ಕರಾವಳಿ

ಸರಕಾರಿ ಶಾಲೆ ಮೇಲಿನ ಅಭಿಮಾನ; ಮೇಲ್ಕಟ್ಕೆರೆ ಶಾಲೆಗೆ ವಾಹನ ಕೊಡುಗೆ ನೀಡಿದ ದಾನಿ

Pinterest LinkedIn Tumblr

ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಲು ಪಣ

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಸ್ವತಂತ್ರ ಪೂರ್ವದಲ್ಲಿ ಕಟ್ಟಿದ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಮೇಲ್ಕಟ್ಕೆರೆ ಶಾಲೆಯಲ್ಲಿ ಇದೀಗಾ ಮಕ್ಕಳ ಸಂಖ್ಯೆ ವೃದ್ಧಿಯಾಗುತ್ತಿದೆ. ಆರಂಭದ ಹಲವು ದಶಕಕಗಳಿಂದ ಕಮ್ಮಿ ಸಂಖ್ಯೆಯ ಮಕ್ಕಳಿದ್ದ ಕನ್ನಡ ಶಾಲೆ ಇತ್ತೀಚೆಗೆ‌ ದಾನಿಗಳ ಸಹಕಾರದಲ್ಲಿ ಉನ್ನತೀಕರಣಕ್ಕೇರುತ್ತಿದ್ದು ಸ್ಥಳೀಯ ಭಾಗದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ‌ ದಾಖಲಿಸಲು ಇಚ್ಚಿಸುತ್ತಿದ್ದಾರೆ.

1946ರಲ್ಲಿ ಪ್ರಾರಂಭವಾದ ಮೇಲ್ಕಟ್ಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೆಳವಣಿಗೆಯಿದು. ಕೋಟೇಶ್ವರ-ಹಾಲಾಡಿ ಮುಖ್ಯರಸ್ತೆಯ ಸನಿಹದಲ್ಲಿರುವ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯ ಮಕ್ಕಳು ಕಲಿಯುತ್ತಾರೆ. ಉತ್ತಮ ಶೈಕ್ಷಣಿಕ ವ್ಯವಸ್ಥೆ, ಬೋಧಕ ಸಿಬ್ಬಂದಿಗಳ ಕಾರ್ಯಬದ್ಧತೆ ಗ್ರಾಮೀಣ ಭಾಗದ ಸರಕಾರಿ ಕನ್ನಡ ವಿದ್ಯಾಸಂಸ್ಥೆ ಮುನ್ನೆಲೆಗೆ ಬರಲು ಸಾಧ್ಯವಾಗಿದ್ದು ಜೊತೆಗೆ ಈ ಶಾಲೆ ಬಗ್ಗೆ ದಾನಿಗಳು ವಹಿಸಿದ ಅಪಾರ ಕಾಳಜಿ ಸರ್ಕಾರಿ ಶಾಲೆಯತ್ತ ಗ್ರಾಮದ ವಿದ್ಯಾರ್ಥಿಗಳನ್ನು ಸೆಳೆಯಲು ಸಹಕಾರಿಯಾಗಿದೆ‌. ಮೊದಲು ಬೆರಳೆಣಿಕೆ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚೆಗೆ ಐದಾರು ವರ್ಷದಿಂದ ಏರಿದ್ದು 96 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನೂ ಕೆಲ ಸೌಕರ್ಯ ಅಗತ್ಯವಿದೆ….
ಒಬ್ಬರು ಪ್ರಭಾರ ಮುಖ್ಯಶಿಕ್ಷಕಿ ಸಹಿತ ಮೂವರು ಸಹಶಿಕ್ಷಕರು ಹಾಗೂ ಅತಿಥಿ ಶಿಕ್ಷಕರಿದ್ದಾರೆ. ಶಾಲೆಗೆ ಸುಸಜ್ಜಿತ ಕಟ್ಟಡ ಅಗತ್ಯವಿದ್ದು ಸರಕಾರದಿಂದ ಈಗಾಗಾಲೇ ಕಟ್ಟಡ ಮಂಜೂರಾಗಿದೆ. ಉಳಿದಂತೆ ಖಾಯಂ ಮುಖ್ಯಶಿಕ್ಷಕ ಹುದ್ದೆ, ಜಿ.ಪಿ.ಟಿ ಹುದ್ದೆ ಖಾಲಿಯಿದ್ದು ಇದು ಭರ್ತಿಯಾಗಬೇಕಿದೆ. ಅಲ್ಲದೆ ಈ ಸರಕಾರಿ ಶಾಲೆಯಲ್ಲಿ ಕುಡಿಯುವ ನೀರಿಗೆ ತತ್ವಾರವಿದ್ದು ಈ ಬಗ್ಗೆ ಇಲಾಖೆ, ಸರಕಾರ ಕ್ರಮ ವಹಿಸಬೇಕೆಂಬ ಆಗ್ರಹ ಪೋಷಕರದ್ದಾಗಿದೆ. ಕಳೆದ ಐದಾರು ವರ್ಷಗಳಿಂದ ಇಲ್ಲಿಗೆ ಸಮೀಪದವರಾದ ಅನಿವಾಸಿ ಕನ್ನಡಿಗ ವರದರಾಜ ಶೆಟ್ಟಿಯವರು ಅತಿಥಿ ಶಿಕ್ಷಕರಿಗೆ ಗೌರವಧನವನ್ನು ನೀಡುತ್ತಿದ್ದಾರೆ.

