ಕರಾವಳಿ

ಆಷಾಡದ ಮಳೆಗಾಲದಲ್ಲಿ ವಕ್ವಾಡಿಯ ಗುರುಕುಲ ಶಾಲೆಯಲ್ಲಿ 7ನೇ ವರ್ಷದ ‘ಸಸ್ಯಾಮೃತ’!(Video)

Pinterest LinkedIn Tumblr

ಕುಂದಾಪುರ: ಕರಾವಳಿಯಲ್ಲಿ ಮಳೆಗಾಲದ ಊಟೋಪಚಾರಕ್ಕೆ ಅದರದ್ದೇ ಆದ ಮಹತ್ವ ಇದೆ. ಸದಾ ಹೊಸತನ ಪರಿಚಯಿಸುತ್ತಿರುವ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಸೇರಿದಂತೆ ಆಹಾರ, ಕ್ರೀಡೆ, ಸಂಸ್ಕೃತಿ-ಸಾಂಸ್ಕೃತಿಕ, ಆರೋಗ್ಯ-ಯೋಗ ಮೊದಲಾದ ಪಕ್ಕಾ ದೇಸಿ ಶೈಲಿ ಇಲ್ಲಿನ ವಿಶೇಷತೆ. ಆಧುನಿಕ ಶೈಲಿ ಆಹಾರ ಕ್ರಮದಿಂದ ಆರೋಗ್ಯದಲ್ಲಿ ಏರುಪೇರು ಸಾಮಾನ್ಯ ಸಂಗತಿಯಾಗಿದ್ದು, ಜನರಲ್ಲಿ ಆಹಾರ ಕ್ರಮದ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ಜಾಗೃತಿ ಮೂಡಿಸುವ ಉದ್ದೇಶವೇ ಸಸ್ಯಾಮೃತ!

ಬಾಂಡ್ಯಾ ಎಜುಕೇಶನ್ ಟ್ರಸ್ಟ್ ವಕ್ವಾಡಿ ಗುರುಕುಲ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಸತತ ಏಳನೇ ವರ್ಷವೂ ಮಳೆಗಾಲದ ಈ ಭಾನುವಾರ ನಡೆದ ಸಸ್ಯಾಮೃತ ಕಾರ್‍ಯಕ್ರಮದಲ್ಲಿ ಮುನ್ನೂರಕ್ಕೂ ಅಧಿಕ ಮಂದಿ ಭಾಗವಹಿಸಿದರು.

