲ್ಪ ಹೆಚ್ಚಿನ ತೂಕದಿಂದ ಏನು ತೊಂದರೆ ಇಲ್ಲ. ಅದರಲ್ಲಿಯೂ ನಾನು ಒಂದು ಅಂಶವನ್ನು ವಿಶೇಷವಾಗಿ ಒತ್ತಿ ಹೇಳುತ್ತೇನೆ; ಫ್ಯಾಟ್ನಲ್ಲಿಯೂ ಅತ್ಯುತ್ತಮವಾದ ಫ್ಯಾಟ್ ಯಾವುದು ಎಂದರೆ ನಮ್ಮ ಕೊಬ್ಬರಿ ಎಣ್ಣೆ. ಯಾಕೆ ಎಂದು ನೀವು ಕೇಳಬಹುದು.
ಕೊಬ್ಬರಿ ಎಣ್ಣೆಯಲ್ಲಿರುವ ಫ್ಯಾಟಿ ಅಸಿಡ್ ಹಾಗೂ ತಾಯಿಯ ಹಾಲಿನಲ್ಲಿರುವ ಫ್ಯಾಟಿ ಅಸಿಡ್ – ಈ ಎರಡೂ ಒಂದೇ. ಇದಕ್ಕೆ ಮೊನೊಲ್ಯಾರಿಕ್ ಅಸಿಡ್ ಎಂದು ಕರೆಯುತ್ತಾರೆ. ಅಷ್ಟು ಮಾತ್ರವೇ ಅಲ್ಲ. ಈ ಕೊಬ್ಬರಿ ಎಣ್ಣೆಯಲ್ಲಿ ಇರುವಷ್ಟು ಒಳ್ಳೆಯ ಕ್ರಿಮಿನಾಶಕ ವಸ್ತುವೇ ಇಲ್ಲ. ಹಾಗಾಗಿ ಕೊಬ್ಬರಿ ಎಣ್ಣೆಯು ಎಲ್ಲ ರೀತಿಯಲ್ಲಿಯೂ ಒಳ್ಳೆಯದು. ಇತ್ತೀಚೆಗೆ ಅಮೆರಿಕದ ಒಂದು ಸಂಶೋಧನಾ ಪ್ರಬಂಧದಲ್ಲಿ ಓದಿದ ವಿಚಾರ ಹೀಗಿದೆ. ಬೆಳಗ್ಗೆ ಎದ್ದ ಕೂಡಲೇ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಬಾಯಿಯಲ್ಲಿ ಐದು-ಹತ್ತು ನಿಮಿಷಗಳ ಕಾಲ ಇಟ್ಟುಕೊಂಡು ಅತ್ತಿತ್ತ ಮಾಡಿ ಉಗುಳಿದರೆ – ಹಲ್ಲಿನ ಮೇಲೆ ಹಳದಿ ಪದರ ಉಂಟಾಗುವುದಿಲ್ಲ. ಹಲ್ಲು ಸ್ವಚ್ಛವಾಗಿರುತ್ತದೆ. ದಂತವೈದ್ಯರ ಬಳಿ ಹೋಗುವ ಆವಶ್ಯಕತೆ ಉಂಟಾಗುವುದಿಲ್ಲ. ಇಷ್ಟೆಲ್ಲ ಒಳ್ಳೆಯ ಗುಣಗಳಿವೆ.
Comments are closed.