ಕುಂದಾಪುರ: ತಾಲೂಕಿನ ಪುರಾತನ ಸುಬ್ರಮಣ್ಯ ದೇವಸ್ಥಾನವಾದ ಕೋಟೇಶ್ವರ ಸಮೀಪದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ದೇವಸ್ಥಾನ (ಸುಬ್ರಮಣ್ಯ)ದಲ್ಲಿ ಚಂಪಾ ಷಷ್ಠಿಯ ದಿನವಾದ ಡಿ.೨ ಸೋಮವಾರ ಷಷ್ಠಿ ಮಹೋತ್ಸವ ಸಂಭ್ರಮದಿಂದ ಜರುಗಿತು. ದೇವಸ್ಥಾನದಲ್ಲಿ ಬೆಳಿಗ್ಗೆ 3.30ರಿಂದಲೇ ಸಾವಿರಾರು ಜನರು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಹರಕೆ ಸಮರ್ಪಿಸಿದರು.
ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಭಂದಿ, ಸಂತಾನ ಸಂಭಂದಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಟಿಯ ದಿನ ಸಮರ್ಪಿಸುತ್ತಾರೆ. ನಾಗ(ಸುಬ್ರಮಣ್ಯನಿಗೆ) ಸಿಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಈ ದಿನ ಪುಷ್ಪವನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ಹರಕೆಗಳನ್ನು ನಾಗ ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಷಷ್ಟಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಡಿಯೂ ಇದೆ.
ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದು, ಮುಂಜಾನೆಯಿಂದಲೇ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಹಣ್ಣು ಕಾಯಿ, ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ಸರತಿ ಸಾಲಿನಲ್ಲಿ ಬರುವ ದೃಶ್ಯವೂ ಕಂಡುಬಂತು. ಜೀರ್ಣೋದ್ದಾರ ಕಾರ್ಯಗಳು ಬಹುತೇಕ ನಡೆದಿದ್ದು ದೇವಸ್ಥಾನದ ಪ್ರಾಂಗಣದಲ್ಲಿ ವಿಶಾಲ ಜಾಗವಿರುವ ಕಾರಣ ಈ ಬಾರಿ ನೂಕುನುಗ್ಗಲು ಉಂಟಾಗಿರಲಿಲ್ಲ. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಹತ್ತು ಸಾವಿಕ್ಕು ಅಧಿಕ ಭಕ್ತರು ಪಾಲ್ಘೊಂಡರು. ಡಿ.3 ರಂದು ಹಾಲಿಟ್ಟು ಸೇವೆ, ನಾಗ ಮಂಡಲೋತ್ಸವ ಕಟ್ಟುಕಟ್ಟಳೆ ಸೇವೆ ಹಾಗೂ ತುಲಾಭಾರ ಸೇವೆ ಜರುಗಲಿದೆ.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ್ ಎನ್. ಶೆಟ್ಟಿ, ಉತ್ಸವ ಸಮಿತಿಯ ಉದಯ್ ಕುಮಾರ್ ಶೆಟ್ಟಿ ಹಾಗೂ ಸದಸ್ಯರು, ಕ್ರಷ್ಣ ದೇವ ಕಾರಂತ್, ಭರತ್ ಶೆಟ್ಟಿ ಕಾಳಾವರ, ದೀಪಕ್ ಕುಮಾರ್ ಶೆಟ್ಟಿ, ಮೇಪು ಪ್ರಭಾಕರ್ ಶೆಟ್ಟಿ, ಬಾಲಕ್ರಷ್ಣ ಶೆಟ್ಟಿ, ಚಂದ್ರಶೇಖರ್ ಹೆಗ್ಡೆ, ತಂತ್ರಿಗಳಾದ ಕ್ರಷ್ಣ ಸೋಮಯಾಜಿ, ಪ್ರಧಾನ ಅರ್ಚಕರಾದ ಸತ್ಯನಾರಾಯಣ ಪುರಾಣಿಕ ಉಪಸ್ಥಿತರಿದ್ದರು.
ಜಿ. ಶಂಕರ್ ಫ್ಯಾಮಿ ಟ್ರಸ್ಟ್ ಪ್ರವರ್ತಕ ನಾಡೋಜಾ ಡಾ. ಜಿ. ಶಂಕರ್ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭ ಮಾತನಾಡಿದ ಅವರು, ದೇವರಿಗೆ ಚಿನ್ನದ ಮುಖವಾಡವನ್ನು ತನ್ನ ವೈಯಕ್ತಿಕವಾಗಿ ಸಮರ್ಪಣೆ ಮಾಡುತ್ತೇನೆ. ಮತ್ತು ಕಾಳಾವರ-ಕಾಂತಾವರ ರಸ್ತೆ ಅಭಿವೃದ್ಧಿ, ದೇವಸ್ಥಾನದ ಸುತ್ತು ಪೌಳಿ ಮತ್ತು ಇಂಟರ್ ಲಾಕ್ ಅಳವಡಿಕೆ ಬಗ್ಗೆ ಅಂದಾಜು ವೆಚ್ಚ ಸಿದ್ದಪಡಿಸಿ ಮನವಿ ಕೊಟ್ಟಲ್ಲಿ ಮುಜರಾಯಿ ಸಚಿವರ ಮೂಲಕ ಮಾಡಿಸಿಕೊಡುವ ಆಶ್ವಾಸನೆ ನೀಡಿದರು.
ಕುಂದಾಪುರ ಸಿಪಿಐ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಮತ್ತು ಕುಂದಾಪುರ ಸಂಚಾರಿ ಠಾಣೆ ಉಪನಿರೀಕ್ಷಕ ಸುದರ್ಶನ್ ಹಾಗೂ ಸಿಬ್ಬಂದಿಗಳು ಟ್ರಾಫಿಕ್ ವ್ಯವಸ್ಥೆ ನಿರ್ವಹಿಸಿದರು.
(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
Comments are closed.