ಕುಂದಾಪುರ: ಸದುದ್ದೇಶವನ್ನಿಟ್ಟುಕೊಂಡು ಕುಂದಾಪುರದಿಂದ ಕಾಶ್ಮೀರಕ್ಕೆ ಸುಮಾರು 6 ಸಾವಿರ ಕಿಲೋಮೀಟರ್ ದೂರದಷ್ಟು ಕುಂದಾಪುರದ ಕುಂಭಾಸಿಯ ಸಾಕ್ಷಿ ಹೆಗ್ಡೆ ತನ್ನ ಬೈಕ್‌ನಲ್ಲಿ ಲಾಂಗ್ ರೈಡ್ ಮಾಡಿಕೊಂಡು ಹೊರಟಿದ್ದಾರೆ. ಈ ಯುವತಿಯ ಬೈಕಿನಲ್ಲಿ ಒಬ್ಬಂಟಿ ಲಾಂಗ್ ಡ್ರೈವ್ ವಿಚಾರದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಉತ್ತಮ ಬೈಕ್ ರೈಡರ್ ಆಗಿರುವ ಸಾಕ್ಷಿ ಅವರು ಮೇ.25 ರಿಂದ 15 ದಿನಗಳ ಕಾಲ ಬೈಕ್ ಸವಾರಿ ಕೈಗೊಂಡು ಕುಂದಾಪುರದಿಂದ ಕಾಶ್ಮೀರಕ್ಕೆ ಸುಮಾರು 6 ಸಾವಿರ ಕಿಲೋಮೀಟರ್ ದೂರದಷ್ಟು ಒಬ್ಬಂಟಿಯಾಗಿ ಬೈಕ್ ಚಲಾಯಿಸಿಕೊಂಡು ಒಬ್ಬಳೇ ಹೋಗುತ್ತಿದ್ದಾಳೆ. ತಂದೆ ಮೂಲತಃ ಹೊನ್ನವಾರದ ಶಿವರಾಮ ಹೆಗ್ಡೆ ಹಾಗೂ ಕುಂದಾಪುರ ಮೂಲದ ತಾಯಿ ಪುಷ್ಪಾ ಇವರ ಮೂರನೇ ಮಗಳಾದ ಸಾಕ್ಷಿ ಹೆಗ್ಡೆ ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕುಂಭಾಸಿಯಲ್ಲಿ ವಾಸವಾಗಿದ್ದಾರೆ.
ಮೇ.25ರಂದು ಬೆಳಿಗ್ಗೆ 7.30ಕ್ಕೆ ಕುಂಭಾಸಿ ಮನೆಯಿಂದ ಹೊರಟು ಸಂಜೆ 5 ಗಂಟೆಯ ವೇಳೆಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸುಮಾರು 520ಕೀಮಿ ದೂರ ಬೈಕ್ ರೈಡ್ ಮಾಡಿಕೊಂಡು ಮೊದಲ ದಿನ ತೆರಳಿದ್ದಾರೆ. 2ನೇ ದಿನದಲ್ಲಿ 380 ಕೀಮಿ ಸಂಚಾರಿಸಿ ಪನ್ವೇಲ್ ಮುಟ್ಟಿದ್ದಾರೆ. 3 ನೇ ದಿನದಲ್ಲಿ 700 ಕೀಮಿ ಕ್ರಮಿಸುವ ಗುರಿ ಇಟ್ಟುಕೊಂಡಿದ್ದಾರೆ. 15 ದಿನದ ಒಳಗೆ ಕಾಶ್ಮೀರ ಪ್ರವಾಸ ಮಾಡಿ ವಾಪಸ್ಸು ಊರಿಗೆ ವಾಪಾಸ್ ಬರಲಿದ್ದೇನೆ ಎನ್ನುತ್ತಾರೆ ಸಾಕ್ಷಿ.
ಈ ಲಾಂಗ್ ಜರ್ನಿ ನಡುವೆ ತನಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಲು ಅಂಗಡಿಗಳಿಗೆ ಹೋದಾಗ ಅಲ್ಲಿ ಸಾಕ್ಷಿಯ ಸದುದ್ದೇಶವನ್ನು ತಿಳಿದು ಹಣವನ್ನು ಪಡೆಯದೇ ಸ್ಥಳೀಯರು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ಮಾತ್ರವಲ್ಲ ಪೊಲೀಸರು ಕೂಡ ಈಕೆಯನ್ನು ಗಮನಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸಾಕ್ಷಿ ಹೇಳಿದ್ದಾರೆ.
