ಕುಂದಾಪುರ(ವಿಶೇಷ ವರದಿ): ಕೊಲ್ಲೂರು, ಕೊಡಚಾದ್ರಿ ನಡುವೆ ಕೇಬಲ್ ಕಾರ್ ಸಂಪರ್ಕ.! ಇನ್ನು ಮುಂದೆ ಕೊಲ್ಲೂರಿಂದ ಕೊಡಚಾದ್ರಿ ಬೆಟ್ಟದ ನೆತ್ತಿಯೇರಲು ಕೇವಲು ಹದಿನೈದು ನಿಮಿಷ ಸಾಕು.. ಕಣ್ಣು ಹಾಯಿಸಿಷ್ಟು ದೂರ ಕಾಣುವ ಹಸುರು, ಕತ್ತು ಹೊರಳಿಸಿದರೆ ಸಮುದ್ರ ತೀರ ಮುತ್ತಿಡುವ ಮೋಡಗಳ ನಡುವಿನ ಸಂಚಾರ ಹೊಸ ಲೋಕ ಸೃಷ್ಟಿಸಲಿದೆ. ಕೊಡಚಾದ್ರಿ ಬೆಟ್ಟ ಏರಲು ರಸ್ತೆ ಇದ್ದರೂ ಜೀಪ್ ಬಿಟ್ಟರೆ ಬೇರ್ಯಾವುದೇ ವಾಹನ ಕೊಡಚಾದ್ರಿ ಬೆಟ್ಟ ಏರೋದಿಲ್ಲ. ಕಡಿದಾದ ರಸ್ತೆ ಅಗಲಗೊಳಿಸುವುದರಿಂದ ಪರಿಸರ ನಾಶ, ಬೆಟ್ಟದ ಸವಕಳಿ ಹಾಗೂ ಪರಿಸರ ಸೌಂದರ್ಯಕ್ಕೆ ಧಕ್ಕೆ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ವಿರೋಧ ವ್ಯಕ್ತವಾಗಿದ್ದು, ಸಂಪರ್ಕ ವ್ಯವಸ್ಥೆಗೆ ಹಿನ್ನೆಡೆ ಕಂಡಿತ್ತು. ಹಾಗಾಗಿ ಕೊಡಚಾದ್ರಿಗೆ ಚಾರಣವೇ ಪರಿಹಾರ ಎಂಬಂತೆ ಆಗಿತ್ತು. ಪ್ರಸಕ್ತ ಕೇಬಲ್ ಕಾರ್ ಯೋಜನೆ ಮೂಲಕ ಪ್ರವಾಸಗರ ಸೆಳೆಯುವ ಪ್ರಯತ್ನ ಒಂದುಕಡೆಯಾದರೆ ಪರಿಸರ ಸೂಕ್ಷ್ಮ ಪ್ರದೇಶವಾದ ಕೊಡಚಾದ್ರಿ ಸಂಪರ್ಕಕ್ಕೆ ಕೇಬಲ್ ಕಾರ್ ಯೋಜನೆ ಅವೈಜ್ಞಾನಿಕ ಎಂದು ವಿರೋಧ ಕೂಡಾ ಹುಟ್ಟಿದೆ.
ಪ್ರಸಿದ್ಧ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ವಿಶ್ವವಿಖ್ಯಾತ ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ಕೇಬಲ್ ಕಾರು ಸಂಪರ್ಕ ವ್ಯವಸ್ಥೆ ಕಲ್ಪಿಸುವ ಯೋಜನೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ಹೆಬ್ಬಯಕೆಯಾಗಿದೆ.
ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ರಸ್ತೆ ಮಾರ್ಗ 32 ಕಿಮೀ ಅಂತರವಿದ್ದು, ಕೇಬಲ್ ಕಾರ್ ಮೂಲಕ ಅದರ ಅಂತರ ಕೇವಲ 11ಕಿಮೀ. ಒಂದಿಡಿ ಪರಿಸರದ ರಮ್ಯ ನೋಟಗಳ ನಡುವೆ ರೋಚಕ ಪಯಣ ಸಾಗಿದರೆ ಅಂತರ, ಸಮಯದ ಉಳಿತಾಯವಾಗಲಿದೆ. ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಇರುವ ಪ್ರಕೃತಿ ಸೌಂದರ್ಯ ಉಳಿಸಿಕೊಂಡು ಅಭಿವೃದ್ಧಿ ಪಡಿಸಬಹುದಾದ ವಿಧಾನಗಳ ಕುರಿತು ಪ್ರವಾಸೋದ್ಯ ಇಲಾಖೆ ಕೇಬಲ್ ಕಾರ್ ಯೋಜನೆ ಬಗ್ಗೆ ಸಮೀಕ್ಷೆ ನಡೆಸಿ, ಸಲ್ಲಿಸಿದ ವರದಿ ಪರಿಣಾಮ ವಿಧಾನ ಸಭೆ ಅಧಿವೇಶನದಲ್ಲಿ ಯೋಜನಗೆ ಜಾಗ ಬಿಟ್ಟುಕೊಡುವ ಜೊತೆ ಸಾತ್ವಿಕ ಒಪ್ಪಿಗೆ ಕೂಡಾ ಸಿಕ್ಕಿದೆ.
ಪಶ್ಚಿಮ ಘಟ್ಟಗಳಲ್ಲಿ ಅನೇಕ ಪ್ರವಾಸಿ ತಾಣಗಳು ಇವೆ. ಅವುಗಳಿಗೆ ಪ್ರವಾಸಿಗರನ್ನು ಸೆಳೆಯಲು ಹೊಸ ಹೊಸ ಯೋಜನೆಗಳು ಮೂಲಭೂತ ಸೌಲಭ್ಯಗಳ ಒದಗಿಸುವ ಜರೂರತ್ತಿದೆ ಹಾಗೆ ಪ್ರಾಕೃತಿಕ ಸೌಂದರ್ಯ ಹಾಳು ಮಾಡದಂತೆ, ಪರಿಸರದ ಉಳಿಸಿಕೊಂಡು ಮಾಡಬೇಕು ಎನ್ನೋದು ಜನರ ಅಭಿಪ್ರಾಯ. ಕೊಲ್ಲೂರಿಂದ ಕೊಡಚಾದ್ರಿಗೆ ಹೋಗುವ ವಾಹನ ಹಾಗೂ ಚಾಲಕರಿಗೆ ಕೇಬಲ್ ಕಾರ್ ಉರುಳಾದರೂ ಅಚ್ಚರಿಯಲ್ಲ..
ಪ್ರಸ್ತುತ ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಯೋಜನೆ ಸಿದ್ಧಪಡಿಸಿದ್ದು, ಅಧಿವೇಶನದಲ್ಲಿ ಸಾತ್ವಿಕ ಒಪ್ಪಿಗೆ ಕೂಡಾ ಸಿಕ್ಕಿದೆ. ಹಲವು ಇಲಾಖೆಗಳಲ್ಲಿ ಈ ಯೋಜನೆ ಕುರಿತು ಕೆಲಸಗಳು ನಡೆಯುತ್ತಿವೆ. ರೋಪ್ ವೇ ಯೋಜನೆ ಪೂರ್ಣಗೊಂಡರೆ ಬೆಟ್ಟದ ಬುಡದಿಂದ ೧೫ ನಿಮಿಷದಲ್ಲಿ ಸರ್ವಜ್ಞ ಪೀಠ ತಲುಪಬಹುದಾಗಿದೆ. ನಿರ್ಮಾಣ ಯೋಜನೆಯ ಪ್ರಸ್ತಾವನೆ ರಚನೆ ಮಾಡಿದ್ದು, ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಹಲವು ಇಲಾಖೆಗಳ ಜೊತೆಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಈ ಯೋಜನೆಯಿಂದ ಹೆಚ್ಚಿನ ಅರಣ್ಯ ನಾಶವಾಗುವುದಿಲ್ಲ. ರೋಪ್ ವೇ ನಿರ್ಮಾಣದಿಂದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎನ್ನುತ್ತಾರೆ ಸಂಸದ ಬಿ.ವೈ.ರಾಘವೇಂದ್ರ.
