ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಯು ಶನಿವಾರ ನಸುಕಿನಲ್ಲಿ ಸಾಂಸ್ಕೃತಿಕ ವೈಭವಗಳೊಂದಿಗೆ ನಡೆಯಿತು. ಕಾಪು ದಂಡತೀರ್ಥದಲ್ಲಿ ಮಧ್ಯರಾತ್ರಿ 1.30 ಕ್ಕೆ ಸ್ನಾನ ಮುಗಿಸಿದ ಯತಿಗಳು, 1.40 ಕ್ಕೆ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ 2 ಗಂಟೆಗೆ ಜೋಡುಕಟ್ಟೆ ಆಗಮಿಸಿದರು. 2.15 ರ ಸುಮಾರಿಗೆ ವೈಭವದ ಮೆರವಣಿಗೆ ಆರಂಭವಾಯಿತು. ಅಲ್ಲಿಂದ ಹೊರಟ ಮೆರವಣಿಗೆ ಕೋರ್ಟ್ ರಸ್ತೆ, ಹಳೆಯ ಡಯನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಸಾಗಿ ಬಂತು.
ಗಮನ ಸೆಳೆದ ಟ್ಯಾಬ್ಲೋಗಳು..
ಮೆರವಣಿಗೆಯಲ್ಲಿ ಸಾಗಿದ ಜನಪದ ಕಲಾ ಪ್ರಕಾರಗಳು ಕಣ್ಮನ ಸೆಳೆದವು. ಸ್ತಬ್ಧಚಿತ್ರಗಳು, ಚೆಂಡೆಯ ನಾದ, ವಾದ್ಯ, ಶ್ರೀಸಾಯಿ ಚೆಂಡೆ ಬಳಗ, ಪೂಜೆ ಕುಣಿತ, ಗೊರವರ ಕುಣಿತ, ಕೊಂಬು ಕಹಳೆ, ತುಳಸಿ ಕಟ್ಟೆ, ಮೂರು ಪುಟಾಣಿಗಳಿಂದ ಮರಕಾಲು ಕುಣಿತ, ಕಂಗೀಲು ನೃತ್ಯ, ನಾಸಿಕ್ ಬ್ಯಾಂಡ್, ಗೊಂಬೆಯಾಟ, ಕೊಂಬೆ ಬಳಗ, ಹರೇ ರಾಮ ಹರೇ ಕೃಷ್ಣ, ಪೂರ್ಣಕುಂಭ, ಮಹಿಳೆಯರಿಂದ ಭಜನೆ, ಕ್ಲೀನ್ ಉಡುಪಿ ಗ್ರೀನ್ ಉಡುಪಿ, ಮಾರ್ಪಳ್ಳಿ ಮಹಿಳಾ ಮಂಡಳಿಯಿಂದ ನವಶಕ್ತಿ ವೈಭವ ನೋಡುಗರ ಗಮನ ಸೆಳೆಯಿತು.ಕುಂಜಾರುಗಿರಿ ಬೆಟ್ಟದ ಟ್ಯಾಬ್ಲೋಗೆ ಮಹಿಳಾ ಚಾಲಕಿಯಾಗಿದ್ದು, ಭಕ್ತರ ಗಮನ ಸೆಳೆದರು. ಪಂಚವಾದ್ಯ, ವೇದ ಘೋಷ ಮೊಳಗಿತು. ಪೇಜಾವರ ಮಠದ ಕೀರ್ತಿಶೇಷ ಶ್ರೀವಿಶ್ವೇಶತೀರ್ಥ ಶ್ರೀಪಾದರು ಶ್ರೀ ರಾಮನಿಗೆ ಪೂಜೆ ಸಲ್ಲಿಸುತ್ತಿರುವ ಶ್ರೀ ರಾಮಮಂದಿರದ ಟ್ಯಾಬ್ಲೋ ಗಮನಸೆಳೆಯಿತು.
ಅದಮಾರು ಶ್ರೀಈಶಪ್ರಿಯ ತೀರ್ಥ ಶ್ರೀಪಾದರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೊತ್ತುಕೊಂಡು ಬರಲಾಯಿತು. ಕೃಷ್ಣಾಪುರ, ಪೇಜಾವರ ಕಾಣಿಯೂರು, ಸೋದೆ ಶ್ರೀಗಳು ಪಲ್ಲಕ್ಕಿಯಲ್ಲಿ ಕುಳಿತುಕೊಂಡಿದ್ದು, ಪಲ್ಲಕ್ಕಿಯನ್ನು ಟ್ಯಾಬ್ಲೋನಲ್ಲಿ ಇರಿಸಲಾಯಿತು.
ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಹಸ್ರಾರು ಭಕ್ತರು ವೈಭವದ ಪುರಮೆರವಣಿಗೆಗೆ ಸಾಕ್ಷಿಯಾದರು. ಸುರಕ್ಷತೆಯ ದೃಷ್ಟಿಯಿಂದ ಬಿಗು ಪೊಲೀಸ್ ಭದ್ರತೆ ನೀಡಲಾಯಿತು.
ಸರ್ವಜ್ಞ ಪೀಠ ಏರಿದ ಅದಮಾರು ಈಶಪ್ರಿಯ ತೀರ್ಥರು
ಅದಮಾರು ಮಠದ ಈಶಪ್ರಿಯ ತೀರ್ಥರು ಉಡುಪಿ ಶ್ರೀ ಕೃಷ್ಣಮಠದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಅದಮಾರು ಪರ್ಯಾಯ ಆರಂಭವಾಯಿತು. ಶನಿವಾರ ಮುಂಜಾನೆ 5.57ರ ಸಮಯದಲ್ಲಿ ಈಶಪ್ರಿಯ ತೀರ್ಥರ ಪ್ರಥಮ ಪರ್ಯಾಯ ಆರಂಭವಾಯಿತು. ಸಂಪ್ರದಾಯದಂತೆ ಮೆರವಣಿಗೆಯ ಮೂಲಕ ಕೃಷ್ಣಮಠ ಪ್ರವೇಶಿಸಿದ ಅದಮಾರು ಶ್ರೀಗಳು ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಪಡೆದರು. ನಂತರ ಚಂದ್ರ ಮೌಳೇಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಮಾಡಿದರು.
ಬೆಳಿಗ್ಗೆ ಸುಮಾರು 5.30ರ ಸಮಯಕ್ಕೆ ಅದಮಾರು ಈಶಪ್ರಿಯ ತೀರ್ಥರು ಕೃಷ್ಣಮಠ ಪ್ರವೇಶಿಸಿದರು. ನಂತರ 5.57ರ ಶುಭ ಮುಹೂರ್ತದಲ್ಲಿ ಸಂಪ್ರದಾಯದಂತೆ ಅಕ್ಷಯ ಪಾತ್ರೆ, ಸಟ್ಟುಗ ಮತ್ತು ಗರ್ಭಗುಡಿಯ ಕೀಲಿಕೈ ಪಡೆದು ಸರ್ವಜ್ಞ ಪೀಠಾರೋಹಣ ಮಾಡಿದರು. ಇದರೊಂದಿಗೆ ಅದಮಾರು ಶ್ರೀಗಳ ಪ್ರಥಮ ಪರ್ಯಾಯ ಆರಂಭವಾಯಿತು.
Comments are closed.