ಕರಾವಳಿ

25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ‘ಗಂಗೊಳ್ಳಿ ಭಾಸ್ಕರ ಕಲೈಕಾರ್ ಮ್ಯೂಸಿಯಂ’..!

Pinterest LinkedIn Tumblr

ಕುಂದಾಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಪೂರ್ವ ಪ್ರಾಚೀನ ವಸ್ತು ಸಂಗ್ರಹಕಾರ, ಕಲಾವಿದ ಗಂಗೊಳ್ಳಿಯ ಜಿ.ಬಿ.ಕಲೈಕಾರ್ ಅವರು ಮುಂದಿನ ಪೀಳಿಗೆಗಾಗಿ ಗಂಗೊಳ್ಳಿಯ ಕಲೈಕಾರ್ ಮಠದ ಬಳಿಯಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ’ಗಂಗೊಳ್ಳಿ ಭಾಸ್ಕರ ಕಲೈಕಾರ್ ಮ್ಯೂಸಿಯಂ’ ಉದ್ಘಾಟನೆ ಮಾ.21ರಂದು ನಡೆಯಲಿದೆ.

ಹಂಗಾರಕಟ್ಟೆ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ನೂತನ ಭಾಸ್ಕರ ಕಲೈಕಾರ್ ಮ್ಯೂಸಿಯಂ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಪತ್ರಕರ್ತ ಯು.ಎಸ್.ಶೆಣೈ, ಅಂಕಣಗಾರ ಕೋ.ಶಿವಾನಂದ ಕಾರಂತ, ಉದ್ಯಮಿ ದೇವರಾಯ ಶೇರುಗಾರ್ ಮುಂಬೈ, ಎಂ.ರಾಮಕೃಷ್ಣ ಪೈ, ವಸಂತ ಎಚ್.ಕರ್ಕಿಕರ್ ಹೊನ್ನಾವರ, ಡಾ.ಎಚ್.ರಾಮಮೋಹನ ಕುಂದಾಪುರ, ಘನಶ್ಯಾಮ ಟಿ.ಮೇಸ್ತ ಮುಂಬೈ, ಬಿ.ರಾಘವೇಂದ್ರ ಪೈ, ಡಾ.ಬಾಲಚಂದ್ರ ಮೇಸ್ತ ಹೊನ್ನಾವರ, ಪಿ.ಜಯವಂತ ಪೈ ಕುಂದಾಪುರ ಮೊದಲಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕಳೆದ ಆರು ದಶಕಗಳಿಂದ ಅಪೂರ್ವ ವಸ್ತುಗಳ ಸಂಗ್ರಹದ ಹವ್ಯಾಸ ಬೆಳೆಸಿಕೊಂಡು ಬಂದಿರುವ ನಿವೃತ್ತ ಶಿರಸ್ತೇದಾರ ಗಂಗೊಳ್ಳಿಯ ಜಿ.ಭಾಸ್ಕರ ಕಲೈಕಾರ್ ಅಪೂರ್ವ ದೇಶ ವಿದೇಶಗಳ ಅಂಚೆ ಚೀಟಿಗಳು, ನೋಟುಗಳು, ನಾಣ್ಯಗಳು, ಪುರಾತನ ಛಾಯಾಚಿತ್ರಗಳು, ಕಂಚಿನ ಕಲಾತ್ಮಕ ಪಾತ್ರೆಗಳು, ಹಳೆ ದಿನ ಪತ್ರಿಕೆಗಳು, ಗಡಿಯಾರಗಳು, ಗ್ರಾಮ್‌ಫೋನ್, ಮದ್ಯ ತುಂಬುವ ಕಲಾತ್ಮಕ ಬಾಟಲಿಗಳು, ಪಂಚಲೋಹದ ವಿಗ್ರಹಗಳು, ಹಳೆ ವಿದೇಶಿ ಕ್ಯಾಮರಾಗಳು, ಹಳೆ ಕಾಲದ ವಿವಿಧ ಬಗೆಯ ಬೀಗಗಳು, ಟಿ.ವಿ., ರೇಡಿಯೊ, ಟೇಪ್ ರೆಕಾರ್ಡರ್, ಕ್ಯಾಸೆಟ್, ಪೌಂಟೆನ್ ಪೆನ್ನು ಇತ್ಯಾದಿಗಳು ಕಲೈಕಾರ್ ಸಂಗ್ರಹದಲ್ಲಿದೆ. ಪ್ರದರ್ಶನದಲ್ಲಿದ್ದ ವಸ್ತುಗಳು ಮಾರಾಟಕ್ಕಿಲ್ಲ ಎಂಬ ವಾಕ್ಯ ನೂರಾರು ಕಲಾಸಕ್ತರ ಮನಸೂರೆಗೊಂಡಿದೆ.

