ಮಂಗಳೂರು / ಉಡುಪಿ: ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದಿಂದ, ಜನವರಿ 24 ಮತ್ತು 31ರ ಭಾನುವಾರಗಳಂದು ನಡೆಸಿದ ಪುರಾತತ್ವ ಅನ್ವೇಷಣೆಯಲ್ಲಿ ಸುಮಾರು 12ನೇ ಶತಮಾನಕ್ಕೆ ಸೇರಿದ ಅತ್ಯಾಕರ್ಷಕ ಜನಾರ್ಧನ/ವಿಷ್ಣುಮೂರ್ತಿಯ ಶಿಲ್ಪ ಪತ್ತೆಯಾಗಿದೆಯೆಂದು ಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ.
ಉಡುಪಿ ಜಿಲ್ಲೆ, ಉಡುಪಿ ತಾಲೂಕಿನ 80. ಬಡಗಬೆಟ್ಟು ಪಂಚಾಯಿತಿಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಪಾಳು ಬಿದ್ದ ದೇಗುಲವಿದೆ, ದೇವಾಲಯದ ಪಕ್ಕದಲ್ಲಿ ಇರುವ ಒಂದು ಹಾಳು ಬಾವಿಯಲ್ಲಿ ಸತತ ಪುರಾತತ್ವ ಅನ್ವೇಷಣೆಯಿಂದಾಗಿ ಸುಂದರವಾದ ಶಿಲ್ಪ ಪತ್ತೆಯಾಗಿದೆ.
ಶಿಲ್ಪದ ಮುಂದಿನ ಬಲಗೈಯಲ್ಲಿ ಪಿಂಡ, ಎಡಗೈ ಸೊಂಟದ ಮೇಲಿದ್ದು ತುಂಡಾದ ಗದೆ ದೊರೆತಿದೆ. ಬಲ ಹಿಂಬದಿಯ ಕೈ ಭಾಗ ಸಹ ತುಂಡಾಗಿದ್ದು ಅದು ಇನ್ನು ದೊರೆತಿಲ್ಲ. ಎಡ ಹಿಂಬದಿಯ ಕೈಯಲ್ಲಿ ಆಕರ್ಷಕ ಶಂಖವಿದೆ. ಕಿವಿಯಲ್ಲಿ ಮಕರ ಕುಂಡಲವಿದೆ. ಕೊರಳಲ್ಲಿ ಕಂಠಾಭರಣ, ಆಕರ್ಷಕ ಉಪವೀತ, ಉದರಾಭರಣ, ಹಾಗು ಮೊಳಕಾಲಿನವರೆಗೆ ಇಳಿಬಿದ್ದ ಕೌಸ್ತುಭ ಹಾರವಿದೆ.
ಚಿತ್ತಾಕರ್ಷಕ ಈ ಶಿಲ್ಪ ಕರಂಡ ಮುಕಟಧಾರಿಯಾಗಿದ್ದು, ತೋಳಲ್ಲಿ ತೋಳ್ಬಂದಿ, ಕಡಗಗಳಿಂದ ಸಿಂಗರಿಸಲ್ಪಟ್ಟಿದೆ. ಸೊಂಟಪಟ್ಟಿ, ಸೊಂಟದ ಕೆಳಭಾಗದಲ್ಲಿ ವಸ್ತ್ರ, ವಡ್ಯಾಣಗಳಿವೆ. ಪಾದಗಳು ತುಂಡಾಗಿದ್ದು, ತುಂಡಾದ ಪಾದದ ಭಾಗಗಳು ಪಾಳು ಬಿದ್ದ ದೇವಾಲಯದ ಗರ್ಭಗುಡಿಯಲ್ಲಿ ಪಾಣಿ ಪೀಠದಲ್ಲಿವೆ. ಮುಕುಟದ ಹಿಂಭಾಗದಲ್ಲಿ ಪ್ರಭಾವಳಿಯಿದೆ. ಇಡೀ ಶಿಲ್ಪ 4 ಅಡಿ ಎತ್ತರವಿದೆ.
ಶಿಲ್ಪದ ಶೈಲಿ ಮತ್ತು ಲಕ್ಷಣದ ಆಧಾರದ ಮೇಲೆ ಈ ಶಿಲ್ಪವನ್ನು 12-13ನೇ ಶತಮಾನದ ಶಿಲ್ಪವೆಂದು ನಿರ್ಧರಿಸಲಾಗಿದೆ. ಆಚಾರ್ಯ ಮಧ್ವರಿಗಿಂತ ಮೊದಲೇ ಭಾಗವತ ಪಂಥ ತುಳುನಾಡಿನಲ್ಲಿ ಜನಪ್ರಿಯವಾಗಿತ್ತು ಎಂಬುದಕ್ಕೆ ಈ ಶಿಲ್ಪ ಸಾಕ್ಷಿಯಾಗಿದೆ.
ಅತಿಶಯ ಸೌಂದರ್ಯದಿಂದ ಕಂಗೊಳಿಸುವ ಈ ಶಿಲ್ಪ, ಕರ್ನಾಟಕ ಕರಾವಳಿಯ ಒಂದು ಮಾಸ್ಟರ್ ಪೀಸ್ ಎಂಬುದರಲ್ಲಿ ಸಂಶಯವಿಲ್ಲ. ಅನ್ವೇಷಣೆ ಇನ್ನೂ ಮುಂದುವರೆಯಲಿದೆ ಎಂದುಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ.
ಈ ಸಂಶೋಧನೆಯಲ್ಲಿ ಭಾಗವಹಿಸಿದ ಅಂತಿಮ ಬಿ.ಎ. ಪುರಾತತ್ವ ವಿಭಾಗದ ಕು. ಕಾವ್ಯ, ಕು. ಭವ್ಯಾ, ಶ್ರೇಯಸ್, ನಾಗರಾಜ, ರಾಜೇಶ್, ಗೌತಮ್, ಸ್ಥಳೀಯರಾದ ಗಣೇಶ್ ಆಚಾರ್ಯ ಮತ್ತು ಗಣೇಶ್ ಸರಳೇಬೆಟ್ಟು ಇವರುಗಳ ಸಹಕಾರಕ್ಕೆ ಅಭಾರಿಯಾಗಿರುವುದಾಗಿ ಪ್ರೊ.ಟಿ.ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Comments are closed.