ಕರಾವಳಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಸೇರಿದ 62 ವರ್ಷದ ಹಳೆ ಲಾರಿ; ಮಲ್ಯಾಡಿಯಲ್ಲಿ ಸಿಕ್ಕಿತು ಕೇರಳ ಶೈಲಿಯ ಹೊಸ ಲುಕ್

Pinterest LinkedIn Tumblr

ಕುಂದಾಪುರ: ಕಳೆದ 6 ದಶಕಗಳಿಂದ ಹೊಸನಗರ, ತೀರ್ಥಹಳ್ಳಿ, ಕುಂದಾಪುರ, ಉಡುಪಿ ಹಾಗೂ ಹಳ್ಳಿ ಪರಿಸರದಲ್ಲಿ ಸಂತೆ ನಡೆಯುವಲ್ಲಿ ಅಕ್ಕಿ ಮೂಟೆ, ದಿನಸಿ ವಸ್ತುಗಳು, ಒಡೆದ ಕಟ್ಟಿಗೆ, ತೆಂಗಿನಕಾಯಿ, ತರಕಾರಿ, ಬೈಹುಲ್ಲು ಮೊದಲಾದವುಗಳನ್ನು ಸರಬರಾಜು ಮಾಡಿ ರಾಜನಂತೆ ಮೆರೆದು ತನ್ನ ಶಕ್ತಿಯನ್ನು ಕಳೆದುಕೊಂಡ ಬಳಿಕ ಗುಜರಿಗೆ ಹೋಗಬೇಕಾಗಿದ್ದ 62 ವರ್ಷದ ಹಿಂದಿನ ಹಳೆ ಲಾರಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೆಂದ್ರ ಹೆಗ್ಗಡೆಯವರ ವಿಶೇಷ ಮುತುವರ್ಜಿಯಲ್ಲಿ ಪುನರ್ ವಿನ್ಯಾಸಗೊಂಡು ತೆಕ್ಕಟ್ಟೆಯ ಮಲ್ಯಾಡಿಯಿಂದ ಶ್ರೀ ಕ್ಷೇತ್ರವನ್ನು ತಲುಪಿದೆ. 1960ನೇ ಇಸವಿಯ ಟಾಟಾ 1210ಡಿ ಮಾಡೆಲ್ ಹಳೆ ಲಾರಿಯು ಇನ್ನೂ ಮುಂದೆ ಹೊಸ ಗೆಟಪ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಕಾಣಸಿಗಲಿದೆ.

ಮಲ್ಯಾಡಿ ಗ್ಯಾರೇಜಿನಲ್ಲಿ ಹೊಸ ಲುಕ್..!
ಸತತ 40 ವರ್ಷಗಳಿಂದ ಟ್ರಕ್ ಬಾಡಿ ಬಿಲ್ಡ್ ಮಾಡುವುದರಲ್ಲಿ ಅನುಭವಿ ಕೆಲಸಗಾರರಾಗಿರುವ ಮಲ್ಯಾಡಿ ಶ್ರೀ ಗಜಾನನ ಟ್ರಕ್ ಬಾಡಿ ಬಿಲ್ಡರ್ಸ್ ಮತ್ತು ವೆಲ್ಡಿಂಗ್ ವರ್ಕ್ಸ್ ಮಾಲಿಕ ಮಂಜುನಾಥ್ ಆಚಾರ್ ಇವರ ನೇತೃತ್ವದ ತಂಡ ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳದ ಒಡೆತನದಲ್ಲಿರುವ 1960ನೇ ಇಸವಿಯ ಟಾಟಾ 1210ಡಿ ಮಾಡೆಲ್‌ನ 62 ವರ್ಷದ ಹಳೆ ಲಾರಿಯನ್ನು ಸತತ 5 ತಿಂಗಳ ಕಾಲ ಕೆಲಸದ ಅವಧಿಯಲ್ಲಿ ಹೊಸ ಲುಕ್‌ನೊಂದಿಗೆ ವಿನ್ಯಾಸಗೊಳಿಸಿದ್ದಾರೆ.

ಕಾವ್ರಾಡಿ ಲೀಲಾವತಿ ವಾಸುದೇವ ಶೇಟ್ ಕುಟುಂಬದವರು 2021 ನ.10ರಂದು ವಾಹನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೀಡಿದ್ದರು. ಕಳೆದ 5 ತಿಂಗಳ ಹಿಂದೆ ಖಾವಂದರರ ಸೂಚನೆ ಮೇರೆಗೆ ಈ ಹಳೆ ಲಾರಿಯನ್ನು ಪುನರ್ ವಿನ್ಯಾಸಕ್ಕೆ ನೀಡಲಾಗಿತ್ತು.