ಶಾಲಾ ವಾಹನ ಕೊಡುಗೆ ನೀಡಿದ ದಾನಿ:
ವಕ್ವಾಡಿ, ನವನಗರ, ಕಾಳಾವರ, ಮಾರ್ಕೋಡು, ಗರಗದ್ದೆ, ದೂಮನಕೆರೆ, ಅಣ್ತಮನಕಲ್ಲು ಸಹಿತ 6-7 ಕಿ.ಮೀ ದೂರದಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಕೆಲ ವರ್ಷದಿಂದ ಶಾಲೆಯಲ್ಲಿದ್ದ ದಾನಿಗಳು ನೀಡಿದ ವಾಹನ ದುರಸ್ಥಿಯಲ್ಲಿತ್ತು. ಈ ಬಗ್ಗೆ ಶಾಲೆ ಸಹಶಿಕ್ಷಕ ಗಣೇಶ್ ಕುಮಾರ್ ಶೆಟ್ಟಿಯವರು ಸ್ನೇಹಿತ ಉದ್ಯಮಿ ಕಮಲ್ ಕಿಶೋರ್ ಹೆಗ್ಡೆ ಮೊಳಹಳ್ಳಿಯವರ ಬಳಿ ಪ್ರಸ್ತಾಪವಿಟ್ಟಿದ್ದು ಇದಕ್ಕೆ ಸಹಮತ ನೀಡಿದ ಹೆಗ್ಡೆಯವರು ತಮ್ಮ ಅಜ್ಜ ಸೌಕೂರು ಹಿರಿಯಣ್ಣ ಶೆಟ್ಟಿ ಕಾಳಾವರ ಇವರ ಸ್ಮರಣಾರ್ಥವಾಗಿ ಅಂದಾಜು 6 ಲಕ್ಷ ಮೌಲ್ಯದಲ್ಲಿ ಸುಸಜ್ಜಿತ ಶಾಲಾ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಕಾಲ್ನಡಿಗೆ, ಆಟೋ ರಿಕ್ಷಾದಲ್ಲಿ ಬರುತ್ತಿದ್ದ ಮಕ್ಕಳ ಮನೆಗೆ 4 ಟ್ರಿಪ್ ಮೂಲಕ ಸಾಗಿ ಬೆಳಿಗ್ಗೆ ಕರೆತಂದು ಪುನಃ ಸಂಜೆ ಮನೆಗೆ ಬಿಡಲಾಗುತ್ತದೆ. 96 ವಿದ್ಯಾರ್ಥಿಗಳ ಪೈಕಿ 75 ಮಕ್ಕಳಿಗೆ ಈ ಶಾಲಾ ವಾಹನ ಸೌಕರ್ಯ ‌ಅನುಕೂಲವಾಗಿದೆ. ಈ ಬಾರಿ ವಾರ್ಷಿಕೋತ್ಸವದ ವೇಳೆ ದಾನಿಗಳು ಶಾಲಾ ವಾಹನ ನೀಡಿದ್ದು ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಶಾಲೆಯ ವಿದ್ಯಾರ್ಥಿ ನಾಯಕ ವ್ಯಾಸರಾಜ್ ಹೇಳುತ್ತಾರೆ. ಸರ್ಕಾರಿ ಶಾಲೆಯತ್ತ ವಿದ್ಯಾರ್ಥಿಗಳು ಆಕರ್ಷಿತರಾಗುವ ನಿಟ್ಟಿನಲ್ಲಿ ನಮ್ಮ ಶಾಲೆಗೆ ದಾನಿಗಳು ನೀಡಿದ ಸಹಕಾರ ಶ್ಲಾಘನೀಯ ಎಂದು ಪ್ರಭಾರ ಮುಖ್ಯಶಿಕ್ಷಕಿ ಸರಸ್ವತಿ ಹೇಳಿದರು.

