ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ೪೦೦ ವರ್ಷಗಳ ಇತಿಹಾಸ ಹೊಂದಿದ ಹಳೆ ಬ್ರಹ್ಮರಥದ ಮಾದರಿಯನ್ನಾಗಿಟ್ಟುಕೊಂಡು ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋಟೇಶ್ವರ ಸಮೀಪದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಗುರು ಲಕ್ಷ್ಮೀನಾರಾಯಣ ಆಚಾರ್ಯ ಇವರ ನೇತೃತ್ವದಲ್ಲಿ ನಿರ್ಮಾಣಗೊಂಡ ರಥವು ಸೆ.೩೦ ಸೋಮವಾರ ಕೋಟೇಶ್ವರದಿಂದ ಕುಕ್ಕೆಯತ್ತ ಹೊರಟಿದೆ.
ಮೊದಲಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಗವದ್ವಜ ಹಾರಿಸಿ ಚಾಲನೆ ನೀಡಿದರು. ವಿಧಾನ ಪರಿಷತ್ ಸಭಾಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಡ್ಡೋಡಿ, ಬ್ರಹ್ಮರಥ ನಿರ್ಮಾಣದ ರುವಾರಿ ಮುತ್ತಪ್ಪ ರೈ ಪತ್ನಿ ಅನುರಾಧಾ ಎಂ.ರೈ ಈಡುಗಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಬಹ್ಮರಥ ಹೊರಡುವ ಮುನ್ನಾ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ಹಾಗೂ ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಕೋಟೇಶ್ವರ ಉಡುಪಿ ಮೂಲ್ಕಿ ಮಾರ್ಗವಾಗಿ ಸಂಜೆ ಮಂಗಳೂರು ಕದ್ರಿ ದೇವಸ್ಥಾನ ತಲುಪಲಿದ್ದು, ಅಲ್ಲಿಯೇ ತಂಗಿ ಬೆಳಗ್ಗೆ ಮತ್ತೆ ಪ್ರಯಾಣ ಮುಂದುವರಿಸಲಿದೆ. ಕದ್ರಿಯಿಂದ ಕಡಬದ ವರೆಗೆ ಬ್ರಹ್ಮರಥ ಸಾಗಿ ಕಡಬದಲ್ಲಿ ತಂಗಲಿದೆ. ಕಡಬದಿಂದ ವಾಹನ ಜಾಥಾ ಮಾಗೂ ಮೆರವಣಿಗೆ ಮೂಲಕ ಸಂಜೆ ೪ಕ್ಕೆ ಬ್ರಹ್ಮರಥ ಸುಬ್ರಹ್ಮಣ್ಯಕ್ಕೆ ತಲುಪಲಿದೆ. ಕೋಟೇಶ್ವರದಿಂದ ಕುಕ್ಕೆ ಸುಬ್ರಹ್ಮಣ್ಯದ ತನಕ ಬ್ರಹ್ಮರಥ ಸಾಗಿಸುವ ವಾಹನ ವ್ಯವಸ್ಥೆ ಹಾಗೂ ಸಂಪೂರ್ಣ ವೆಚ್ಚ ಮಾಜಿ ಸಚಿವ ನಾಗರಾಜ ಶೆಟ್ಟಿ ಹಾಗೂ ಗಣೇಶ್ ಶೆಟ್ಟಿ ವಹಿಸಿಕೊಂಡಿದ್ದಾರೆ.
ಉದ್ಯಮಿ ಮುತ್ತಪ್ಪ ರೈ, ಅಜಿತ್ ಶೆಟ್ಟಿ ಕೊಡುಗೆ..
ಚಂಪಾಷ್ಠ ಸಮಯದಲ್ಲಿ ಶ್ರದ್ಧಾ ಭಕ್ತಿಂದ ಎಳೆಯಲಾಗುವ ಬ್ರಹ್ಮರಥ ಶಿಥಿಲಾವ್ಯಸ್ಥೆಗೆ ತಲುಪಿತ್ತು. ಈಗಾಗಿ ದೇವಳದ ವತಿಂದ ಪ್ರಶ್ನೆ ಚಿಂತನೆ ಮಾಡಿದ ಸಂದರ್ಭ ಈ ವಿಚಾರ ತಿಳಿದ ಬಳಿಕ ನೂತನ ರಥಕ್ಕೆ ಮೂಹರ್ತ ಮಾಡಲಾಗಿತ್ತು. ಬೆಂಗಳೂರು ಬಿಡದಿ ರಿಯಾಲಿಟಿ ವೆಂಚರ್ ಪೋರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಮುತ್ತಪ್ಪ ರೈ ಹಾಗೂ ಪಾಲುದಾರ ಅಜಿತ್ ಶೆಟ್ಟಿ ಇವರ ಸಹಕಾರದೊಂದಿಗೆ ಅಂದಾಜು ಎರಡುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ನೂತನ ಬ್ರಹ್ಮರಥವನ್ನು ದೇವಳಕ್ಕೆ ದಾನ ರೂಪದಲ್ಲಿ ನೀಡಲಾಗಿದೆ.
