ಬೆಂಗಳೂರು: ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧಬ್ಯದ ಕುರಿತಾಗಿ ಹೆಣೆಯಲಾದ ಕಥೆ ಹೊಂದಿರುವ ‘777 ಚಾರ್ಲಿ’ ಚಿತ್ರವನ್ನು ಪ್ರೇಕ್ಷಕರು ಹರಸಿದ್ದಾರೆ. ಬಿಡುಗಡೆಯಾಗಿ 25 ದಿನಗಳನ್ನು ಯಶಸ್ವಿಯಾಗಿ ಸಿನಿಮಾ ಪೂರೈಸಿದೆ.
ಈ ಚಿತ್ರಕ್ಕೆ ಬಾಕ್ಸ್ ಆಪೀಸಿನಲ್ಲಿ ಭರ್ಜರಿ ಕಲೆಕ್ಷನ್ ಆಗಿದ್ದು ಬರೋಬ್ಬರಿ 150 ಕೋಟಿ ರೂಪಾಯಿ ವ್ಯವಹಾರ ಆಗಿದೆಯೆಂದು ನಿರ್ಮಾಪಕ, ನಟ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಲಾಭದ ಹಣದಲ್ಲಿ ಶೇಕಡ 5ರಷ್ಟನ್ನು ಪ್ರಾಣಿಗಳಿಗಾಗಿ ಮೀಸಲಿಡಲು ಅವರು ನಿರ್ಧರಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದ ಫೇಸ್ಬುಕ್ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ. ‘777 ಚಾರ್ಲಿ ನಿಮ್ಮನ್ನು ತಲುಪಿ 25 ದಿನಗಳು ಕಳೆದರೂ, ಎಂದಿನಂತೆ ನಿಮ್ಮಿಂದ ನಮಗೆ ಸಿಗುತ್ತಿರೋ ಪ್ರೀತಿ ಅನನ್ಯ. ಈ ಚಿತ್ರದಿಂದ ನಾವು ಗಳಿಸಿರುವ ಮೆಚ್ಚುಗೆ ಮತ್ತು ಮನ್ನಣೆಯಿಂದ ನಾವು ಅತ್ಯಂತ ಧನ್ಯರಾಗಿದ್ದೇವೆ’.
‘ಈ ಅಭೂತಪೂರ್ವ ಯಶಸ್ಸಿಗೆ ನಮ್ಮ ತಂಡದ ಪರಿಶ್ರಮವಿದೆ. ಈ ಚಿತ್ರವನ್ನು ಯಶಸ್ವಿಯಾಗಿ ತೆರೆಗೆ ತರುವಲ್ಲಿ ಹಲವಾರು ರೀತಿಯಲ್ಲಿ ಶ್ರಮಿಸಿರುವ ಚಿತ್ರತಂಡದ ಜೊತೆಗೆ, 777 ಚಾರ್ಲಿ ಗಳಿಸಿರುವ ಲಾಭದ ಶೇಕಡಾ 10ರಷ್ಟು ಹಂಚಿಕೊಳ್ಳಲು ನಾವು ನಿರ್ಧರಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
‘777 ಚಾರ್ಲಿ ಚಿತ್ರತಂಡಕ್ಕೆ ಸಾಕುಪ್ರಾಣಿಗಳ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಬೇಕಾದ ಪರಿಶ್ರಮ ಹಾಗೂ ಸೌಲಭ್ಯಗಳ ಬಗ್ಗೆ ಕಾಳಜಿ ಇದ್ದು, ಈ ನಿಟ್ಟಿನಲ್ಲಿ, ನಿರಾಶ್ರಿತ ಶ್ವಾನಗಳ ಹಾಗೂ ಮೂಕಪ್ರಾಣಿಗಳ ರಕ್ಷಣೆ ಮತ್ತು ಪೋಷಣೆಗೆ ಸಮರ್ಪಿತವಾಗಿ ದೇಶಾದ್ಯಂತ ಕೆಲಸ ಮಾಡುತ್ತಿರುವ ಎನ್ಜಿಒಗಳಿಗೆ 777 ಚಾರ್ಲಿ ಗಳಿಸಿರುವ ಲಾಭದಲ್ಲಿ ಶೇಕಡ 5ರಷ್ಟು ತಲುಪಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ಈ ಅಳಿಲು ಸೇವೆ ಅನ್ನಿತರರಿಗೆ ಸ್ಫೂರ್ತಿಯಾಗಬಹುದು. ನಮ್ಮ ಜಗತ್ತನ್ನು ನಿಮ್ಮ ಪ್ರೀತಿಯಿಂದ ಬೆಳಗಿಸಿದ್ದಕ್ಕಾಗಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು’ ಎಂದು ರಕ್ಷಿತ್ ಶೆಟ್ಟಿ ಪ್ರಕಟಿಸಿದ್ದಾರೆ.
(ಚಿತ್ರ ಕೃಪೆ: ರಕ್ಷಿತ್ ಶೆಟ್ಟಿ ಫೇಸ್ಬುಕ್ ಫೇಜ್)
Comments are closed.