ಮನಮೋಹಕ ತಾಣಗಳು

ಈ ಕೀಟಗಳು ಥೇಟ್ ಎಲೆಗಳಂತೆಯೇ ಕಾಣುತ್ತದೆ…ಪ್ರಕೃತಿಯ ರಹಸ್ಯ

Pinterest LinkedIn Tumblr

ತಕ್ಷಣಕ್ಕೆ ನೋಡಿದಾಗ ಎಲೆಯಂತೆ ಕಾಣುತ್ತದೆ… ತರಗೆಲೆಯ ರಾಶಿಯಲ್ಲಿ ಇದು ಇದ್ದರಂತೂ ದುರ್ಬಿನ್ ಹಿಡಿದರೂ ಇಲ್ಲೊಂದು `ಜೀವಿ’ ಇದೆ ಎಂದು ಕಂಡು ಹಿಡಿಯಲು ಸಾಧ್ಯವೇ ಇಲ್ಲ…!

ನಮ್ಮ ಪ್ರಕೃತಿ ಅಂದರೇನೇ ಹಾಗೆ… ಅನೇಕ ರಹಸ್ಯಗಳ ಕಣಜ. ನಮ್ಮ ಭೂಮಿಯಲ್ಲಿ ಅಗಣಿತ ಜೀವ ಸಂಕುಲವಿದೆ. ಈ ಒಂದೊಂದು ಜೀವ ಸಂಕುಲದಲ್ಲೂ ಒಂದೊಂದು ವಿಶೇಷತೆಯಡಗಿದೆ. ಈ ವಿಶೇಷತೆಗಳು ಮನುಷ್ಯರ ಗಮನಕ್ಕೆ ಬಂದಾಗ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಪಡದೆ ಬೇರೆ ವಿಧಿಯಿಲ್ಲ. ಇದಕ್ಕೆ ಸಾಕ್ಷಿ ಈ ದೃಶ್ಯಗಳು. ಈ ಸೃಷ್ಟಿಯನ್ನು ಕಂಡಾಗ ಭೂತಾಯಿಯನ್ನು ನಮಿಸಲೇ ಬೇಕು…

`ನೇಚರ್ ಇಸ್ ಇಟ್’ ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಆಗಿರುವ ಕೀಟಗಳ ವಿಡಿಯೋ ಈಗ ಎಲ್ಲರ ಕುತೂಹಲ ಕೆರಳಿಸಿದೆ. ಈ ಕೀಟಗಳು ಥೇಟ್ ಎಲೆಗಳಂತೆಯೇ ಕಾಣುತ್ತದೆ. ಸುಮಾರು 26 ಸೆಕೆಂಡಿನ ಈ ವಿಡಿಯೋದಲ್ಲಿ ತರಗೆಲೆ, ಹಸಿರೆಲೆಯಂತೆ ಕಾಣುವ ಆರು ಕೀಟಗಳನ್ನು ಕಾಣಬಹುದಾಗಿದೆ. ವ್ಯಕ್ತಿಯೊಬ್ಬರು ಇವುಗಳನ್ನು ತಮ್ಮ ಅಂಗೈಯಲ್ಲಿ ಹಿಡಿದಿದ್ದಾರೆ.

ಈ ಅಷ್ಟೂ ಕೀಟಗಳು ಎಲೆಯಂತೆ ಕಾಣುವುದು ಮಾತ್ರ ಅಲ್ಲ, ಅವುಗಳ ಬಣ್ಣ ಕೂಡಾ ಗಮನ ಸೆಳೆಯುತ್ತದೆ. ಋತು ಅಥವಾ ಬೆಳವಣಿಗೆಗೆ ಅನುಸಾರವಾಗಿ ಎಲೆಗಳಲ್ಲಿ ಬದಲಾಗುವ ಬಣ್ಣಗಳಂತೆಯೇ ಈ ಕೀಟಗಳೂ ಇವೆ. ತಕ್ಷಣಕ್ಕೆ ಇವುಗಳನ್ನು ನೋಡಿದಾಗ ಖಂಡಿತಾ ಇದು ಕೀಟ ಎಂದೆನಿಸುವುದೇ ಇಲ್ಲ. ಇವುಗಳು ಚಲಿಸಿದಾಗಲೇ ಇದೊಂದು ಜೀವಿ ಎಂದು ಗೊತ್ತಾಗುವುದು.

ಸಾಮಾನ್ಯವಾಗಿ ಈ ಎಲೆಯಂತಹ ಕೀಟಗಳು ದಕ್ಷಿಣ ಆಫ್ರಿಕಾದಿಂದ ಆಸ್ಟ್ರೇಲಿಯಾದ ತನಕ ಕಾಣಸಿಗುತ್ತದೆ. ಸದ್ಯ ಈ ಕೀಟಗಳನ್ನು ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.

ನಿಜಕ್ಕೂ ಪ್ರಕೃತಿಯ ರಹಸ್ಯಕ್ಕೆ ತಲೆಬಾಗಲೇಬೇಕು… ಇಲ್ಲಿರುವ ಒಂದೊಂದು ವಿಶೇಷತೆಗಳು ನಮ್ಮನ್ನು ಖಂಡಿತಾ ಮಂತ್ರಮುಗ್ಧರನ್ನಾಗಿಸುತ್ತದೆ.

Comments are closed.