ಕಾಷ್ಠ ಶಿಲ್ಪದ ವೈಭವ:
ಶಿಲ್ಪಶಾಸ್ರ್ತದ ಪ್ರಕಾರ ಸ್ಕಂದ್ಯ ರಥದ ಮಾದರಿಯಲ್ಲೇ ರಥವನ್ನು ತಯಾರಿಸಲಾಗಿದೆ. ಹಳೆಯ ರಥದ ಆಯ ಮತು ಅಳತೆಗೆ ಸಮವಾಗಿ ಪ್ರಾಚೀನ ಶಿಲ್ಪ ಕಲೆಗೆ ದಕ್ಕೆ ಬರದಂತೆ ನೆಲದಿಂದ ಜಿಡ್ಡೆಯ ವರೆಗೆ 17 ಅಡಿ ಎತ್ತರ ಮತ್ತು 17 ಅಡಿ ಅಗಲವಾಗಿ ಒಟ್ಟು ರಥ ಕಲಶದ ತುದಿಯವರೆಗೆ 63 ಅಡಿ ಎತ್ತರ ಹೊಂದಿದೆ. ಈ ರಥದಲ್ಲಿ ಒಟ್ಟು 6 ಚಕ್ರಗಳಿದ್ದು 8.5 ಅಡಿ ಎತ್ತರವಾಗಿದೆ. ಇದರಲ್ಲಿ ಅಜ್ಜಿನ ಮರ, ನೆಗಳನ ಅಡ್ಡೆ, ಮತ್ತು ಚಕ್ರಗಳು ಕಿರಾಲು ಬೋಗಿ ಮರದಿಂದ ತಯಾರಿಸಿದ್ದು ಇನ್ನುಳಿದ ಭಾಗಕ್ಕೆ ಸಂಪೂರ್ಣ ಸಾಗುವಾನಿ ಮರವನ್ನು ಬಳಸಲಾಗಿದೆ. ಈ ರಥವು 16 ಅಂತಸ್ತುಗಳ ಚೌಕದಲ್ಲಿ ಆನೆ ಜಂತಿ, ಬಳ್ಳಿಸಾಲು, ಪದ್ಮನ ಸಾಲು, 4 ಅಂತಸ್ತು ಚಿತ್ರದ ವಿಗ್ರಹಗಳು, ವಿಷ್ಣುವಿನ ಚರ್ತುವಂಶಿ ಚಿತ್ರಗಳು, ಶೀವನ ಲೀಲೆಗಳು, ದಕ್ಷಯಜ್ಞ, ಪಾರ್ವತಿ ಕಲ್ಯಾಣ, ಸುಬ್ರಹ್ಮಣ್ಯ ಜನನ, ಕಾರ್ತಿಕೇಯ, ರಾಮಯಾಣ ಭಾಗವಾದ ಪುತ್ರ ಕಾಮ್ಟೇಯಾಗ, ದಶಾವತಾರ, ದಿಕ್ಕುಪಾಲಕರು, ದೇವರು ಕುಳಿತುಕೊಳ್ಳುವ ಪೀಠ, ಆನೆ ಮೇಲೆ ಕುಳಿತ ಸಿಂಹ, ಚತುರ್ವಿಂಶತಿ ಮೂರ್ತಿಗಳು, 4 ಮೂಲೆಯಲ್ಲಿ 5 ಅಡಿ ಎತ್ತರದ ದ್ವಾರಪಾಲಕರೂ ಸೇರಿದಂತೆ ಸಾವಿರಾರೂ ಚಿತ್ರಗಳು ಕಾಷ್ಠ ಶಿಲ್ಪ ಕೆತ್ತನೆಯ ಶಿಲ್ಪಿಗಳಿಂದ ವೈಭವವಾಗಿ ಮೂಡಿಬಂದಿದೆ. ಸುಮಾರು ಒಂದೂವರೆ ವರ್ಷಗಳ ಅವಯಲ್ಲಿ 42ಕ್ಕೂ ಅಧಿಕ ಮಂದಿ ಶಿಲ್ಪಿಗಳ ಮೂಲಕ ಹಳೆಯ ಶೈಲಿಯಲ್ಲಿಯೇ ನೂತನವಾಗಿ ಈ ಬ್ರಹ್ಮರಥ ನಿರ್ಮಾಣಗೊಂಡಿದೆ.
ಶಿಲ್ಪಿಗಳ ಕಾರ್ಯಕ್ಕೆ ಫಿದಾ!
ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ಇವರ ಕೈಚಳಕದಲ್ಲಿ 116ನೇ ರಥವಾಗಿ ಕುಕ್ಕೆ ದೇವಳದ ಬ್ರಹ್ಮರಥ ಮೂಡಿಬಂದಿದೆ. ಇದರಲ್ಲಿ 37 ಬ್ರಹ್ಮರಥ, 73 ಪುಷ್ಪರಥ, 9 ಬೆಳ್ಳಿಯ ರಥ, 2 ಚಿನ್ನದ ಮರದ ರಥ, 1 ಇಂದ್ರ ರಥ, 1 ಚಂದ್ರ ರಥ, 2 ಬಂಡಿ ರಥ ಸೇರಿದಂತೆ ಅನೇಕ ರೀತಿಯಲ್ಲಿ ಹಲವು ಮಾದರಿಯಲ್ಲಿ ರಥ ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕ ರಾಜ್ಯವಲ್ಲದೇ ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ, ವಿಶಾಖಪಟ್ಟಣ, ಚೆನೈ ಇಲ್ಲಿನ ಬಹುತೇಕ ಭಾಗಗಳ ದೇವಾಲಯಗಳಿಗೆ ರಥ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ, ಶಿಲ್ಪಗುರು ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರ ಮಡಿಲಿಗೆ ಬಂದಿದೆ. ಈ ಬೃಹತ್ ಕಾರ್ಯದಲ್ಲಿ ಇವರ ಸಹೋದರ ಶಂಕರ ಆಚಾರ್ಯ ಮತ್ತು ಪುತ್ರ ರಾಜಗೋಪಾಲ ಆಚಾರ್ಯ ಸಂಪೂರ್ಣ ಜವಬ್ದಾರಿಯನ್ನು ತೆಗೆದುಕೊಂಡಿದ್ದು ಅದೆಷ್ಟೂ ಶಿಲ್ಪಿಗಳ ಕೈಗೆ ದಾರಿದೀಪವಾಗಿದ್ದಾರೆ.
ಬ್ರಹ್ಮರಥ ಮೆರವಣಿಗೆಯಲ್ಲಿ ಬ್ರಹ್ಮರಥ ನಿರ್ಮಾಣದಲ್ಲಿ ಕೈಜೋಡಿಸಿದ ಅಜಿತ್ ಶೆಟ್ಟಿ, ಅನುರಾಧಾ ಮುತ್ತಪ್ಪ ರೈ, ಕರುಣಾಕರ ರೈ, ಚೆನ್ನಪ್ಪ ರೈ, ಚಂದ್ರಹಾಸ ಶೆಟ್ಟಿ, ದಿವಾಕರ ರೈ ಮುಂತಾದವರು ಇದ್ದರು. ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುದ್ದೋಡಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ., ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಕುಕ್ಕೆ ದೇವಳದ ಕಾರ್ಯನಿರ್ವಾಹಣಾಕಾರಿ ರವೀಂದ್ರ ಎಮ್.ಎಚ್ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಕೋಟೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋರ್ಕೋಡು ಗೋಪಾಲ ಶೆಟ್ಟಿ, ರಾಜೀವ ರೈ, ಪ್ಲಾಸ್ ಕಮಿಟಿ ಶಿವರಾಮ ರೈ, ಪ್ರೀತಮ್ ರೈ ಇದ್ದರು.
ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ಹಳೆಯ ತಲೆಮಾರಿನ ರಥದ ಮಾದರಿಯಲ್ಲಿಯೇ ಅದ್ಬುತ ರೀತಿಯಲ್ಲಿ ಕಲಾತ್ಮಕವಾದ ರಥವನ್ನು ಅಮೂಲ್ಯ ಮರಗಳ ಮೂಲಕವಾಗಿ ಶಿಲ್ಪಿಗಳಿಂದ ಕುಕ್ಕೆ ಕ್ಷೇತ್ರಕ್ಕೆ ಸಿದ್ದಮಾಡಿಕೊಟ್ಟಿದ್ದು ಸರಕಾರದ ವತಿಯಿಂದ ಅದನ್ನು ಸ್ವೀಕರಿಸುವ ಕಾರ್ಯಕ್ಕೆ ಇಲ್ಲಿ ಚಾಲನೆ ನೀಡಲಾಗಿದೆ.
