ಉಡುಪಿ/ಶಿವಮೊಗ್ಗ: ಕೊಲ್ಲೂರು- ಕೊಡಚಾದ್ರಿ ಕೇಬಲ್ ಕಾರ್ ನಿರ್ಮಾಣದ ವಿಚಾರದಲ್ಲಿ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಪತ್ರಿಕಾ ಪ್ರಕಟಣೆ ಮೂಲಕ ವಿಸ್ತೃತ ಮಾಹಿತಿ ನೀಡಿದ್ದಾರೆ.
ದಕ್ಷಿಣ ಭಾರತದ ಪಶ್ಚಿಮಘಟ್ಟದಲ್ಲಿ ಸಮುದ್ರಮಟ್ಟದಿಂದ 1343 ಮೀಟರ್ ಎತ್ತರದ ಕೊಡಚಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆಯಲ್ಲಿಯ ಆಧ್ಯಾತ್ಮಿಕ ಹಿನ್ನಲೆಯ ಪ್ರಮುಖ ಪ್ರವಾಸಿ ತಾಣವಾಗಿದ್ದು ಆದಿ ಶಂಕರಾಚಾರ್ಯರವರು ತಪಸ್ಸು ಮಾಡಿ ಕೊಲ್ಲೂರಿನಲ್ಲಿ ಶ್ರೀ ಮೂಕಾಂಬಿಕೆ ದೇವಸ್ಥಾನ ಪ್ರತಿಷ್ಠಾಪಿಸಿದ ಪುಣ್ಯ ಸ್ಥಳವಾಗಿರುತ್ತದೆ. ದಕ್ಷಿಣ ಭಾರತದಿಂದ ಬರುವ ಭಕ್ತರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ದರ್ಶನ ಮಾಡಿದ ನಂತರ ಕೊಡಚಾದ್ರಿಯ ಸರ್ವಜ್ಞಪೀಠ ದರ್ಶನ ಮಾಡಲು ಅತೀ ಕ್ಲಿಷ್ಟಕರವಾದ ರಸ್ತೆಯಲ್ಲಿ ನುರಿತ ಚಾಲಕರ ಜೀಪ್‌ನಲ್ಲಿ ಸುಮಾರು 40 ಕಿ.ಮೀ ಪ್ರಯಾಣಿಸಿ ನಂತರ 2 ಕಿ.ಮೀ ದೂರ ಅತೀ ಕಡಿದಾದ ಎತ್ತರದ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಕೊಡಚಾದ್ರಿ ಬೆಟ್ಟದ ತಪ್ಪಲಿನ ಸೌರ್ಪಣಿಕ ನದಿ ತೀರದಲಿದ್ದು ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾಗಿರುತ್ತದೆ.
ಶಿವಮೊಗ್ಗ ಕ್ಷೇತ್ರದ ಸಂಸದರಾಗಿ ಕೊಡಚಾದ್ರಿ ಹಾಗು ಕೊಲ್ಲೂರು ಕ್ಷೇತ್ರಗಳ ಪ್ರಾಮುಖ್ಯತೆ ಹಾಗು ಇಲ್ಲಿ ರಸ್ತೆ ಸಂಪರ್ಕಕ್ಕಿರುವ ಆಡಚಣೆಗಳನ್ನು ಕೇಂದ್ರ ಭೂಸಾರಿಗೆ ಸಚಿವರಿಗೆ ಮನದಟ್ಟು ಮಾಡಿಕೊಡಲು ಯಶಸ್ವಿಯಾದ ಪರಿಣಾಮ ಕೇಂದ್ರ ಭೂಸಾರಿಗೆ ಮಂತ್ರಾಲಯವು ಪರ್ವತಮಾಲಾ ಯೋಜನೆಯಡಿ ಸುಮಾರು 300 ಕೋಟಿ ವೆಚ್ಚದ ಕೇಬಲ್ ಕಾರ್ ನಿರ್ಮಾಣ ಮಾಡುವ ಯೋಜನೆಯ ಡಿ.ಪಿ.ಆರ್ ತಯಾರಿಸಲು ಅನುಮೋದನೆ ನೀಡಿ GACOR FOR NHLML (National Highway Logistics Management Limited) ಯೋಜನೆ ಅನುಷ್ಠಾನಗೊಳಿಸುವ ಜವಾಬ್ದಾರಿವಹಿಸಿ ಕೆ & ಜೆ ಕನ್ಸನ್ಸಿ ಹೊಸ ದೆಹಲಿ ಇವರಿಗೆ ಯೋಜನೆಯ ಡಿ.ಪಿ.ಆರ್ ತಯಾರಿಸಲು ಕಾರ್ಯಾದೇಶ ನೀಡಿದೆ.