ಕ್ಷೇತ್ರದಿಂದ 2ನೇ ಲಾರಿಗೆ ಅವಕಾಶ: ಈ ಹಿಂದೆ ಉದ್ಯಮಿ ಹಾಗೂ ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ ಇವರ ಒಡೆತನದ 1973ನೇ ಇಸವಿಯ ಟಾಟಾ ಕಂಪನಿಯ 1210ಡಿ ಲಾರಿಯನ್ನು ಕ್ಷೇತ್ರಕ್ಕೆ ನೀಡುವಾಗ ಆ ಸಮಯದಲ್ಲಿ ಮಂಜುನಾಥ್ ಆಚಾರ್ ಅವರ ವಾಹನಗಳ ಮರು ವಿನ್ಯಾಸದ ಕೈಚಳಕವನ್ನು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಗಮನಿಸಿದ್ದರು. ಈ ನೆಲೆಯಲ್ಲಿ ಶಿವರಾಮ ಶೆಟ್ಟಿಯವರ ಲಾರಿಯನ್ನು ಪುನರ್ ವಿನ್ಯಾಸಗೊಳಿಸಲು ಆಚಾರ್ ಇವರಿಗೆ ಖಾವಂದರರು ಅವಕಾಶ ನೀಡಿದ್ದರು. ಆ ಲಾರಿಯ ಮರುವಿನ್ಯಾಸವನ್ನು ನೋಡಿದ ಖಾವಂದರರು ಖುಷಿಪಟ್ಟು 2ನೇ ಬಾರಿಗೆ ಹಳೆ ಗುಜುರಿ ಲಾರಿಯನ್ನು ನೀಡಿ ಮರು ವಿನ್ಯಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು.

ಖಾವಂದರದೇ ಸ್ಕೇಚ್…
ಶಿವರಾಮ ಶೆಟ್ಟಿ ಇವರ ಒಡೆತನದ 1973ನೇ ಇಸವಿಯ ಟಾಟಾ ಕಂಪನಿಯ 1210ಡಿ ಲಾರಿಯನ್ನು ಕರಾವಳಿ ಭಾಗಗಳಲ್ಲಿ ಹಿಂದೆ ಇರುತ್ತಿದ್ದ ಹಳೆ ಲಾರಿಯ ಶೈಲಿಯಲ್ಲಿಯೇ ಪುನರ್ ನಿರ್ಮಾಣ ಮಾಡಲಾಗಿತ್ತು. ಈ ಬಾರೀ ನೀಡಲಾದ 62ವರ್ಷಗಳ ಹಿಂದಿನ ಲಾರಿಗೆ ಖಾಂವದರರೇ ಸ್ಕೇಚ್ ತಯಾರಿಸಿ ಲಾರಿ ಸಂಪೂರ್ಣವಾಗಿ ಈ ಬಾರಿ ಕೇರಳ ಶೈಲಿಯಲ್ಲಿಯ ಹಳೆ ಲಾರಿಗಳಂತೆ ಸಿದ್ದಪಡಿಸಲು ನೀಲನಕ್ಷೆ ತಯಾರಿಸಿ ಲಾರಿಯನ್ನು ಮಲ್ಯಾಡಿಯ ಗ್ಯಾರೇಜಿನ ಮಾಲಿಕರ ಕೈಗೆ ನೀಡಲಾಗಿತ್ತು.

ಈ ಲಾರಿಯನ್ನು ಸಂಪೂರ್ಣವಾಗಿ ರಿಪೇರಿ ಮಾಡಲು 1 ತಿಂಗಳ ಕಾಲಾವಕಾಶ ಬೇಕಾಗಿದ್ದರೂ ಲಾರಿಯ ಬಿಡಿಭಾಗಗಳು ಸಿಗದೇ ಇರುವ ಕಾರಣದಿಂದ 5 ತಿಂಗಳ ಅವಧಿಯಲ್ಲಿ ಕೆಲಸ ಮಾಡಿ ಲಾರಿಯನ್ನು ಹೊಸ ಲುಕ್‌ನೊಂದಿಗೆ ನಿರ್ಮಿಸಲಾಗಿದೆ. ಮಾರುಕಟ್ಟೆಯಲ್ಲಿ ಹೆಡ್‌ಲೈಟ್‌ಗಾಗಿ 3 ತಿಂಗಳ ಕಾಲ ಕಾಯಲಾಗಿದೆ. ಈಗಾಗಲೇ ಲಾರಿಯನ್ನು ಸಂಪೂರ್ಣ ರೀ ಪೀಟಿಂಗ್ ಮಾಡಲಾಗಿದ್ದು ಸೈಡ್ ಮಡ್‌ಗಾರ್ಡ್, ಮುಂಭಾಗದ ಬಂಪರ್, ಫ್ಲಾಟ್‌ಫಾರಂ, ಗ್ಲಾಸ್ ಪ್ರೇಮ್‌ಗಳು ಮಾರುಕಟ್ಟೆಯಲ್ಲಿ ಸಿಗದೇ ಇರುವುದರಿಂದ ಇವರೇ ತಯಾರಿಸಿ ಲಾರಿಗೆ ಅಳವಡಿಸಿದ್ದಾರೆ. ಲಾರಿಯ ಟಿಂಕರಿಂಗ್ ಕೆಲಸ ಸಂಪೂರ್ಣವಾಗಿ ಮಾಡಲಾಗಿದ್ದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ನಿತೀಶ್ ಆಚಾರ್ ಮಲ್ಯಾಡಿ.