ತನ್ನ ಸಂಪಾದನೆಯ ಸಾವಿರಾರು ರೂಪಾಯಿ ಹಣವನ್ನು ಹಳೆಯ ಪ್ರಾಚೀಣ ಅಪೂರ್ವ ವಸ್ತುಗಳನ್ನು ಖರೀದಿಸಲು ಉಪಯೋಗಿಸಿದ ಕಲೈಕಾರ್ ಅವರು, ಇಂತಹ ವಸ್ತುಗಳ ಸಂಗ್ರಹಕ್ಕಾಗಿ ಮುಂಬೈ, ಮದ್ರಾಸ್, ಕಲ್ಕತ್ತಾ, ಬೆಂಗಳೂರು ಮೊದಲಾದ ಕಡೆಗಳಿಗೆ ತೆರಳಿ ಹುಡುಕಾಟ ನಡೆಸಿದ್ದರು. ತನ್ನಲ್ಲಿರುವ ಎಲ್ಲಾ ವಸ್ತುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸರ್ಕಾರ, ಅಕಾಡೆಮಿ, ಪ್ರವಾಸೋದ್ಯಮ, ವಿಶ್ವವಿದ್ಯಾನಿಲಯಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ವತಿಯಿಂದ ರಾಜ್ಯದ ವಿವಿಧೆಡೆ ಸುಮಾರು ೭೫ಕ್ಕೂ ಮಿಕ್ಕಿ ಉಚಿತ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೊಂಕಣಿ ನಕ್ಷತ್ರ ಪ್ರಶಸ್ತಿ, ಕಲಾ ವೈಭವ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಭಾಸ್ಕರ ಕಲೈಕಾರ್ ಅವರು ವ್ಯಂಗ್ಯ ಚಿತ್ರಗಾರರಾಗಿ, ಚುಟುಕು ಕವಿಯಾಗಿ, ಛಾಯಾಚಿತ್ರಗಾರರಾಗಿ, ಸಾಹಿತಿಯಾಗಿ, ಅಪೂರ್ವ ವಸ್ತು ಸಂಗ್ರಹಕಾರರಾಗಿ ವ್ಯಂಗ್ಯ ಚಿತ್ರಗಾರರೆಂದೇ ಪ್ರಸಿದ್ಧಿ ಪಡೆದಿದ್ದಾರೆ.