ಕೇಬಲ್ ಕಾರ್ ಯೋಜನೆಗೆ ವಿರೋಧ..
ಒಂದುಕಡೆ ಕೇಬಲ್ ಕಾರ್ ಯೋಜನೆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದರೆ, ಕೊಡಚಾದ್ರಿ ಧಾರ್ಮಿಕ ಕೇಂದ್ರವೇ ಹೊರತು ಪ್ರವಾಸಿತಾಣವಲ್ಲ ಎಂಬ ನೆಲೆಯಲ್ಲಿ ವಿರೋಧದ ದ್ವನಿ ದೊಡ್ಡದಾಗಿ ಕೇಳಿಬರುತ್ತಿದೆ. ಪ್ರಪಂಚದ ಅತ್ಯಂತ ಎಂಟು ಸೂಕ್ಷ್ಮ ಪ್ರದೇಶದಲ್ಲಿ ಪಶ್ಚಿಮ ಘಟ್ಟ ಕೂಡಾ ಸೇರಿದ್ದು, ಕೇಬಲ್ ಕಾರ್ ಯೋಜನೆ ಜಾರಿಗೆ ಬಂದರೆ, ಪ್ರಶಾಂತ ಪರಿಸರ ಪ್ರಕ್ಷುಬ್ಧವಾಗುತ್ತದೆ. ವನ್ಯಜೀವಿಗಳ ಏಕಾಗ್ರತೆಗೆ ಭಂಗ ಬರುತ್ತದೆ. ಔಷಧೀಯ ಸಸ್ಯಗಳು, ಕಾಡಿನ ಸೂಕ್ಷ್ಮಪ್ರಬೇಧಗಳು ನಾಶವಾಗುತ್ತದೆ. ಕೊಡಚಾದ್ರಿ ಭಯಭಕ್ತಿಯ ತಾಣವೇ ಹೊರತು ಮೋಜು ಮಸ್ತಿಯ ಪ್ರದೇಶವಲ್ಲ. ಹಿಂದೊಮ್ಮೆ ಅಮ್ಮರಗೋಡ್ಲು ಮ್ಯಾಗ್ನೀಸ್ ಗಣಿಗಾರಿಕೆ ವಿರುದ್ಧ ಹೋರಾಡುವ ಮೂಲಕ ಹೇಗೆ ನಿಲ್ಲಿಸಲಾಯಿತೋ ಹಾಗೆ ನಿಟ್ಟೂರು ಕೊಲ್ಲೂರು ಜೀಪ್ ಸಂಘಟನೆ, ಕೊಡಚಾದ್ರಿ ಉಳಿಸಿ ಹೋರಾಟ ಸಮಿತಿ ಪಶ್ಚಿಮ ಘಟ್ಟ ಉಳಿಸಿ ಹೋರಾಟ ಸಮಿತಿ, ಪರಿಸರ ಹೋರಾಟಗಾರರು ಕೇಬಲ್ ಕಾರ್ ಯೋಜನೆ ನಿಲುಗಡೆಗೆ ಹೋರಾಟಕ್ಕೆ ಇಳಿಯಲಿದೆ. ಕೊಡಚಾದ್ರಿ ಉಳಿಸಿ ಹೋರಾಟ ಸಮಿತಿ ಸ್ಥಾಪಕ ಕೇಮಾರು ಈಶವಿಠಲದಾಸ ಸ್ವಾಮೀಜಿ ಕೇಬಲ್ ಕಾರ್ ಯೋಜನೆ ವಿರೋಧಿಸಿದ್ದಾರೆ.
Comments are closed.