ಕುಂದಾಪುರ: ತಾಯ್, ತಾಯ್ ನಾಡ್ನ್, ತಾಯಿ ಭಾಷಿನ ಯಾವತ್ತು ಮರುಕ್ಕ್ ಆಗ. ಅದನ್ನು ಮರುವುದು ಒಂದೇ, ಉಂಡ್ ಕೂಳು ಮರುವುದು ಒಂದೇ’-ಎಂದು ಕುಂದಾಪುರ ಕನ್ನಡದಲ್ಲಿ ಮಾತನಾಡಿದ್ದು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ.
ಕುಂದಾಪುರದ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ನಡೆದ ರಾಜ್ಯೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ರಾಜು ಅವರು, ಕುಂದಕನ್ನಡ ಕರ್ನಾಟಕದ ಒಂದು ಮುಖ್ಯ ಭಾಗ. ಕನ್ನಡ ಭಾಷೆಗೆ ಈ ಕುಂದಾಪ್ರ ಭಾಗದ ಶಿವರಾಮ ಕಾರಂತರರಂತಹ ಮಹನೀಯರ ಕೊಡುಗೆ ಅಪಾರ. ಕರ್ನಾಟಕದಲ್ಲಿ ಕನ್ನಡವೇ ಪ್ರಧಾನವಾಗಿದೆ ಎಂದರು.
ಕನ್ನಡ ಭಾಷಿ ಒಂದ್ ದಿನಕ್ ಸೀಮಿತ ಆಪ್ಕ್ ಆಗ. ನಾವು ಮಾಡೋ ವೈವಾಟಿನಲ್ಲೂ ಇರ್‍ಕ್. ಬರೀ ಭಾಷಿ, ಭಾದ್ರೆ ಅಂದೆ ಸಾಲ ಮರ್ರೆ, ಅದನ್ನ ಆಡಿ ಬಳಸಿ, ಕಲ್ಸಿ, ಬೆಳ್ಳಿಕ್. ಆಗ ಮಾತ್ರ ನಮ್ಮ ಭಾಷಿ, ನಮ್ಮ ಹೆಮ್ಮೆ, ನಮ್ಮ ನಾಡು, ನಮ್ಮ ಗರಿಮೆ ಆತ್. ಯಾವ ಭಾಷೆಯ ಹೇರಿಕೆಯೂ ಸರಿಯಲ್ಲ. ಇಂಗ್ಲೀಷ್ ನಮಗೆ ಬೇಕು ನಿಜ. ಆದರೆ ಎಷ್ಟು ಬೇಕು? ಹೇಗೆ ಬೇಕು? ಎನ್ನುವುದನ್ನು ನಾವೇ ಯೋಜಿಸಿ ಅಳವಡಿಸಿಕೊಳ್ಳಬೇಕು. ಬದುಕು ಭಾಷೆಗಿಂತ ದೊಡ್ಡದು ಅಂತಾ ಹೇಳುತ್ತಾರೆ. ಆದರೆ ಭಾಷೆಯನ್ನು ಬಿಟ್ಟು ಬದುಕಿಲ್ಲ ಎನ್ನುವುದನ್ನು ಮರೆಯಬಾರದು.
ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಎಎಸ್ಪಿ ಹರಿರಾಂ ಶಂಕರ್, ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಯುವಜನಾ ಸೇವಾ ಅಧಿಕಾರಿ ಕುಸುಮಾಕರ ಶೆಟ್ಟಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆಯ ಸದಸ್ಯರಾದ ದೇವಕಿ ಸಣ್ಣಯ್ಯ, ವಿ. ಪ್ರಭಾಕರ್, ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ, ಮಾಜಿನ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮತ್ತಿತರರು ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪಥಸಂಚಲನ
ಸಹಾಯಕ ಆಯುಕ್ತರು ವಿವಿಧ ಶಾಲೆಗಳ ಎನ್‌ಸಿಸಿ, ಎನ್ನೆಸ್ಸೆಸ್, ಸ್ಕೌಟ್ಸ್, ಗೈಡ್ಸ್ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ನೇತೃತ್ವದಲ್ಲಿ ಕುಂದಾಪುರ ಪೊಲೀಸ್ ತಂಡ, ವಿ.ಕೆ.ಆರ್ ಶಾಲೆ, ಸೈಂಟ್ ಮೇರಿಸ್ ಶಾಲೆ, ಹೋಲಿ ರೋಜರಿ ಶಾಲೆ, ವೆಂಕಟರಮಣ ಶಾಲೆ, ಬಿ.ಆರ್. ರಾವ್ ಶಾಲೆ, ಎಚ್‌ಎಂಎಂ ಶಾಲೆ, ವಡೇರಹೋಬಳಿ ಶಾಲೆ, ಸೈಂಟ್ ಜೋಸೆಫ್ ಶಾಲೆ ಸಹಿತ ವಿವಿಧ ಶಾಲೆಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು.
ಸಭಾ ಕಾರ್‍ಯಕ್ರಮದ ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.
(ವರದಿ- ಯೋಗೀಶ್ ಕುಂಭಾಸಿ)
Comments are closed.