(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲೆಯ ಮರವಂತೆಯ ಕಾರಣಿಕ ದೇವಸ್ಥಾನವೊಂದರಲ್ಲಿ ಪ್ರತಿವರ್ಷ ನಡೆಯುವ ಜಾತ್ರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಬೈಂದೂರು ವಿಧಾನಸಭಾ ವ್ಯಾಪ್ತಿಯ ಮರವಂತೆಯ ಶ್ರೀ ವರಾಹ ಸ್ವಾಮಿ ದೇವರ ಜಾತ್ರೆ ಕರ್ಕಾಟಕ ಅಮಾವಾಸ್ಯೆಯ ದಿನ ಸಂಭ್ರಮ ಸಡಗರದಿಂದ ನಡೆಯುತ್ತೆ. ನದಿ ಹಾಗೂ ಸಮುದ್ರದ ನಡುವೆ ಕಂಡುಬರುವ ಪ್ರಕೃತಿ ರಮಣೀಯವಾದ ಧಾರ್ಮಿಕ ಕ್ಷೇತ್ರ ಇದಾಗಿದ್ದು, ಕರ್ಕಾಟಕ ಅಮವಾಸ್ಯೆಯಂದು ಜಾತ್ರೆಗೆ ಕ್ಷೇತ್ರಕ್ಕೆ ಆಗಮಿಸುವ ಸಹಸ್ರಾರು ಭಕ್ತರು ಸಮುದ್ರ ಹಾಗೂ ದೇವಸ್ಥಾನದ ಎದುರಿನ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗುವ ನಂಬಿಕೆ ಬಹಳ ವಿಶಿಷ್ಟವಾಗಿದೆ. ಇಂದು (ಜು.28 ಗುರುವಾರ) ವೈಭವೋಪೇತವಾಗಿ ಜಾತ್ರೆ ಜರುಗಿತು.
ಕರ್ಕಾಟಕ ಅಮವಾಸ್ಯೆಯಂದು ಇಲ್ಲಿ ಬಂದು ಸಮುದ್ರ ಸ್ನಾನ ಮಾಡಿದರೆ ರೋಗ ರುಜಿನಾದಿ ರೋಗಗಳನ್ನು ವರಾಹ ಸ್ವಾಮಿ ಪರಿಹರಿಸುತ್ತಾನೆಂಬ ನಂಬಿಕೆ ಇದೆ. ಹಿಂದಿನಿಂದಲೂ ಮೀನುಗಾರರು ಹಾಗೂ ಕೃಷಿಕರು ಕ್ಷೇತ್ರವನ್ನು ಆರಾಧಿಸಿಕೊಂಡು ಬಂದಿದ್ದಾರೆ. ಶ್ರೀ ದೇವರಿಗೆ ಪ್ರಕೃತಿ ವಿಕೋಪವನ್ನು ತಡೆಯುವ ಶಕ್ತಿ ಇದೆ ಎನ್ನುವ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ತಿಂಗಳಿನಿಂದ ಮಳೆಯಿದ್ದರೂ ಕೂಡ ಜಾತ್ರೆಯ ದಿನ ಬೆಳಿಗ್ಗೆನಿಂದಲೂ ಬಿಸಿಲು ವಾತವರಣವಿದ್ದು ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ರು. ಉತ್ಸವಕ್ಕೆ ಪೂರ್ವಭಾವಿಯಾಗಿ ಸಿದ್ದತಾ ಕಾರ್ಯ ಒಂದು ವಾರದಿಂದ ನಡೆದಿತ್ತು.