ಅದರಂತೆ NHLML ತಂಡ ನವೆಂಬರ್ 19 ಮತ್ತು 20 ರಂದು ಯೋಜನೆ ಪ್ರಾರಂಬದ ಮತ್ತು ಅಂತ್ಯದ ಸ್ಥಳಗಳನ್ನು ಗುರ್ತಿಸಿ ಸರ್ವೆ ಕೆಲಸ ಪೂರ್ಣಗೊಳಿಸಿದ್ದು ಸುಮಾರು 6 ಪಥ ನಕ್ಷೆಗಳನ್ನು (Alignment plan) ತಯಾರಿಸಿ ಅದರಲ್ಲಿ ಬರಬಹುದಾದ ಅಡಚಣೆಗಳನ್ನು ನಿವಾರಿಸಿ ಪಥ ನಕ್ಷೆ ಅಂತಿಮಗೊಳಿಸಲು ಸಂಬಂಧಿಸಿದ ಪ್ರವಾಸೋದ್ಯಮ, ಅರಣ್ಯವನ್ಯಜೀವಿ ವಿಭಾಗ, ಕಂದಾಯ ಹಾಗು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾನ್ಯ ಸಂಸದರ ನೆರವಿನೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು ಡಿ.ಪಿ.ಆರ್ ತಯಾರಿಸಲು ಮುಂದಡಿಯಿಟ್ಟಿದ್ದಾ.
NHLML ಅಧಿಕಾರಿಗಳ ತಂಡ ಮಾನ್ಯ ಸಂಸದರೊಂದಿಗೆ ಸಭೆನಡೆಸಿ ಕೇಬಲ್ ಕಾರ್ ನಿರ್ಮಾಣಕ್ಕೆ ಇರುವ ಸಂಭಾವ್ಯ ಅಡೆತಡೆ ಹಾಗು ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಿ ಕೊಡಚಾದ್ರಿ ಬೆಟ್ಟದ ಸರ್ವಜ್ಞ ಪೀಠದಿಂದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಎದುರು ಇರುವ ಗೋಶಾಲೆ ಜಾಗದ ಮತ್ತು ಇತರೆ ಜಾಗಗಳ ವಿವರಗಳನ್ನು ನೀಡಿದ್ದು ಸಂಸದರು ಸದರಿ ಯೋಜನೆಯ ಅಂತಿಮ ಪಥನಕ್ಷೆ ಹಾಗು ಡಿ.ಪಿ.ಆರ್ ಗೆ ಶೀಘ್ರ ಅನುಮೋದನೆ ಪಡೆಯಲು ಅಧಿಕಾರಿಗಳ ತಂಡಕ್ಕೆ ಸೂಚಿಸಿದ್ದು, ಅಧಿಕಾರಿಗಳ ತಂಡ 1 ತಿಂಗಳ ಅವಧಿಯೊಳಗೆ ಡಿ/ಪಿ.ಆರ್ ತಯಾರಿಸಿ ಮಂಜೂರಾತಿ ಪಡೆದು ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿರುತ್ತಾರೆ.
ಹಾಲಿ ಇರುವ 40 ಕಿ.ಮೀ ಉದ್ದದ ರಸ್ತೆಯ ಪೈಕಿ ಸುಮಾರು 11 ಕಿ.ಮೀ ಉದ್ದದ ಕಡಿದಾದ ರಸ್ತೆಯು ಕುದುರೆಮುಖ ವನ್ಯಜೀವಿ ವಿಭಾಗದಡಿ ಬರುತ್ತಿದ್ದು ರಸ್ತೆ ಅಭಿವೃದ್ಧಿ ಅಸಾಧ್ಯ ವಾಗಿದ್ದು ಇದರಲ್ಲಿ ಸಂಚರಿಸುವುದು ಅತೀ ಕ್ಲಿಷ್ಟಕರ ಹಾಗು ಅಪಾಯಕಾರಿಯಾಗಿರುತ್ತದೆ ಹಾಗು ಇದನ್ನು ಕ್ರಮಿಸಲು 2 ಗಂಟೆ ವ್ಯಯವಾಗುತ್ತಿರುತ್ತದೆ.
ಇದಕ್ಕೆ ಪರಾಯವಾಗಿ 6 ಕಿ.ಮೀ ಉದ್ದದ ಕೇಬಲ್ ಕಾರ್ ಮೂಲಕ ಪ್ರತಿನಿತ್ಯ ಸಾವಿರಾರು ಭಕ್ತರು ಹಾಗು ಪ್ರವಾಸಿಗರು ಕೊಲ್ಲೂರು ದೇವಸ್ಥಾನದಿಂದ ಕೊಡಚಾದ್ರಿ ಸರ್ವಜ್ಞ ಪೀಠಕ್ಕೆ ನಿರಾಯಾಸವಾಗಿ ಕೇವಲ 20 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದ್ದು ಇದೊಂದು ದಕ್ಷಿಣ ಭಾರತದ ಹಾಗೂ ಕ್ಷೇತ್ರದ ಜನತೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿರುತ್ತದೆ. 3 ವರ್ಷಗಳಿಂದ ಯೋಜನೆಯ ಮಂಜೂರಾತಿಗೆ ಮಾಡಿದ ಪ್ರಯತ್ನದ ಫಲವಾಗಿ ಸದರಿ ಯೋಜನೆಗೆ ಕೇಂದ್ರ ಭೂಸಾರಿಗೆ ಮಂತ್ರಾಲಯವು ಅನುಮೋದನೆ ನೀಡಿದ್ದು ಇದು ತೀವ್ರ ಸಂತಸ ತಂದಿರುತ್ತದೆ. ಹಾಗು ಯೋಜನೆಯ ಅನುಷ್ಠಾನಕ್ಕೆ ಕ್ರಮವಹಿಸಿರುವ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಜೈರಾಂ ಗಡ್ಕರಿಯವರಿಗೆ ಈ ಭಾಗದ ಜನತೆಯ ಪರವಾಗಿ ಆಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಸಂಸದ ಬಿ.ವೈ ರಾಘವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.