– ಕೋಟಾ ಶ್ರೀನಿವಾಸ ಪೂಜಾರಿ (ಮುಜರಾಯಿ ಸಚಿವ)
ಕಳೆದ ಹತ್ತು ವರ್ಷದ ಹಿಂದೆ ಬ್ರಹ್ಮರಥ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಅಷ್ಟಮಂಗಲ ಪ್ರಸ್ನೆಯಲ್ಲಿ ಕಂಡುಕೊಂಡಂತೆ ದೇವಸ್ಥಾನ ಸಮಿತಿ ದೇಶೀಯ ಹಾಗೂ ಕುಕ್ಕೆ ಸುತ್ತಮುತ್ತಲಿನ ಮರಗಳ ಬಳಕೆಗೆ ಒತ್ತು ನೀಡಿದ್ದರಿಂದ ರಥ ನಿರ್ಮಾಣ ವಿಳಂಭಕ್ಕೆ ಕಾರಣ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಿಂದಿನ ಬ್ರಹ್ಮರಥದಂತೆ ನಿರ್ಮಾಣ ಮಾಡುವುದು ನಮಗೆ ಸವಾಲಾಗಿದ್ದು, ಸಾಗವಾನಿ, ಹೆಬ್ಬಲಸು, ಬೋಗಿ ಮರಗಳ ಬಳಸಲಾಗಿದೆ. ಗಾಲಿ ಸೇರಿ ರಥದ ಒಟ್ಟು ಬಾರ ೩೫ ಟನ್ ಆಗಿದ್ದು, ೪೦ ಜನ ಶಿಲ್ಪಿಗಳ ಕಳೆದ ಒಂದು ವರ್ಷದಿಂದ ರಥಕ್ಕಾಗಿ ದುಡಿದಿದ್ದಾರೆ. ಇದೂ ವರೆಗೆ 116 ರಥ ನಿರ್ಮಿಸಿದ್ದು, ಕುಕ್ಕೆ ಬ್ರಹ್ಮರಥ ಅವೆಲ್ಲಕ್ಕಿಂತಲೂ ದೊಡ್ಡದು.
– ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ, ಬ್ರಹ್ಮರಥ ಶಿಲ್ಪಿ.
ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮರಥ ಕೊಡುವುದು ನಮ್ಮ ಪಾಲಿಗೆ ಸಿಕ್ಕ ಸೇವೆ ಎಂದುಕೊಂಡಿದ್ದು, ನಾವು ಮಾಡಿದ್ದಲ್ಲ ದೇವರು ನಮ್ಮ ಮೂಲಕ ಬ್ರಹ್ಮರಥ ಮಾಡಿಸಿಕೊಂಡಿದ್ದಾನೆ. ನಾವು ನಿಮಿತ್ತ ಮಾತ್ರ ನಮ್ಮ ಮೂಲಕ ದೇವರು ಮಾಡಿಸಿಕೊಂಡ ಸೇವೆ ನಮ್ಮ ಪಾಲಿಗೆ ಬಂದ ಅದೃಷ್ಠ ಅಂತಲೇ ಭಾವಿಸಿದ್ದೇವೆ. ಇದೊಂದು ಪುಣ್ಯದ ಕೆಲಸವಾಗಿದ್ದು, ಸಾವಿರದಲ್ಲಿ ಒಬ್ಬರಿಗೆ ಇಂತಾ ಸೇವಾ ಮಾಡುವ ಅವಕಾಶವಿದ್ದು, ಅದು ನಮಗೆ ಸಿಕ್ಕಿದ್ದು ದೇವರ ವರಪ್ರಸಾದವೇ ಸರಿ,
– ಅನುರಾಧಾ ಮುತ್ತಪ್ಪ ರೈ, ಬ್ರಹ್ಮರಥ ನಿರ್ಮಾಣದ ದಾನಿಗಳು.
ನಾನೂರು ವರ್ಷದ ಹಿಂದಿನ ಕುಕ್ಕೆ ಸುಬ್ರಹ್ಮಣ್ಯ ದೇವರ ಬ್ರಹ್ಮರಥ ನಿರ್ಮಾಣ ಕೆಲಸ ನಮಗೆ ಸಿಕ್ಕಿರುವುದು ನಮ್ಮ ಪೂರ್ವಜ್ಮದ ಪುಣ್ಯದ ಫಲ. ಒಂದೂವರೆ ವರ್ಷದಲ್ಲಿ ೪೨ ಜನ ಕಾಷ್ಟಶಿಲ್ಪಿಗಳು ರಥ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು, ೭೦೦ ಸೇಪ್ಟಿ ಸಾಗವಾನಿ ಅಲ್ಲದೆ ಚಕ್ರಕ್ಕೆ ಬೋಗಿ ಮರ ಬಳಸಲಾಗಿದೆ. ರಥಕ್ಕೆ ಹೆಬ್ಬೆಲಸು ಕೂಡಾ ಬಳಸಲಾಗಿದೆ.
– ರಾಜಗೋಪಾಲ ಆಚಾರ್ಯ, ಲಕ್ಷ್ಮೀನಾರಾಯಣ ಆಚಾರ್ಯ ಪುತ್ರ.
(ವರದಿ- ಯೋಗೀಶ್ ಕುಂಭಾಸಿ)
Comments are closed.