ಮತ್ಸ್ಯ ಸಂಪತ್ತು ಕರುಣಿಸಲು ಮತ್ತು ಮೀನುಗಾರರ ಸಂರಕ್ಷಕನಾಗಿಯೂ ಹಾಗೂ ಅಕಾಲಿಕ ಮಳೆ ಮುಂತಾದವುಗಳನ್ನು ತಡೆದು ಸಮೃದ್ಧ ಕೃಷಿಯನ್ನು ಕರುಣಿಸುವ ಶಕ್ತಿ ವರಾಹ ಸ್ವಾಮೀ ದೇವರಿಗೆ ಇದೆ ಎನ್ನುತ್ತಾರೆ ತಲೆಮಾರುಗಳಿಂದ ಕ್ಷೇತ್ರವನ್ನು ನಂಬಿಕೊಂಡು ಬಂದ ಭಕ್ತರು.ಗುರುವಾರ ದೇವಳದಲ್ಲಿ ನಡೆದ ಜಾತ್ರೋತ್ಸವ ಪ್ರಯುಕ್ತ ದೇವಳದಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ನಡೆದು ಪ್ರಸಾದ, ನೈವೇದ್ಯಗಳನ್ನು ಭಕ್ತರಿಗೆ ವಿತರಿಸಲಾಯಿತು. ಅಲ್ಲದೆ ಸಾವಿರಾರು ಜೋಡಿ ನವ ದಂಪತಿಗಳು ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನಕ್ಕೆ ಬಂದು ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದೇವಾಲಯದ ಸಮೀಪದ ಸೌಪರ್ಣಿಕ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ಮಹಾರಾಜಸ್ವಾಮಿ ಶ್ರೀ ವರಾಹ ದೇವರಿಗೆ ಪೂಜೆ ಸಲ್ಲಿಸಿದರು. ದೂರದೂರುಗಳಿಂದ ಭಕ್ತಾದಿಗಳು ಆಗಮನವಾಗಿದ್ದು ಸಂಭ್ರಮದ ವಾತಾವರಣ ಮನೆಮಾಡಿತ್ತು.
ನೂತನ ವ್ಯವಸ್ಥಾಪನ ಮಂಡಳಿ..ಉತ್ತಮ ವ್ಯವಸ್ಥೆ..
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ. ನಾಯಕ್ ಹಾಗೂ ಸದಸ್ಯರು, ಉಪಾಧಿವಂತರು ಸಂಪೂರ್ಣ ವ್ಯವಸ್ಥೆ ನಿರ್ವಹಿಸಿದರು. ಈ ಬಾರಿ ವಸ್ತ್ರ ಸಂಹಿತೆ ನಿಯಮ ಪಾಲಿಸಲು ಆಡಳಿತ ಮಂಡಳಿ ಸೂಚನೆ ನೀಡಿದ್ದು ಅದರಂತೆ ಈ ಶಿಷ್ಟಾಚಾರ ಪಾಲನೆ ಮಾಡಿದ ಭಕ್ತರು ಬಹಳ ಸಂಖ್ಯೆಯಲ್ಲಿದ್ದರು. ಸಮುದ್ರ ಹಾಗೂ ನದಿ ಸ್ನಾನದ ವೇಳೆಯೂ ಭಕ್ತರಿಗೆ ಎಚ್ಚರಿಕಾ ಸೂಚನಾ ಫಲಕ ಹಾಕಿದ್ದಲ್ಲದೆ ಪೊಲೀಸರು, ಸ್ವಯಂಸೇವಕರನ್ನು ನಿಯೋಜಿಸಿ ಸೂಕ್ತ ಎಚ್ಚರಿಕೆ, ಮಾರ್ಗದರ್ಶನ ನೀಡಲಾಯಿತು. ದೇವಸ್ಥಾನದ ಎದುರು ಯಾವುದೇ ವ್ಯಾಪಾರಿ ಮಳಿಗೆಗೆ ಅವಕಾಶ ನೀಡದೇ ಅಲ್ಲಿ ಭಕ್ತರು ದೇವಳದೊಳಕ್ಕೆ ಆಗಮಿಸಲು ಸರತಿ ಸಾಲಿನ ಅವಕಾಶ ಮಾಡಿಕೊಡಲಾಯ್ತು. ಇದರಿಂದ ರಾ. ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಾಗುವ ಸಮಸ್ಯೆ ಬಹಳಷ್ಟು ಕಡಿಮೆಯಾಗಿತ್ತು.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ಕುಂದಾಪುರ ಉಪವಿಭಾಗದ ವಿವಿಧ ಠಾಣೆ ಪೊಲೀಸರು, ಬಂದೋಬಸ್ತ್ ಹಾಗೂ ಸಂಚಾರ ವ್ಯವಸ್ಥೆ ನಿರ್ವಹಿಸಿದರು.
Comments are closed.