(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಿಯಾರದಲ್ಲಿ ಹಲವು ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿ ಮುಗಿದಿದ್ದು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.
ಜಿಲ್ಲೆಯ ಬ್ರಹ್ಮಾವರದಿಂದ ಜನ್ನಾಡಿ ಮಾರ್ಗವಾಗಿ ಸಿದ್ದಾಪುರ ತಲುಪುವ ರಸ್ತೆ ಇದಾಗಿದೆ. ಈ ಹಿಂದೆ ಶಿರಿಯಾರ ಗ್ರಾ.ಪಂ ವ್ಯಾಪ್ತಿಗೊಳಪಡುವ ಶಿರಿಯಾರ ಮುಖ್ಯ ಪೇಟೆ ಬಳಿಯಲ್ಲಿದ್ದ ಬ್ರಿಡ್ಜ್ ವಾಹನ ಸವಾರರಿಗೆ ಕಂಟಕಪ್ರಾಯವಾಗಿತ್ತು. ಇಕ್ಕಟ್ಟಾಗಿದ್ದರಿಂದ ಎದುರುಗಡೆಯಿಂದ ಬರುವ ವಾಹನಗಳ ಸವಾರರು ಸುಗಮ ಸಂಚಾರಕ್ಕೆ ಸವಾರರು ಪರದಾಡುವಂತಾಗಿತ್ತು. ಇದೀಗಾ ಆ ಪ್ರದೇಶದಲ್ಲಿ ಸೇತುವೆ ಹಾಗೂ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು ಸುಗಮ ವಾಹನ ಸಂಚಾರಕ್ಕೆ ಅಣಿಯಾಗಿದೆ.
(ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ)
ಉಡುಪಿ ಮಾರ್ಗವಾಗಿ ಬ್ರಹ್ಮಾವರ ಬಾರ್ಕೂರು ಮೂಲಕ ಶಿರಿಯಾರ ತೆರಳಿದರೆ ಜನ್ನಾಡಿಯಿಂದ ಹಾಲಾಡಿ, ಅಮಾಸೆಬೈಲು, ಆಗುಂಬೆ ಸಹಿತ ಮಲೆನಾಡು ತಲುಪಲು ಸುಲಭ ದಾರಿಯಿದು. ಈ ರಸ್ತೆ ಹಂತಹಂತವಾಗಿ ಅಭಿವೃದ್ಧಿಯಾದರೂ ಕೂಡ ಪ್ರಮುಖ ಪೇಟೆಯಾಗಿರುವ ಶಿರಿಯಾರ ಬಳಿಯ ಸೇತುವೆ ಮಾತ್ರ ಇದಕ್ಕೊಂದು ಕಪ್ಪು ಚುಕ್ಕೆಯಾಗಿತ್ತು. ಹಲವು ಅವಘಡಗಳು ನಿತ್ಯಸಂಭವಿಸಿದ್ದವು. ಸಾರ್ವಜನಿಕರು ಸಹಿತ ವಾಹನ ಸವಾರರ ಸಮಸ್ಯೆಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಸ್ಪಂದಿಸಿದ್ದರು. ಅವರ ಮುತುವರ್ಜಿಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಸುರಕ್ಷತಾ ಕಾಮಗಾರಿಯಡಿಯಲ್ಲಿ ಅಂದಾಜು 4 ಕೋಟಿ 25 ಲಕ್ಷ ವೆಚ್ಚದಲ್ಲಿ ಬ್ರಿಡ್ಜ್ ಹಾಗೂ ಇತರೇ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ.
ಸೇತುವೆ ಹಾಗೂ ರಸ್ತೆ ಕಾಮಗಾರಿ ಮುಗಿದಿದ್ದು ಸೂಚನಾ ಫಲಕಗಳು, ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಕೆ, ರಸ್ತೆಗೆ ರಿಫ್ಲೆಕ್ಟರ್ ಅಳವಡಿಕೆ ಸಹಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಊರಿಗೊಂದು ಹೆಮ್ಮೆಯ ಕೆಲಸ ಇದಾಗಿದೆ ಎಂದು ಸ್ಥಳೀಯ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ವಡ್ಡರ್ಸೆ ರಾಜೀವ ಶೆಟ್ಟಿ ಹೇಳಿದ್ದಾರೆ.
ಶಿರಿಯಾರ ಪೇಟೆ ಸಮೀಪದ ಸೇತುವೆ ಕಿರಿದಾಗಿ, ಅಪಘಾತ ವಲಯವಾಗಿತ್ತು. ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮುತುವರ್ಜಿಯಲ್ಲಿ ಈ ಕಾಮಗಾರಿ ಉತ್ತಮ ರೀತಿಯಲ್ಲಿ ನಡೆದಿದೆ. ಶಿರಿಯಾರ ಪೇಟೆ ಎನ್ನುವುದು ಇದೀಗಾ ನಗರದಂತೆ ಕಾಣುವಂತಾಗಿದೆ.
– ಸುಧೀಂದ್ರ ಶೆಟ್ಟಿ (ಶಿರಿಯಾರ ಗ್ರಾ.ಪಂ ಅಧ್ಯಕ್ಷ)
Comments are closed.