ಊಟದ ಮೆನು…
ಸಸ್ಯಾಮೃತಕ್ಕೆ ಬಂದವರಿಗೆ ಮುರಿಯಾ ಹಣ್ಣಿನ ಜ್ಯೂಸ್ ನೀಡಿ ಸ್ವಾಗತಿಸಲಾಯಿತು. ಮಧ್ಯಾಹ್ನದ ಊಟಕ್ಕೆ ಮೆನುವಿನಲ್ಲಿ ಅಪ್ಪೆ ಹುಳಿ, ಧಾರೆಹುಳಿ ಉಪ್ಪಿನಕಾಯಿ, ಈರುಳ್ಳಿ ಸೊಪ್ಪಿನ ಕೊಸಂಬರಿ, ಕಾಡ ಬದನೆ ಚಟ್ನಿ, ಸಾಂಬರ್ ಸೊಪ್ಪಿನ ಚಟ್ನಿ, ಕೆಸುವಿನ ಚಟ್ನಿ, ಕುಸುಮಾಲೆ (ಕೆಸ್ಕೂರು ಹೂವಿನ ಚಟ್ನಿ), ಕರಿಬೇವಿನ ಸೊಪ್ಪಿನ ಚಟ್ನಿ, ಕಣಿಲೆ ಪಲ್ಯ, ಪತ್ರೊಡೆ ಪಲ್ಯ, ಬಾಳೆದಿಂಡಿನ ಪಲ್ಯ, ಗಜಗಂಡೆಸೊಪ್ಪಿನ ಪಲ್ಯ, ಪತ್ರೋಡೆ ಗಾಲಿ, ಬೆಳ್ಳಟ್ಟು ಎಲೆಯ ಇಡ್ಲಿ, ಮೆಂತೆ ಸೊಪ್ಪಿನ ಚಿತ್ರಾನ್ನ, ಬಿಲ್ವಪತ್ರೆ ತಂಬುಳಿ, ಅರಶಿನ ಕೊಂಬಿನ ತಂಬುಳಿ, ಮಾಚಿಪತ್ರೆ ತಂಬುಳಿ, ಬಾಳೆದಿಂಡಿನ ಸಾಸಿವೆ, ಗೋವೆ ಕೆಸುವಿನ ಸಾಸಿವೆ, ಹಲಸಿನ ಬೀಜದ ಸಾರು, ನೆಲ ಬಸಳೆ ಸಾಂಬರ್, ನುಗ್ಗೆ ಸೊಪ್ಪಿನ ಬೋಂಡಾ, ಬಾಳೆ ಕುಂಡಿಗೆ ಬೋಂಡ, ಹಲಸಿನ ಹಣ್ಣಿನ ಪಾಯಸ, ದಾಲ್ಚಿನ್ನಿ ಎಲೆಯ ಗೆಣಸಲೆ, ತೋಡೆದೇವು, ಹಲಸಿನ ಬೀಜದ ಹೋಳಿಗೆ, ಹಾಲ್ ಬಾಯಿ, ಅನ್ನ, ಮಜ್ಜಿಗೆ ಹುಲ್ಲಿನ ಮಜ್ಜಿಗೆ ಸೇರಿದಂತೆ ಒಟ್ಟು ೩೨ ಬಗೆಯ ವಿವಿಧ ಔಷಧೀಯ ಹಾಗೂ ಸಾಂಪ್ರದಾಯಿಕ ಸಸ್ಯಗಳ ಖಾದ್ಯಗಳ ಸವಿಯಾಲಿತು. ಒಂದು ವಿಶೇಷವೆಂದರೆ ಸಂಸ್ಥೆಯ ಸುತ್ತಮುತ್ತಲಿನ ಸ್ಥಳದಲ್ಲಿ ಪೋಷಿಸಿಕೊಂಡು ಬರುತ್ತಿರುವ ೪೦೦ಕ್ಕೂ ಅಧಿಕ ಸಸ್ಯ ಪ್ರಬೇಧಗಳನ್ನು ಹಾಗೂ ಕಾಡುಗಳಿಂದ ತಂದ ಸಸ್ಯಗಳನ್ನು ಮಾತ್ರವೇ ಉಪಯೋಗಿಸಿಕೊಂಡು ಈ ಆಹಾರ ಸಿದ್ಧ ಪಡಿಸಲಾಯಿತು. ಅಡುಗೆಯಲ್ಲಿ ಮಾರುಕಟ್ಟೆಯ ಯಾವುದೇ ಉತ್ಪನ್ನ ಬಳಸಿಲ್ಲ ಎನ್ನುವುದು ಮತ್ತೊಂದು ವಿಶೇಷ. ಬಾಣಸಿಗ ಮಹಾಬಲ ಹರಿಕಾರ ಮತ್ತು ಸಂಗಡಿಗರು ಖಾದ್ಯ ತಯಾರು ಮಾಡಿದ್ದರು.

ಉತ್ತಮ ಆಹಾರ ಪಧತಿಯಿಂದ ಆರೋಗ್ಯ ಭಾಗ್ಯ: ಡಾ.ರಾಜೇಶ್ ಬಾಯರಿ
ಬೇರೆ ಬೇರೆ ಪ್ರದೇಶದ ಆಹಾರ ಸೇವನೆ ನಮ್ಮ ದೇಹಕ್ಕೆ ಒಗ್ಗುವುದಿಲ್ಲ. ನಮ್ಮ ಪರಿಸರದ ಆಸುಪಾಸು ಬೆಳೆದ ಪದಾರ್ಥ ನಮ್ಮ ಆಹಾರ ಪದಾರ್ಥವಾಗಬೇಕು. ಪ್ರಕೃತಿ ನೀಡಿದ ಪ್ರತಿಯೊಂದು ಸಸ್ಯಗಳು ಅಮೃತವಾಗಿದೆ. ಯಾವ,ಎಲ್ಲಿ, ಹೇಗೆ, ಎಷ್ಟು ಆಹಾರ ಸೇವನೆ ಮಾಡಬೇಕು ಎನ್ನುವುದನ್ನ ಮನಸ್ಸಲ್ಲಿಟ್ಟು ಕೊಂಡು ಆಹಾರ ಪದ್ದತಿ ಅನುಸಿರಿದರೆ ನಾವು ರೋಗದಿಂದ ದೂರ ಉಳಿಯಲು ಸಾಧ್ಯ ಎಂದು ಆಲೂರು ಚಿತ್ರಕೂಟ ಆಸ್ಪತ್ರೆಯ ಡಾ.ರಾಜೇಶ್ ಬಾಯರಿ ಹೇಳಿದರು.

