ಕರಾವಳಿ

ಶಾಲೆ ಪ್ರಾರಂಭ : ಸರ್ಕಾರದ ಆತುರದ ನಿರ್ಧಾರ ಮಕ್ಕಳ ಭವಿಷ್ಯಕ್ಕೆ ಮುಳುವಾಗದಿರಲಿ- ಪೋಷಕರ ಅಳಲು

Pinterest LinkedIn Tumblr

ಖಾಸಗಿ ಶಾಲೆಗಳ ಲಾಬಿಗೆ ಒಳಗಾಗಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡ ಬೇಡಿ : ಜಲತಾಣಗಳಲ್ಲಿ ವ್ಯಾಪಕ ಚರ್ಚೆ

ಮಂಗಳೂರು,ಜೂನ್.06 : ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರ ಉತ್ಸಾಹ ತೋರಿಸುತ್ತಿರುವ ಬಗ್ಗೆ ಹಾಗೂ ಈ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಜಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಈ ನಡುವೆ ಕೋರೂನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಮಯದಲ್ಲಿ ಸರ್ಕಾರವು ಪುಟ್ಟ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಶಾಲೆ ಆರಂಭಿಸಲು ಮುಂದಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಕೆಲವು ಪೋಷಕರಂತೂ ಸದ್ಯಕ್ಕೆ ನಮ್ಮ ಮಕ್ಕಳು ವಿದ್ಯೆ ಕಲಿಯದಿದ್ದರೂ ತೊಂದರೆ ಇಲ್ಲ, ಜೀವದಿಂದ ಇದ್ದರೆ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದು, ಸರ್ಕಾರದ ನಿರ್ಧಾರದ ಬಗ್ಗೆ ಕಿಡಿ ಕಾರಿದ್ದಾರೆ. ಇದು ಸಾಮಾಜಿಕ ಜಲತಾಣಗಳಲ್ಲಿ ಟ್ರೊಲ್ ಆಗಿದೆ.

ಶಾಲೆ ಪ್ರಾರಂಭದ ನಿಮ್ಮ ನಿರ್ಧಾರ ನಮ್ಮ ಮಕ್ಕಳನ್ನು ಕೊಲ್ಲುವ ನಿರ್ಧಾರವೇ?.. ನಮ್ಮ ಮಕ್ಕಳಿಗೆ ಏನಾದರೂ ಆದರೆ ಯಾರು ಹೊಣೆ?..

ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಸ್ವತಹ ಮುಖ್ಯಮಂತ್ರಿಗಳು ಸರಕಾರಿ ಕಡತಕ್ಕೆ ಸಹಿ ಹಾಕಲು e – ಅಫೀಸ್ ತೆರೆದಿದ್ದಾರೆ. ಶಾಲೆಯ ಮಕ್ಕಳಿಗೆ ಈ ಅಂತರದ ಅಗತ್ಯವಿಲ್ಲವೇ. ಅವರಿಗೆ ಸೋಂಕು ತಗುಲಿದರೆ ತೊಂದರೆ ಇಲ್ಲವೇ?..

ಶವ ಸಂಸ್ಕಾರಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಂಡು 20 ಮಂದಿ ಮಾತ್ರ ಪಾಲ್ಗೊಳ್ಳಿ, ಮದುವೆ ಕಾರ್ಯಕ್ರಮದಲ್ಲಿ 50 ಜನ ಮಾತ್ರ ಪಾಲ್ಗೊಳ್ಳಿ ಎನ್ನುವ ಸರ್ಕಾರಕ್ಕೆ ಶಾಲೆಯಲ್ಲಿ ಸಾವಿರ ಮಕ್ಕಳು ಒಟ್ಟು ಸೇರಿದರೂ ಯಾವ ತೊಂದರೆಯು ಇಲ್ಲವೇ? ಇದು ಸಾಮಾಜಿಕ ಜಲತಾಣಗಳಲ್ಲಿ ಟ್ರೊಲ್ ಆಗಿರುವ ಫೋಷಕರ ಆಕ್ರೋಷದ ಮಾತುಗಳು.

ಶಾಲೆಗಳನ್ನು ತೆರೆಯುವುದು ಸರ್ಕಾರದ ಕೊನೆಯ ಆಯ್ಖೆ ಆಗಿರಲಿ:

