ಕರಾವಳಿ

ಕುಂದಾಪುರ ಅಂಬೇಡ್ಕರ್ ನಗರದ ಕೊರಗರ ನಿವಾಸದಲ್ಲಿ ದೀಪಾವಳಿ ಆಚರಿಸಿದ ಅದಮಾರು ಶ್ರೀ ಈಶಪ್ರಿಯತೀರ್ಥರು (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ನಗರದ ಜೆ.ಎಲ್.ಬಿ ರಸ್ತೆಯಲ್ಲಿನ ಅಂಬೇಡ್ಕರ್ ನಗರದಲ್ಲಿನ ಕೊರಗ ಕಾಲನಿಯಲ್ಲಿ ದೀಪಾವಳಿ ಸಂಭ್ರಮ ಬುಧವಾರ ಜೋರಾಗಿದ್ದು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ‌ ಶ್ರೀಪಾದರು ಇಲ್ಲಿನ ರಾಧಾ ಅವರ ‘ಸುರೇಶ ರಾಧಾ’ ನಿವಾಸದಲ್ಲಿ ಪೂಜೆ ನೆರವೇರಿಸಿ, ಅಂಬೇಡ್ಕರ್ ಸಮುದಾಯ ಭವನದಲ್ಲಿ ದೀಪ ಪ್ರಜ್ವಲನೆಗೈದು ದೀಪಾವಳಿ ಸಂಭ್ರಮಕ್ಕೆ ಚಾಲನೆ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ‌ಸಂಘದ ಸಾಮರಸ್ಯ ವೇದಿಕೆ ಕುಂದಾಪುರ ವತಿಯಿಂದ ‘ಬೆಳಕು’ ಕಾರ್ಯಕ್ರಮ ಆಯೋಜಿಸಿದ್ದು ಕುಂದಾಪುರದ ಶ್ರೀ‌ ಕುಂದೇಶ್ವರ ದೇವಸ್ಥಾನದಿಂದ ಪೂಜಿಸಲ್ಪಟ್ಟ ದೀಪದೊಂದಿಗೆ ಅಂಬೇಡ್ಕರ್ ನಗರದ ತನಕ ಪುರಮೆರವಣಿಗೆ ಮೂಲಕ ಆಗಮಿಸಲಾಯಿತು.

ಈ ಸಂದರ್ಭ ಮಾತನಾಡಿದ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ‌ ಶ್ರೀಪಾದರು, ಜೊತೆಗೆ ಕೂತು ತಿನ್ನುವುದರಿಂದ ಐಕ್ಯತೆ ಬರುವುದಿಲ್ಲ, ಬದಲಾಗಿ ನಮ್ಮವರು ಎಂಬ ಭಾವನೆಯಿಂದ ಐಕ್ಯತೆ ಮೂಡುತ್ತದೆ. ಸಾಧನೆಗಾಗಿ ಕೆಲವು ನಿಯಮಗಳು, ಆಚರಣೆಗಳು ಹಾಗೂ ಬದಲಾವಣೆಗಳು ಅನಿವಾರ್ಯ. ಪ್ರಪಂಚದಲ್ಲಿ ಎಲ್ಲವೂ ಒಂದಕ್ಕೊಂದು ನಿರ್ದಿಷ್ಟ ಬದಲಾವಣೆಗಳಿದ್ದು ಅದಕ್ಕೆ ಹೊಂದಿಕೊಳ್ಳಬೇಕು. ಬೇರೆಬೇರೆ ವರ್ಗಗಳಲ್ಲಿ ಕೆಲಸ ಮಾಡುವ ಜನರು ಒಗ್ಗೂಡಿ ಒಂದು ಸಾಮಾಜವಾಗುತ್ತದೆ. ಅವರ ಕೊಡುಗೆಗಳ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಆಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಎಲ್ಲಾ ವರ್ಗದವರಿದ್ದು ದೇಶ ಕಟ್ಟುವ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಆರ್.ಎಸ್.ಎಸ್ ನಮ್ಮ ಸಮಾಜದ ಅಂಗವಾಗಿದ್ದು ಎಲ್ಲರಿಗೂ ಇದರ ಬಗ್ಗೆ ಉತ್ತಮ ಮಾಹಿತಿಯಿದೆ.

ಪೇಜಾವರ ಶ್ರೀಗಳು 51 ವರ್ಷದ ಸಂದರ್ಭ ಅಂಬೇಡ್ಕರ್ ನಗರಕ್ಕೆ ಬಂದಿದ್ದರು. ಮಹಾಭಾರತ ಕಾಲದಲ್ಲಿಯೇ ಕೆಲವು ಸಂದರ್ಭಗಳು ಇತ್ತು. ಆದರೆ ಅದನ್ನು ಅರಿಯದಿರುವ ಕೊರತೆ ಹಾಗೂ ಬಿಂಬಿಸುವ ಕೆಲವರ ಮನಸ್ಥಿತಿಗಳಿಂದ ಇತಿಹಾಸಗಳು ತಿಳಿಯದಾಗಿದೆ ಎಂದರು.

ಈ ಸಂದರ್ಭ ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ, ವಾರ್ಡ್ ಸದಸ್ಯ ಹಾಗೂ ಸಮುದಾಯದ ಮುಖಂಡ ಪ್ರಭಾಕರ್ ವಿ, ಸದಸ್ಯೆ ವನಿತಾ, ನಾಮನಿರ್ದೇಶಿತ ಸದಸ್ಯರಾದ ದಿವಾಕರ ಕಡ್ಗಿ, ರತ್ನಾಕರ್, ಪುಷ್ಪಾ ಶೇಟ್, ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಂದಾಪುರ ಸಂಘ ಚಾಲಕ ಸತೀಶ್ಚಂದ್ರ ಕಾಳಾವರ್ಕರ್, ಮಂಗಳೂರು ವಿಭಾಗ ಕಾರ್ಯವಾಹ್ ವಾದಿರಾಜ್ ಭಟ್, ಜಿಲ್ಲಾ ಸೇವಾ ಪ್ರಮುಖ್ ಮುರಳೀಧರ್ ಜಪ್ತಿ, ಆರ್.ಎಸ್.ಎಸ್ ಸ್ವಯಂಸೇವಕರಾದ ರಾಜೇಶ್ ಕಾವೇರಿ, ಶಂಕರ್ ಅಂಕದಕಟ್ಟೆ, ಗಿರೀಶ್ ಕುಂದಾಪುರ, ಸತ್ಯನಾರಾಯಣ ಮಂಜ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್, ಕೊಂಕಣ ಖಾರ್ವಿ ಸಮಾಜದ ಜಯಾನಂದ ಖಾರ್ವಿ, ಪ್ರಮುಖರಾದ ಭಾಸ್ಕರ ಬಿಲ್ಲವ, ಮಂಜು ಬಿಲ್ಲವ, ಪದ್ಮನಾಭ ಶೆಣೈ, ರೂಪಾ ಪೈ, ಕಿಶೋರ್ ಕುಮಾರ್, ಪ್ರದೀಪ್ ಉಪಾಧ್ಯಾಯ ಮೊದಲಾದವರಿದ್ದರು.

Comments are closed.