ಮಂಗಳೂರು, ಸೆಪ್ಟಂಬರ್.26 : ಸ್ಯಾಂಡಲ್ ವುಡ್ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರಾವಳಿ ಮೂಲದ ನಟಿ, ಜನಪ್ರಿಯ ಕಿರುತೆರೆ ನಿರೂಪಕಿ ಅನುಶ್ರೀ ಮಂಗಳೂರಿನ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಇಂದು ಬೆಳಗ್ಗೆ ಸಿಸಿಬಿ ಕಚೇರಿಗೆ ಆಗಮಿಸಿದ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದಾರೆ. ಅನುಶ್ರೀಯನ್ನು ಡಿಸಿಪಿ ವಿನಯ್ ಗಾಂವ್‌ಕರ್, ಪಣಂಬೂರು ಎಸಿಪಿ ಬೆಳ್ಳಿಯಪ್ಪ ನೇತ್ರತ್ವದ ತಂಡ ಹಾಗೂ ಸಿ ಐ ಶಿವಪ್ರಕಾಶ್, ಸಿಸಿಬಿ ತಂಡ ವಿಚಾರಣೆ ನಡೆಸಿತು. ಪಣಂಬೂರು ಠಾಣೆಯಲ್ಲಿ ಡಿಸಿಪಿ ವಿನಯ್ ಗಾಂವ್ಕರ್, ಸಿಐ ಶಿವಪ್ರಕಾಶ್ ನೇತೃತ್ವದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಅನುಶ್ರೀ ವಿಚಾರಣೆ ನಡೆಯಿತು.
ಸಿಸಿಬಿ ಹಾಗೂ ಎಕಾನಮಿಕ್ ಮತ್ತು ನಾರ್ಕೊಟಿಕ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ಸೇವನೆ ಮತ್ತು ಮಾರಾಟ ಆರೋಪದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಕಿಶೋರ್ ಅಮನ್ ಮತ್ತು ಆತನ ಸಹಚರ ಅಕೀಲ್ ನೌಶೀಲ್ ನನ್ನು ಇತ್ತೀಚಿಗೆ ಬಂಧಿಸಿದ್ದರು. ಅನಂತರ ಇವರ ಜೊತೆ ಒಡನಾಟದಲ್ಲಿದ್ದ ಡ್ಯಾನ್ಸ್ ಕೊರಿಯೋಗ್ರಾಫರ್ ತರುಣ್ ಎಂಬನನ್ನು ಕೂಡ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಅನುಶ್ರೀಗೆ ಇವರ ಜತೆ ನಂಟು ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅನುಶ್ರೀಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಆದರೆ ಅನುಶ್ರೀ ಸೆ.25ರಂದೇ ಹಾಜರಾಗುವುದಾಗಿ ತಿಳಿಸಿದ್ದರು. ಅದರಂತೆ ಪೊಲೀಸರು ಅನುಶ್ರೀ ಶುಕ್ರವಾರ ವಿಚಾರಣೆಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಮಾಧ್ಯಮದವರು ಕೂಡ ಎಸಿಪಿ ಕಚೇರಿ ಎದುರು ಅನುಶ್ರೀ ಆಗಮನದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದರು. ಆದರೆ ಸಂಜೆಯವರೆಗೂ ಅನುಶ್ರೀ ವಿಚಾರಣೆಗೆ ಹೋಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಸಿಸಿಬಿ ಕಚೇರಿಗೆ ಆಗಮಿಸಿದ ಅನುಶ್ರೀ ವಿಚಾರಣೆ ಎದುರಿಸಿದರು.
ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅನುಶ್ರೀ, “ಪೊಲೀಸರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ. ಮುಂದೆಯೂ ಸಹಕಾರ ಕೊಡುತ್ತೇನೆ. ನಾನು ಯಾವುದೇ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ್ದಾರೆ.
ನಾನು ತರುಣ್ ಡ್ಯಾನ್ಸ್ ಕ್ಲಾಸ್‌ನ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ. ತರುಣ್ ರಾಜ್ 12 ವರ್ಷಗಳ ಹಿಂದೆ 6 ತಿಂಗಳು ನನಗೆ ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದು ಈ ವೇಳೆ ಮಾತ್ರ ತರುಣ್ ರಾಜ್ ಪರಿಚಯವಾಗಿತ್ತು. ಆದರೆ ಮಾದಕ ವಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ನನಗೆ ಯಾವೂದೇ ಮಾಹಿತಿ ಇಲ್ಲ. ಪೊಲೀಸರು ಇಂದು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದು ಮುಂದೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ. ಇಂತಹ ವಿಷಯಗಳಲ್ಲಿ ಎಲ್ಲರೂ ಪೊಲೀಸರಿಗೆ ಸಹಕಾರ ನೀಡಬೇಕಾದದ್ದು ಧರ್ಮ ಎಂದು ಅನುಶ್ರೀ ಹೇಳಿದರು.
ಮಾದಕ ವಸ್ತು ಪ್ರಕರಣ ಎಂಬುವುದು ನಮ್ಮ ನಾಡನ್ನು, ಕನ್ನಡ ನಾಡನ್ನು ಕಾಡುತ್ತಿರುವಂತಹ ಭೂತ. ಇದರ ಹಿನ್ನೆಲೆಯಲ್ಲಿ ಬಹಳಷ್ಟು ಜನರ ವೈಯಕ್ತಿಕ ಬದುಕಿಗೆ ತೊಂದರೆಗಳಾಗುತ್ತಿವೆ. ಅದು ದೂರ ಆಗಬೇಕೆಂದು ಇಷೊಂದು ಪೊಲೀಸರು ಪರಿಶ್ರಮ ಪಡುತ್ತಿದ್ದಾರೆ. ಒಬ್ಬ ನಾಗರೀಕಳಾಗಿ ನಾನು ಯಾವ ರೀತಿಯಲ್ಲಿ ಪೊಲೀಸರಿಗೆ ಸಹಕಾರ ನೀಡಿರುವೆನೋ ಅದೇರೀತಿ ಎಲ್ಲರೂ ಸಹಕಾರ ನೀಡಿದರೆ ಈ ಪಿಡುಗನ್ನು ದೂರ ಮಾಡಬಹುದು ಎಂದು ಅನುಶ್ರೀ ಹೇಳಿದರು.
Comments are closed.