ಲಾರಿಯ ಪುನರ್ ನಿರ್ಮಾಣದ ಈ ಕಾಮಗಾರಿಯಲ್ಲಿ ವಿಘ್ನೇಶ್ ಆಚಾರ್, ನಿತೀಶ್ ಆಚಾರ್, ಹರೀಶ್, ಲಾರೆನ್ಸ್ ಬೆರೆಟ್ಟೂ, ರಮೇಶ್, ಕೃಷ್ಣಯ್ಯ ಆಚಾರ್ ಇವರ ಕೈಚಳಕದಲ್ಲಿ ಹಳೆ ಲಾರಿಯನ್ನು ವಿನ್ಯಾಸಗೊಳಿಸಿದ್ದಾರೆ. ಸದಾಶಿವ ಪೈಂಟರ್ ಗೋಪಾಡಿ ಇವರ ಬಳಗ ಅಂದವಾದ ಬಣ್ಣವನ್ನು ಬಳಿದು ಲಾರಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕುಂಭಾಸಿಯ ಸ್ಟಾರ್ ಗೋಪಾಲ್ ಇವರು ಲಾರಿಯ ಎಲೆಕ್ಟ್ರಿಕಲ್ ಕೆಲಸವನ್ನು ನಿರ್ವಹಿಸಿದ್ದು ಎಲ್ಲಾ ಎಲೆಕ್ಟ್ರಿಕಲ್ ವಿದ್ಯುತ್ ಲೈಟ್‌ಗಳು ಸೇರಿದಂತೆ ಇಂಡಿಕೇಟರ್ ಮತ್ತು ವೈಪರ್‌ಗಳು ಕಾರ‍್ಯನಿರ್ವಹಿಸುತ್ತಿದೆ.
ಕೇರಳ ಶೈಲಿಯ ಲಾರಿಯ ಹಳೆ ಕಾಲದ ವಿನ್ಯಾಸ.
ಮರಗಳ ಬಳಕೆಯಿಂದ ಕ್ಯಾಬೀನ್‌ನಲ್ಲಿ ಕಳೆ‌ ಹೆಚ್ಚಿದೆ.
ಕೇರಳ ಶೈಲಿಯ ಪೈಂಟಿಂಗ್‌ನಿಂದ ಲಾರಿಗೆ ಹೊಸ ಲುಕ್ ಬಂದಿದೆ.

ನಮ್ಮ ಭಾಗ್ಯವೆಂಬಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2ನೇ ಬಾರಿಗೆ ಮತ್ತೊಂದು ಲಾರಿಯ ಪುನರ್ ನಿರ್ಮಾಣಕ್ಕೆ ಪೂಜ್ಯ ಖಾವಂದರರು ಅವಕಾಶ ಮಾಡಿಕೊಟ್ಟಿದ್ದಾರೆ. ಬಹಳಷ್ಟು ಖುಷಿ ತಂದಿದೆ. ಖಾವಂದರರ ಮಾರ್ಗದರ್ಶನದಲ್ಲಿ ಅವರ ಇಚ್ಛೆಯಂತೆ ವಿಶೇಷವಾಗಿ ಅಂದವಾಗಿ ಪುನರ್ ನಿರ್ಮಾಣ ಮಾಡಿದ್ದೇವೆ. ಇದೊಂದು ನಮ್ಮ ಸೌಭಾಗ್ಯ.
– ಮಂಜುನಾಥ್ ಆಚಾರ್ ಮಲ್ಯಾಡಿ, ಗ್ಯಾರೇಜು ಮಾಲಿಕರು.

Comments are closed.