ನಮ್ಮ ಆಹಾರ ಪದ್ದತಿ ಜೀವನ ಶೈಲಿ ಬದಲಾವಣೆ ಹೆಚ್ಚಿನ ಕಾಯಿಲೆಗೆ ಆಹ್ವಾನ ನೀಡುತ್ತದೆ. ತಿನ್ನುವ ಬಾಯಿಚಪಲ ಮೆಟ್ಟಿನಿಂತು, ಸಕ್ಕರೆಯಿಂದ ದೂರ ಉಳಿದರೆ ನಮ್ಮ ಅರ್ಧ ಆರೋಗ್ಯ ಸಮಸ್ಯೆ ಪರಿಹಾರವಾದಂತೆ ಎಂದು ಹೇಳಿದರು. ಆಯುರ್ವೇದ ಎಂದರೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿಸುತ್ತದೆ. ನಮ್ಮ ಸುತ್ತಮುತ್ತಲಿನ ಆಹಾರ ಬಿಟ್ಟು ಪಾಶ್ಚಿಮಾತ್ಯ ಪ್ರಭಾವ, ದಿನಚರಿ ನಮ್ಮ ಆರೋಗ್ಯದ ಮೂಲ. ಜೀವನ ಶೈಲಿ ಆಹಾರ ಪದ್ದತಿಯ ನಮ್ಮತನ ಕಾಪಾಡಿಕೊಂಡರೆ ಉತ್ತಮ ಎಂದ ಅವರು, ಹತ್ತು ಹಲವು ಸಸ್ಯಗಳ ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಿ, ಅವುಗಳ ಪ್ರಯೋಜನ ವಿವರಿಸಿದರು. ಮುನ್ನೂರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಲ್ಲದೇ ತಮಗಿರುವ ಪ್ರಶ್ನೆ ಹಾಗೂ ಗೊಂದಲ ವೈದ್ಯರ ಮೂಲಕ ಮುಂದಿಟ್ಟು ಉತ್ತರ ಪಡೆದರು.

ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ, ನಮ್ಮ ಪರಿಸರದ ಸಸ್ಯಗಳು ಅವುಗಳ ಪ್ರಯೋಜನೆ, ನಮ್ಮ ಆಹಾರದಲ್ಲಿ ಅವುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದೇ ಸಸ್ಯಾಮೃತದ ಮೂಲ ಉದ್ದೇಶ ಎಂದು ಹೇಳಿದರು.

ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಜಂಟಿ ಕಾರ್‍ಯನಿರ್ವಾಹಕ ನಿರ್ದೇಶಕಿ ಅನುಮಪಾ ಎಸ್.ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗುರುಕುಲ ಪಬ್ಲಿಕ್ ಶಾಲೆ ಶಿಕ್ಷಕ ರಾಘವೇಂದ್ರ ಶೀರ್ಷಿಕೆ ಗೀತೆ ಹಾಡಿದರು. ಕನ್ನಡ ಶಿಕ್ಷಕಿ ವಿಶಾಲಾ ಸಂಪನ್ಮೂಲ ವ್ಯಕ್ತಿ ಪರಿಚಯಿಸಿದರು. ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಜಂಟಿ ಕಾರ್‍ಯನಿರ್ವಾಹಕ ನಿರ್ದೇಶಕ ಸುಭಾಶ್ಚಂದ್ರ ಶೆಟ್ಟಿ ಗೌರವಿಸಿದರು. ಆಂಗ್ಲ ಮಾಧ್ಯಮ ಶಿಕ್ಷಕ ರಾಮಚಂದ್ರ ಹೆಬ್ಬಾರ್ ನಿರೂಪಿಸಿದರು. ಶಿಕ್ಷಕಿ ಶೈಲಜಾ ವಂದಿಸಿದರು.

ಕಳೆದ ಏಳು ವರ್ಷದಿಂದ ನಮ್ಮ ಶಾಲೆಯಲ್ಲಿ ಸಸ್ಯಾಮೃತ ಕಾರ್‍ಯಕ್ರಮದ ಮೂಲಕ ಸಸ್ಯಗಳ ಪರಿಚಯ ಅವುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಆರೋಗ್ಯ ಪೂರ್ಣ ಸಮಾಜಕ್ಕೆ ರೋಗಮುಕ್ತ ಜೀವನ ಅವಶ್ಯ. ಸಸ್ಯಗಳು ಎಲ್ಲವೂ ಅಮೃತ ಸಮಾನ, ಅವುಗಳ ಅಡಿಗೆಯಲ್ಲಿ ಬಳಸುವ ಮೂಲಕ ಆರೋಗ್ಯ ಜೀವನ ಸಾಧ್ಯ,
-ಅನುಪಮಾ ಎಸ್.ಶೆಟ್ಟಿ, ಜಂಟಿ ಕಾರ್‍ಯನಿರ್ವಾಹಕ ನಿದೇರ್ಶಕಿ, ಬಾಂಡ್ಯಾ ಎಜುಕೇಶನ್ ಟ್ರಸ್ಟ್.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.