ಕರ್ನಾಟಕ

ಈ ಬಾರಿಯ ಮೈಸೂರು ದಸರಾ ಆಚರಣೆ ಯಾವ ರೀತಿ ಇರಲಿದೆ : ಇಲ್ಲಿದೆ ವಿವರ

Pinterest LinkedIn Tumblr

ಬೆಂಗಳೂರು. ಸೆಪ್ಟಂಬರ್.09: ಕೊರೋನಾ ವೈರಸ್ ಹರಡುವ ಭೀತಿ ಇರುವುದರಿಂದ ಈ ಬಾರಿ ದಸರಾ ಆಚರಣೆಯನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಒಂದು ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಬಾರಿಯ ಮೈಸೂರು ದಸರಾ ಆಚರಣೆ ಹಾಗೂ ಜಂಬೂ ಸವಾರಿ ರೂಪುರೇಷೆ ಬಗ್ಗೆ ಬೆಂಗಳೂರಿನಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆದಿದೆ. ಸಭೆಯಲ್ಲಿ ಮೈಸೂರು ದಸರಾ ಆಚರಣೆ ಕುರಿತಾಗಿ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಈ ಬಾರಿಯ ದಸರಾ ಮಹೋತ್ಸವದಲ್ಲಿ ಯುವ ದಸರಾ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ ಹಾಗೂ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಬಹುಮುಖ್ಯವಾದ ಸಂಗತಿ ಎಂದರೆ, ಈ ಬಾರಿಯ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ಇರುತ್ತದೆ. ಜೊತೆಗೆ ಈ ಬಾರಿಯ ನಾಡಹಬ್ಬ ದಸರಾವನ್ನು ವಿಶೇಷವಾಗಿ ಕೊರೋನಾ ವಾರಿಯರ್ಸ್ ಉದ್ಘಾಟನೆ ಮಾಡಲಿದ್ದಾರೆ.

ಈ ಬಾರಿಯ ದಸರಾ ಚಾಮುಂಡಿ ಬೆಟ್ಟ ಹಾಗೂ ಮೈಸೂರು ಅರಮನೆಗೆ ಮಾತ್ರ ಸೀಮಿತವಾಗಿರಬೇಕು. ಪ್ರತೀ ವರ್ಷದಂತೆ ಅರಮನೆಯಲ್ಲಿ ಸಂಪ್ರದಾಯದ ಕಾರ್ಯಕ್ರಮಗಳು ಇರುತ್ತವೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ.

ಈ ಬಾರಿ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ಸೀಮಿತವಾಗಿರುವುದರಿಂದ ಈ ಬಾರಿ ದಸರಾ ಆನೆಗಳ ಸಂಖ್ಯೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಪ್ರತಿವರ್ಷ ದಸರಾ ಹಬ್ಬದಲ್ಲಿ 10ಕ್ಕೂ ಹೆಚ್ಚು ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದವು. ಈ ಬಾರಿ 10 ಆನೆಗಳಿಗಿಂತ ಕಡಿಮೆ ಆನೆಗಳನ್ನು ಬಳಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಬಾರಿಯ ದಸರಾ ಹಬ್ಬದ ಬಜೆಟ್ ಬಗ್ಗೆ ನೋಡುವುದಾರೆ, ಸರ್ಕಾರ ಪ್ರಾರಂಭಿಕವಾಗಿ ದಸರಾಗೆ 10 ಕೋಟಿ ಬಿಡುಗಡೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಗಡಿಯಲ್ಲಿ ಭಾರತ-ಚೀನಾ ಬಿಕ್ಕಟ್ಟು ಇರುವ ಪರಿಣಾಮ, ದಸರಾ ಮಹೋತ್ಸವದಲ್ಲಿ ಚೀನಿ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ.

Comments are closed.