ಶಾಲೆಗಳನ್ನು ತೆರೆಯುವುದು ಸರ್ಕಾರದ ಕೊನೆಯ ಆಯ್ಖೆ ಆಗಿರಲಿ. ಖಾಸಗಿ ಶಾಲೆಗಳ ಲಾಬಿಗೆ ಒಳಗಾಗಿ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡೋದು ಬೇಡ. ಯಾರು ಏನೇ ಹೇಳಿದರೂ ಮಕ್ಕಳು ಮಕ್ಕಳೇ. ಅವರಿಗೆ ಸಾಮಾಜಿಕ ಅಂತರ, ಮುಟ್ಟದೆ ಇರೋದು, ಸ್ವಚ್ಛತೆ ಅದೆಲ್ಲ ಅಷ್ಟು ಸುಲಭವಾಗಿ ಅರ್ಥವಾಗೋಲ್ಲ, ಅವುಗಳು ಒಂದಕ್ಕೊಂದು ಕೈ ಕೈ ಹಿಡಿದು ಆಟ ಆಡಿಕೊಂಡು , ಪೆನ್ಸಿಲ್ ರಬ್ಬರ್, ಪೆನ್, ತಿಂಡಿ, ನೀರು ಇತ್ಯಾದಿ ಶೇರ್ ಮಾಡ್ಕೊಂಡು ಹಾಗೆ ಜಗಳ ತುಂಟತನ ಮಾಡ್ಕೊಂಡು ಇರುವ ಮುಗ್ಧ ಮಕ್ಕಳಿಗೆ ಸರ್ಕಾರದ ಯಾವ ಮಾರ್ಗಸೂಚಿಯೂ ಕೆಲಸ ಮಾಡಲ್ಲ.

ಒಂದು ಮಗುವಿಗೆ ವೈರಸ್ ಸೋಂಕು ಬಂದರೆ ಸಾವಿರಾರು ಮನೆಗಳಿಗೆ, ನೂರಾರು ಹಳ್ಳಿಗಳಿಗೆ ಸುಲಭವಾಗಿ ರೋಗ ಹರಡುತ್ತೆ. ಇಂತಹ ಪರಿಸ್ಥಿತಿಯಲ್ಲಿ ತಂದೆ ತಾಯಿಯಿಂದ ದೂರ ಇಟ್ಟು ಕ್ವಾರಂಟೈನ್ ನಲ್ಲಿ ಮಕ್ಕಳನ್ನು ಚಿಕಿತ್ಸೆ ಮಾಡೋದು ಅಸಾಧ್ಯದ ಮಾತು, ಕೂಡಲೇ ಶಾಲೆ ತೆರೆಯಿರಿ ಎಂದು ಯಾರು ಕೂಡಾ ಹೋರಾಟ ಮಾಡ್ತ ಇಲ್ಲ.. ಸರ್ಕಾರವೇ ಹೇಳುವ ಹಾಗೆ, ಮಕ್ಕಳಿಗೆ ಮತ್ತು ವಯೋ ವೃದ್ಧರಿಗೆ ಈ ಸೋಂಕು ಬೇಗನೆ ಹರಡುವ ಅಪಾಯ ಇದೆ.

ಕೋರೂನಾ ಮಹಾಮಾರಿಯ ಕಾಟ ಕಡಿಮೆ ಇದ್ದ ಸಂದರ್ಭದಲ್ಲಿ ದೇಶದಲ್ಲಿ ಲಾಕ್ ಡೌನ್ ಮಾಡಿ, ಶಾಲೆ ಕಾಲೇಜುಗಳಿಗೆ ರಜೆ ಕೊಟ್ಟು, ಇದೀಗ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವ ಈ ಸಮಯದಲ್ಲಿ… ಪಕ್ಕದ ಬೀದಿ ಬೀದಿಗಳಲ್ಲಿ ವೈರಸ್ ಹರಡುತ್ತಿರುವ ಈ ಸಮಯದಲ್ಲಿ…. ಸರ್ಕಾರವು ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಪೋಷರು ಕೇಳುತ್ತಿದ್ದಾರೆ.

ಸರ್ಕಾರಕ್ಕೆ ಕಿವಿ ಮಾತು :

ವ್ಯಾಪಾರಕ್ಕೆ ಇಳಿದಿರುವ ಕೆಲವು ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಆತುರದಿಂದ ಯಾವುದೇ ನಿರ್ಣಯಕ್ಕೆ ಬರಬೇಡಿ. ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಸೋಂಕುವಿನ ಪ್ರಭಾವ ಕಡಿಮೆಯಾದ ಬಳಿಕ ಶಾಲೆಗಳನ್ನು ತೆರೆಯಬಹುದು. ಹೇಗೂ ಮನೆಯಲ್ಲಿ ಮಕ್ಕಳು ತಂದೆ ತಾಯಿಯ ಮಡಿಲಲ್ಲಿ ಈಗ ಸುರಕ್ಷಿತವಾಗಿ ಇದ್ದಾರೆ. ಸದ್ಯಕ್ಕೆ ಅವರು ಹಾಗೆ ಇರಲಿ. ಸ್ವಲ್ಪ ತಾಳ್ಮೆ ಇರಲಿ. ಆತುರದ ನಿರ್ಧಾರ ಮಕ್ಕಳ ಭವಿಷ್ಯಕ್ಕೆ ಮುಳುವಾಗದಿರಲಿ.

ವರದಿ : ಸತೀಶ್ ಕಾಪಿಕಾಡ್

Comments are closed.