ಸಂಘಟನೆಗಳ ಸಹಕಾರ: ವಿದ್ಯಾಭ್ಯಾಸದ ಸಂದರ್ಭದಲ್ಲೇ ನಾನು ಈ ಉದ್ದೇಶವನ್ನು ಪೂರೈಸಿಕೊಳ್ಳಬೇಕೆಂಬ ಆಸೆ ಹೊಂದಿದ್ದು ಹಣಕಾಸು ಸಮಸ್ಯೆ ಸವಾಲಾಗಿತ್ತು. ಸ್ಥಳೀಯ ಹಿಂದೂಪರ ಸಂಘಟನೆಗಳು ಹಾಗೂ ವೈಯಕ್ತಿಕವಾಗಿ ದಾನಿಗಳು ಕೈಜೋಡಿಸಿದ ಸಲುವಾಗಿ ಈ ಬೈಕ್ ರೈಡ್ ಮುಂದುವರಿಸಿದೆ ಎನ್ನುತ್ತಾರೆ ಸಾಕ್ಷಿ ಹೆಗ್ಡೆ.
ಕಳೆದೊಂದು ವರ್ಷದಿಂದ ಗೆಳೆಯರ ಸಹಕಾರದಲ್ಲಿ ಬೈಕ್ ತರಬೇತಿ ಪಡೆದಿದ್ದು ಬಳಿಕ ಸ್ವಂತ ಬಜಾಜ್ ಪಲ್ಸರ್ ಬೈಕ್‌ನ್ನು ಖರೀದಿಸಿದೆ. ದೇಶದಲ್ಲಿನ ಸ್ತ್ರೀ ಪುರುಷರ ನಡುವಿನ ಅಸಮಾನತೆ ಹೋಗಲಾಡಿಸಲು ಹಾಗೂ ಒಂಟಿ ಮಹಿಳೆ ನಿರ್ಭಯವಾಗಿ ದೇಶದಾದ್ಯಂತ ಸಂಚರಿಸಲು ಶಕ್ತಳು. ಮಹಿಳೆಯರ ಶಕ್ತಿ ಒಗ್ಗೂಡಬೇಕು ಎಂಬ ಧ್ಯೇಯವಾಕ್ಯದೊಂದಿಗೆ ಸುಮಾರು 6 ಸಾವಿರ ಕಿಲೋಮೀಟರ್ ರಸ್ತೆ ಮಾರ್ಗವನ್ನು ಬೈಕ್‌ನಲ್ಲಿ ಸಂಚರಿಸುವ ಉದ್ದೇಶದೊಂದಿಗೆ ಕಾಶ್ಮೀರ ಪ್ರವಾಸವನ್ನು ಮಾಡುತ್ತಿರುವೆ. ದಿನ ನಿತ್ಯ ಬೆಳಿಗ್ಗೆ 6 ಗಂಟೆಗೆ ಹೊರಟು ಸಂಜೆ 6 ಗಂಟೆಗೆ ರೈಡ್ ನಿಲ್ಲಿಸುತ್ತನೆ. ದಿನದಿಂದ ದಿನಕ್ಕೆ ಸ್ಟೆಪ್ ಬೈ ಸ್ಟೆಪ್ ಕೀಮಿ ದೂರ ಬೈಕ್ ಓಡಿಸುತ್ತೇನೆ. ಮೊದಲ ದಿನ 500 ಕೀಮಿ, 2 ನೇ ದಿನ 400 ಕೀಮಿ, ಹೀಗೆ ದಿನದಿಂದ ದಿನಕ್ಕೆ ಪ್ರಯಾಣದ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದೇನೆ. ಬಹುತೇಕ ಗೂಗಲ್ ಮ್ಯಾಪ್ ಬಳಸಿಕೊಂಡು ಸಂಚರಿಸುತ್ತಿದ್ದೇನೆ. ಹೆತ್ತವರ ಪ್ರೋತ್ಸಾಹ ಹಾಗೂ ಊರಿನವರ ಸಹಕಾರವಿದೆ.
-ಸಾಕ್ಷಿ ಹೆಗ್ಡೆ ಕುಂಭಾಸಿ, ಬೈಕ್ ರೈಡರ್
Comments are closed.