ಕುಂದಾಪುರ: ಪ್ರತಿ ವರ್ಷ ಜನವರಿ 14 ರಂದು ಮಕರ ಸಂಕ್ರಮಣದ ದಿನ ನಡೆಯುವ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮಕರ ಸಂಕ್ರಮಣ ಉತ್ಸವ ಮತ್ತು ಕೆಂಡಸೇವೆ ಈ ಬಾರಿ ಪಂಚಾಂಗದ ಪ್ರಕಾರ ಅಭಿಜಿನ್ ಮುಹೂರ್ತದ ಆಧಾರದಲ್ಲಿ ಜನವರಿ 15 ರಂದು ನಡೆಯಲಿದೆ. ಇನ್ನು ಈ ರೀತಿಯಾಗಿ ಉತ್ಸವ ಒಂದು ದಿನ ತಡವಾಗಿ ನಡೆಯುತ್ತಿರುವುದು ಸುಮಾರು 60 ವರ್ಷಗಳ ಬಳಿಕ ಎಂದು ಹಿರಿಯ ಅರ್ಚಕ ನಾಗೇಶ ಮಂಜ ಹೇಳಿದ್ದಾರೆ.
ಪುರಾಣ ಪ್ರಸಿದ್ಧವಾದ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗನ ಆಲಯವನ್ನು ಉಡುಪಿ ಜಿಲ್ಲೆಯೂ ಸೇರಿದಂತೆ ಮಂಗಳೂರು ಹಾಗೂ ರಾಜ್ಯದ ವಿವಿದೆಡೆಯ ಲಕ್ಷಾಂತರ ಮಂದಿ ಭಕ್ತರು ನಂಬಿದ್ದಾರೆ. ಪ್ರತಿವರ್ಷ ಜ.14ರಂದು ನಡೆಯುವ ಮಕರ ಸಂಕ್ರಮಣ ಉತ್ಸವ ಪಂಚಾಂಗದ ಹಿನ್ನೆಲೆ ಈ ಬಾರಿ ಒಂದು ದಿನ ತಡವಾಗಿ ಬಂದಿದ್ದು ಭಕ್ತರು ಜ.15ಕ್ಕೆ ಆಗಮಿಸಬೇಕು ಎಂದು ದೇವಸ್ಥಾನದ ಅನುವಂಶೀಯ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಹೇಳಿದ್ದಾರೆ.
ಮಕರ ಸಂಕ್ರಮಣ ಉತ್ಸವ…
ಜನವರಿ 15ಕ್ಕೆ ಅಭಿಜಿನ್ ಮುಹೂರ್ತದಲ್ಲಿ ಮಧ್ಯಾಹ್ನ 12ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿದಿಯಲ್ಲಿ ಮಹಾ ಮಂಗಳಾರತಿ, ರಾತ್ರಿ 10.30ಕ್ಕೆ ಗೆಂಡಸೇವೆ, ಜನವರಿ 16 ಗುರುವಾರದಂದು ಪೂರ್ವಾಹ್ನ 9.30ಕ್ಕೆ ಮಹಾ ಮಂಗಳಾರತಿ, ಮಂಡಲ ಸೇವೆ, ಜನವರಿ17 ಶುಕ್ರವಾರ ಪೂರ್ವಾಹ್ನ 9.30ಕ್ಕೆ ಮಹಾ ಮಂಗಳಾರತಿ ನಂತರ ಮಂಡಲ ಸೇವೆ, ರಾತ್ರ್ರಿ ಘಂಟೆ10ಕ್ಕೆ ಕಡಬು ನೈವೇದ್ಯ, ಮಹಾ ಮಂಗಳಾರತಿ ನಂತರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಫ್ಲಾಸ್ಟಿಕ್ ಮುಕ್ತ ಹಬ್ಬದಾಚರಣೆ…
ಈ ಬಾರಿ ಮಾರಣಕಟ್ಟೆ ಜಾತ್ರೆಯಲ್ಲಿ ಭಕ್ತಾದಿಗಳು ಈ ಬಾರಿ ಪ್ಲಾಸ್ಟಿಕ್ ಚೀಲ ಬಳಸಬಾರದು. ಮಾರಣಕಟ್ಟೆ ಪರಿಸರದ ಅಂಗಡಿಯವರಿಗೂ ಪ್ಲಾಸ್ಟಿಕ್ ಬಳಸಬಾರದೆಂಬ ಸೂಚನೆ ನೀಡಲಾಗಿದ್ದು ಪ್ಲಾಸ್ಟಿಕ್ ಮುಕ್ತ ಉತ್ಸವ ನಡೆಸಲು ದೇವಸ್ಥಾನದವರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಭೆ ನಡೆದಿದ್ದು ಜ.೧೩ಕ್ಕೆ ಗ್ರಾ.ಪಂ ಹಾಗೂ ದೇವಸ್ಥಾನದ ಒಗ್ಗೂಡುವಿಕೆಯಲ್ಲಿ ಸಭೆ ನಡೆಸುತ್ತೇವೆ. ಒಟ್ಟಾರೆ ಈ ಬಾರಿ ಫ್ಲಾಸ್ಟಿಕ್ ಮುಕ್ತ ಮಕರ ಸಂಕ್ರಮಣ ಉತ್ಸವ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾರಣಕಟ್ಟೆ ದೇವಳದ ಉಸ್ತುವಾರಿ ರಘುರಾಮ ಶೆಟ್ಟಿ ಹೇಳಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.