ಬೆಂಗಳೂರು : ಸ್ಯಾಂಡಲ್ ವುಡ್ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರಾವಳಿ ಮೂಲದ ನಟಿ, ಜನಪ್ರಿಯ ಕಿರುತೆರೆ ನಿರೂಪಕಿ ಅನುಶ್ರೀ ಅವರಿಗೆ ಮಂಗಳೂರಿನ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿರುವ ಬಗ್ಗೆ ಅನುಶ್ರೀ ಅವರು ಸ್ಪಷ್ಪಣೆ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗಲು ಮಂಗಳೂರಿನ ಸಿಸಿಬಿ ಕಚೇರಿಯಿಂದ ನೋಟಿಸ್ ಜಾರಿಯಾಗಿದ್ದು, ಶುಕ್ರವಾರ ಬೆಳಗ್ಗೆ ನಾನು ಸ್ವತ: ಮಂಗಳೂರಿಗೆ ತೆರಳಿ ವಿಚಾರಣೆಗೆ ಖುದ್ದಾಗಿ ಹಾಜರಾಗುವುದಾಗಿ ಅನುಶ್ರೀ ತಿಳಿಸಿದ್ದಾರೆ.
ನನಗೆ ನೋಟಿಸ್ ಸಿಕ್ಕಿದೆ. ಮಂಗಳವಾರದವರೆಗೆ ನನಗೆ ಅವಕಾಶ ಕೊಟ್ಟಿದ್ದರು. ಆದರೆ ನಾನು ಶುಕ್ರವಾರವೇ ಮಂಗಳೂರಿಗೆ ಹೊರಡುತ್ತೀನಿ, ವಿಚಾರಣೆ ಮುಗಿಸಿ ಬಂದು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಅನುಶ್ರೀ ಮೂಲತಃ ಕರಾವಳಿ ಮೂಲದವರು. ಆದರೆ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ.
ಈಗಾಗಲೇ ಮಂಗಳೂರಿನ ಸಿಸಿಬಿ ವಶದಲ್ಲಿರುವ ಡಾನ್ಸರ್ ಕಿಶೋರ್ ಅಮನ್ ನನ್ನು ಮಂಗಳೂರು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ‘ತಾನು ಪಾರ್ಟಿಯಲ್ಲಿದ್ದ ವೇಳೆ ತನ್ನ ಜೊತೆಗೆ ಯಾರ್ಯಾರು ಇದ್ದರೆಂಬುದನ್ನು ತಿಳಿಸಿದ್ದಾನೆ. ಈತ ಹೇಳಿದ ಹೆಸರುಗಳ ಪಟ್ಟಿಯಲ್ಲಿ ಆಯಂಕರ್ ಅನುಶ್ರೀ ಹೆಸರೂ ಇದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು. ಅದರದಲ್ಲಿ ಅನುಶ್ರೀ ಕೂಡ ಭಾಗವಹಿಸಿದ್ದರು ಎಂಬುದಾಗಿ ಕಿಶೋರ್ ಬಾಯ್ಬಿಟ್ಟಿದ್ದಾನೆಂದು ತಿಳಿದುಬಂದಿದೆ. ಇದೇ ವೇಳೆ ಕಿಶೋರ್ ಆಪ್ತ ಡ್ಯಾನ್ಸರ್ ತರುಣ್ ವಿಚಾರಣೆ ವೇಳೆ ಅನುಶ್ರೀಯವರ ಹೆಸರು ಹೇಳಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುಶ್ರೀ ಈ ವಿಷಯವಾಗಿ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗುತ್ತಿತ್ತು, ಕೆಲವು ಮಾಧ್ಯಮಗಳಲ್ಲಿ ತಾನು ಅಪರಾಧಿಯಂತೆ ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಬರೀ ವಿಚಾರಣೆಯ ಸೂಚನೆಯಾಗಿದ್ದು, ಮಾಧ್ಯಮಗಳಲ್ಲಿ ನಾನು ನಟಿಸಿದ ಚಿತ್ರವೊಂದನ್ನು ಬಳಸಿ ಅಪರಾಧಿ ಎಂಬಂತೆ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾದಕ ವಸ್ತು ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ, ತನ್ನನ್ನು ಅಪರಾಧಿಯಂತೆ ಬಿಂಬಿಸಬೇಡಿ ಎಂದು ಮಾಧ್ಯಮದವರಲ್ಲಿಗೆ ಮನವಿ ಮಾಡಿಕೊಂಡಿರುವ ಅನುಶ್ರೀ ತಾನು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಅಪರಾಧಿಯಂತೆ ಬಿಂಬಿಸಬೇಡಿ : ಮಾಧ್ಯಮಕ್ಕೆ ಅನುಶ್ರೀ ಮನವಿ
ಮಂಗಳೂರಿನ ಸಿಸಿಬಿ ಕಚೇರಿಯಿಂದ ವಿಚಾರಣೆಗೆ ಹಾಜರಾಗಲು ನನಗೆ ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ಶುಕ್ರವಾರ ನಾನು ಸ್ವತಃ ಮಂಗಳೂರಿಗೆ ತೆರಳಿ ಆ ವಿಚಾರಣೆಗೆ ಖುದ್ದಾಗಿ ಹಾಜರಾಗುತ್ತಿದ್ದೇನೆ.
ಇದು ಬರೀ ವಿಚಾರಣೆಯ ಸೂಚನೆಯಾಗಿದ್ದು, ಮಾಧ್ಯಮ ಮಿತ್ರರಲ್ಲಿ ನನ್ನ ಕೋರಿಕೆ ಇಷ್ಟೆ, ಪ್ರಸ್ತುತ ಚರ್ಚೆಯಾಗುತ್ತಿರುವ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ವಿಚಾರಣೆಗೆ ಕರೆದ ಕೂಡಲೇ ನಾನು ಅಪರಾಧಿ ಎಂದಲ್ಲ.ಮಾಧ್ಯಮಗಳು ಈ ವಿಚಾರವನ್ನು ಕುರಿತಂತೆ ಯಾವುದೇ ನಿಲುವನ್ನು ತೆಗೆದುಕೊಳ್ಳದಿರಿ ಎನ್ನುವುದು ನನ್ನ ಕಳಕಳಿಯ ಮನವಿ.
ಈ ವಿಚಾರ ನನ್ನ ಕುಟುಂಬ ವರ್ಗಕ್ಕೆ ಈಗಾಗಲೇ ನೋವು ತಂದಿದೆ. ಮಾಧ್ಯಮಗಳಲ್ಲಿ ಅತಿಯಾದ ಪ್ರಚಾರವು ಸತ್ಯವನ್ನು ದಾರಿ ತಪ್ಪಿಸುವುದಾಗಬಾರದು ಎನ್ನವುದು ನನ್ನ ಕಾಳಜಿ. ಆದ್ದರಿಂದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಎಲ್ಲರೂ ಅಪರಾಧಿಗಳಲ್ಲ ಎನ್ನುವುದು ತಮಗೂ ತಿಳಿದಿದೆ. ಆದ್ದರಿಂದ ಈ ವಿಚಾರ ಕುರಿತಂತೆ ಸಮತೋಲನದ ವರದಿಗಳನ್ನು ನೀಡುವಂತೆ ಕೋರುತ್ತೇನೆ.
ವಿಚಾರಣೆ ವೇಳೆ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಪೊಲೀಸರ ವಿಚಾರಣೆ ಆದ ನಂತರ ಮಾಧ್ಯಮಗಳಿಗೆ ನೀಡಬಹುದಾದ ಮಾಹಿತಿಯನ್ನು ನಾನು ನೀಡುತ್ತೇನೆ ಎಂದು ಅವರು ಫೇಸ್ ಬುಕ್ ಮೂಲಕ ಮನವಿ ಮಾಡಿದ್ದಾರೆ.
Comments are closed.