ತನ್ನ ಊರು ಗಂಗೊಳ್ಳಿಯಲ್ಲಿ ಈ ಅಪೂರ್ವ ವಸ್ತುಗಳ ಪ್ರದರ್ಶನಕ್ಕಾಗಿ ಭವನ ನಿರ್ಮಿಸಬೇಕೆಂಬ ಅವರ ಕನಸು ಸಾಕಾರಗೊಳ್ಳುವ ಕಾಲ ಕೂಡಿ ಬಂದಿದೆ. ಗಂಗೊಳ್ಳಿಯಲ್ಲಿರುವ ತನ್ನ ಮನೆಯ ಪ್ರಥಮ ಮಹಡಿಯಲ್ಲಿ ಗಂಗೊಳ್ಳಿ ಭಾಸ್ಕರ ಕಲೈಕಾರ್ ಮ್ಯೂಸಿಯಂ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಮೂರು ವರ್ಷಗಳಲ್ಲಿ ಸುಮಾರು ೨೫ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಮ್ಯೂಸಿಯಂ ನಿರ್ಮಿಸಿದ್ದಾರೆ. ಇಂದಿಗೂ ಸಹ ಕಲೈಕಾರ್ ಅವರ ಅಪೂರ್ವ ವಸ್ತುಗಳ ಹುಡುಕಾಟ ಮತ್ತು ಸಂಗ್ರಹ ಕಾರ್ಯ ನಿಂತಿಲ್ಲ. ಈ ಇಳಿ ವಯಸ್ಸಿನಲ್ಲಿಯೂ ಅವರ ವಿಶಿಷ್ಟ ಸಾಧನೆ, ಕಾರ್ಯನಿರ್ವಹಣೆ, ಅಧ್ಯಯನಾತ್ಮಕ ಹಂಬಲ ಮತ್ತು ಅದಕ್ಕೆ ಪೂರಕವಾದ ಪ್ರಯತ್ನ ನಿಜಕ್ಕೂ ಬೆರಗು ಹುಟ್ಟಿಸುವಂತದ್ದು. ಈ ಮ್ಯೂಸಿಯಂ ಮುಂದಿನ ಪೀಳಿಗೆಗೆ ಒಂದು ಪಾಠ ಶಾಲೆಯಂತೆ, ಜ್ಞಾನ ಮಂದಿರದಂತೆ ಆಗಬೇಕು. ಎಲ್ಲಾ ವಯೋಮಾನದವರು ಆನಂದ ಪಡುವಂತಾಗಬೇಕು. ಪರ ಊರ ಆಸಕ್ತರೂ ಗಂಗೊಳ್ಳಿಗೆ ಬರುವಂತಾಗಬೇಕು ಎಂಬುದು ಕಲೈಕಾರ ಅವರ ಆಶಯವಾಗಿದೆ.

ಮುಂದಿನ ಪೀಳಿಗೆಗಾಗಿ ಮ್ಯೂಸಿಯಂ…
ಪ್ರಾಚೀನ ವಸ್ತುಗಳ ಸಂಗ್ರಹಣೆ ಒಂದು ಸಂಸ್ಕೃತಿಯ ಕೊಂಡಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ದೃಷ್ಟಿಯಿಂದ ಅವುಗಳು ಕಟ್ಟಿಕೊಡುವ ಇತಿಹಾಸ ಮುಂದಿನ ಪೀಳಿಗೆಗೆ ದೊರಕಿಸಿಕೊಡುವ ಉದ್ದೇಶದಿಂದ ಭಾಸ್ಕರ ಕಲೈಕಾರ್ ಮ್ಯೂಸಿಯಂ ನಿರ್ಮಾಣ ಮಾಡಲಾಗಿದ್ದು, ವಸ್ತು ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶ ಮಾಡಲಾಗಿದೆ. ಕೋಟ್ಯಾಂತರ ರೂ. ಬೆಲೆ ಬಾಳುವ ಪ್ರಾಚೀನ ವಸ್ತುಗಳನ್ನು ಕೊಂಡುಕೊಳ್ಳಲು ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಹಣಕ್ಕಾಗಿ ಈ ವಸ್ತುಗಳನ್ನು ಖರೀದಿಸಿಲ್ಲ. ಬದಲಾಗಿ ಮುಂದಿನ ಪೀಳಿಗೆಗಾಗಿ ಈ ವಸ್ತುಗಳನ್ನು ಮತ್ತು ಮ್ಯೂಸಿಯಂನ್ನು ಸಮರ್ಪಿಸುತ್ತಿದ್ದೇನೆ.
– ಜಿ.ಭಾಸ್ಕರ ಕಲೈಕಾರ್, ಗಂಗೊಳ್ಳಿ.

Comments are closed.