76 ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಯಲ್ಲಿ ಮುನ್ನಡೆಯುತ್ತಿರುವ ಮೇಲ್ಕಟ್ಕೆರೆ ಹಿ.ಪ್ರಾ ಶಾಲೆಯಲ್ಲಿ ಈ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿದಿದ್ದು ಸದ್ಯ 96 ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣ ಚಟುವಟಿಕೆ ವೃದ್ಧಿ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ದಾನಿಗಳ ಸಹಕಾರ ಕೇಳಿದ್ದು ಸ್ನೇಹಿತರಾದ ಕಮಲ್ ಕಿಶೋರ್ ಹೆಗ್ಡೆಯವರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ವಾಹನ ಕೊಡುಗೆ ನೀಡಿ ನಮ್ಮ ಸರ್ಕಾರಿ ಶಾಲೆಗೆ ಪ್ರೋತ್ಸಾಹ ನೀಡಿದ್ದಾರೆ.
– ಗಣೇಶ್ ಕುಮಾರ್ ಶೆಟ್ಟಿ (ಶಾಲೆಯ ಸಹಶಿಕ್ಷಕ ಹಾಗೂ ಕುಂದಾಪುರ ವಲಯ ಶಿಕ್ಷಕರ ಸಂಘಟನೆ ಅಧ್ಯಕ್ಷ )

ಸರಕಾರಿ ಕನ್ನಡ ಶಾಲೆ ಉಳಿಸಿ, ಬೆಳೆಸುವ ಜೊತೆಗೆ ವಿದ್ಯಾರ್ಥಿಗಳನ್ನು ಸೆಳೆಯಲು ದಾನಿಗಳ ಸಹಕಾರ ಅಗತ್ಯ. 5-6 ಕಿ.ಮೀ ನಡೆದುಬರುತ್ತಿದ್ದ ವಿದ್ಯಾರ್ಥಿಗಳಿಗೆ ನೆರವಾಗಲು ಶಾಲಾ ವಾಹನ ನೀಡಿದ ದಾನಿ ಕಮಲ್ ಕಿಶೋರ್ ಅವರ ಸಹಕಾರ ಶ್ಲಾಘನೀಯ. ಈ ಶಾಲೆಯ ಶೈಕ್ಷಣಿಕ ಚಟುವಟಿಕೆ ಕೂಡ ಉತ್ತಮವಾಗಿದ್ದು ಪೋಷಕರ ಬೇಡಿಕೆಯಂತೆ ಶಾಲಾ ವಾಹನ ವ್ಯವಸ್ಥೆಯಾಗಿದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು 20ರಿಂದ 30 ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಲಿದೆ.
– ರಾಜಶೇಖರ್ (ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ)

Comments are closed.